ಮೊಳಕಾಲ್ಮುರು: ಪಟ್ಟಣ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಿಗೆ ಬುಧವಾರ ತಹಶೀಲ್ದಾರ್ ಟಿ.ಜಗದೀಶ್ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಮಾರುತಿ ಬಡಾವಣೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ್ದರು.
‘ಭೇಟಿ ವೇಳೆ ಶೌಚಾಲಯ ಹಾಗೂ ಸ್ನಾನಗೃಹಗಳಲ್ಲಿ ಸ್ವಚ್ಛತೆ ಕೊರತೆ, ಬಕೆಟ್‌ಗಳು ಇಲ್ಲದಿರುವುದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಮೆನು ಪ್ರಕಾರ ಊಟ ನೀಡದಿರುವುದು, ಬಾಳೆಹಣ್ಣು, ಮೊಟ್ಟೆಯನ್ನು ಕಾಲ ಕಾಲಕ್ಕೆ ನೀಡದಿರುವ ಬಗ್ಗೆ ದೂರುಗಳು ಬಂದಿವೆ. ಸೋಪು, ಕೊಬ್ಬರಿ ಎಣ್ಣೆ, ಪೇಸ್ಟ್ ಕಿಟ್‌ಗಳನ್ನು ನೀಡದಿರುವುದು ಗಮನಕ್ಕೆ ಬಂದಿದೆ’ ಎಂದು ತಹಶೀಲ್ದಾರ್ ಹೇಳಿದರು.
‘ಪಟ್ಟಣದಿಂದ 3 ಕಿ.ಮೀ. ದೂರದಲ್ಲಿ ಈ ವಿದ್ಯಾರ್ಥಿ ನಿಲಯಗಳಿದ್ದು, ನಿತ್ಯ ಕಾಲೇಜಿಗೆ ನಡೆದುಕೊಂಡು ಹೋಗಬೇಕಿದೆ. ನೈಟ್ ಡ್ರೆಸ್‌ಗಳನ್ನು ನೀಡಿಲ್ಲ, 2 ವರ್ಷಗಳಿಂದ ಹೊಸ ಬೆಡ್‌ಶೀಟ್ ನೀಡಿಲ್ಲ, ಸೊಳ್ಳೆ ಪರದೆ ವ್ಯವಸ್ಥೆ ಇಲ್ಲದ ಕಾರಣ ಸೊಳ್ಳೆ ಕಾಟದಿಂದ ತತ್ತರಿಸಿ ಹೋಗಿದ್ದೇವೆ. ಜ್ವರ ಸೇರಿ ಇನ್ನಿತರೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ’ ಎಂದು ವಿದ್ಯಾರ್ಥಿಗಳು ದೂರಿದರು.
ಹಾಜರಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ‘ನಿಲಯದ ಮೇಲ್ವಿಚಾರಣೆಯನ್ನು ಬಿಸಿಎಂ ವಿಸ್ತರಣಾಧಿಕಾರಿ ಶೇಖರ್ ನೋಡಿಕೊಳ್ಳುತ್ತಿದ್ದು, ನಾವು ಬೇಡ ಎಂದರೂ ಮೇಲುಸ್ತುವಾರಿ ಹೊಣೆಯನ್ನು ನೋಡಿಕೊಳ್ಳುವಂತೆ ಒತ್ತಡ ಹಾಕಿದ್ದಾರೆ. ನಾನು ಇಲ್ಲಿ ಮುಖ್ಯ ಅಡುಗೆ ಕೆಲಸಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಾಜರಿ ಪುಸ್ತಕ, ನಿರ್ವಹಣೆ ಪುಸ್ತಕಗಳು ಶೇಖರ್ ಅವರ ಬಳಿ ಇವೆ’ ಎಂದು ಹೇಳಿದರು.
‘ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದ ಕಾರಣ ಭೇಟಿ ನೀಡಲಾಗಿತ್ತು. ಸ್ಥಳದಿಂದಲೇ ಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಿದ್ದು, ಲಿಖಿತವಾಗಿ ವರದಿ ಸಲ್ಲಿಸಿ ಕ್ರಮಕ್ಕೆ ಸೂಚಿಸಲಾಗುವುದು’ ಎಂದು ತಹಶೀಲ್ದಾರ್ ಹೇಳಿದರು.
ತಾತ್ಕಾಲಿಕ ಮೇಲ್ವಿಚಾರಕಿ ಮಾಧುರಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರಂಗಪ್ಪ, ತಾಲ್ಲೂಕು ಕಚೇರಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.