ADVERTISEMENT

ಸೊಸೈಟಿ ಬಲವರ್ಧನೆಗೆ ಶ್ರಮಿಸಿ

ಸೊಸೈಟಿಯಲ್ಲಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಿವಲಿಂಗಾನಂದ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 13:46 IST
Last Updated 16 ಸೆಪ್ಟೆಂಬರ್ 2021, 13:46 IST
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಿರ್ಮಿಸಿರುವ ನೂತನ ವಿನಾಯಕ ಸ್ವಾಮಿಯ ದೇಗುಲ ಲೋಕಾರ್ಪಣೆ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಉದ್ಘಾಟಿಸಿದರು. ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ಇದ್ದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಿರ್ಮಿಸಿರುವ ನೂತನ ವಿನಾಯಕ ಸ್ವಾಮಿಯ ದೇಗುಲ ಲೋಕಾರ್ಪಣೆ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಉದ್ಘಾಟಿಸಿದರು. ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ಇದ್ದರು.   

ಚಿತ್ರದುರ್ಗ: ‘ನೂರು ವರ್ಷದ ಇತಿಹಾಸ ಹೊಂದಿರುವ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯನ್ನು ಇನ್ನಷ್ಟು ಬಲವಾಗಿ ಬೆಳೆಸಲು ಶ್ರಮಿಸಿ’ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಸಲಹೆ ನೀಡಿದರು.

ಸೊಸೈಟಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ನೂತನ ವಿನಾಯಕ ಮೂರ್ತಿ ಪ್ರತಿಷ್ಠಾಪನೆ, ಗೋಪುರ ಕಳಸ ಪೂಜಾ ಮಹೋತ್ಸವ, ಸಹಕಾರಿ ಗಣಪತಿ ಪ್ರಾಣ ಪ್ರತಿಷ್ಠಾಪನೆ ಕಲಶ ಸ್ಥಾಪನೆ, ಕುಂಭಾಭಿಷೇಕ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಸೊಸೈಟಿಯನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಹೀಗಿದ್ದರೂ ಸೊಸೈಟಿ ವರ್ಷಕ್ಕೆ ₹ 15 ಕೋಟಿ ವಹಿವಾಟು ನಡೆಸುವಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿ ಬೆಳೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘ಸೊಸೈಟಿಯಲ್ಲಿ ಇರುವ ಪ್ರತಿಯೊಬ್ಬರೂ ಸೊಸೈಟಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಬೇಕು. ಅದನ್ನು ಬಿಟ್ಟು ಗುಂಪುಗಾರಿಕೆ, ರಾಜಕೀಯ ಮಾಡಬಾರದು. ಇದರಿಂದ ಸೊಸೈಟಿ ಬೆಳವಣಿಗೆ ಕುಂಠಿತವಾಗಲಿದೆ’ ಎಂದು ಸಲಹೆ ನೀಡಿದರು.

‘ಸೊಸೈಟಿ ಆವರಣದಲ್ಲೇ ಚೊಕ್ಕವಾದ ವಿನಾಯಕ ದೇಗುಲ ನಿರ್ಮಿಸುವ ಮೂಲಕ ರಸ್ತೆ ವಿಸ್ತರಣೆಗೆ ಸೊಸೈಟಿಯವರು ಸಹಕಾರ ನೀಡಿದ್ದೀರಿ. ಸೊಸೈಟಿ ಆರ್ಥಿಕವಾಗಿ ಸಬಲವಾಗಿದೆ. ಅಗತ್ಯವಾಗಿ ಬೇಕಾಗುವ ಸಹಕಾರ ನೀಡಲು ಸಿದ್ಧನಿದ್ದೇನೆ’ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ‘ವಿಘ್ನನಿವಾರಕ ವಿಘ್ನೇಶ್ವರ ಸ್ವಾಮಿಯ ಪ್ರತಿಷ್ಠಾಪನೆ, ಆರಾಧನೆಯೊಂದಿಗೆ ಸೊಸೈಟಿ ಹೊಸ ರೂಪ ಪಡೆಯುತ್ತಿದೆ. ಆರ್ಥಿಕ ದುರ್ಬಲರನ್ನು ಸಬಲರನ್ನಾಗಿ ಮಾಡುವಲ್ಲಿಯೂ ಸೊಸೈಟಿಯವರು ಶ್ರಮಿಸಬೇಕು. ಉತ್ತಮ ಕಾರ್ಯದಲ್ಲಿ ತೊಡಗುವವರಿಗೆ ದೇವರು ಮತ್ತು ಗುರುಗಳ ಕೃಪೆ ಇರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸೊಸೈಟಿ ಅಧ್ಯಕ್ಷ ಎಂ. ನಿಶಾನಿ ಜಯಣ್ಣ, ಉಪಾಧ್ಯಕ್ಷ ಡಾ. ರಹಮತ್‌ವುಲ್ಲಾ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಇದ್ದರು.

***

ಸಂಸ್ಥೆ ಬೆಳೆಸುವುದು ಸುಲಭದ ಮಾತಲ್ಲ. ಅನೇಕ ಸಮಸ್ಯೆಗಳ ಜತೆಗೆ ಕಾನೂನು ಸಂಘರ್ಷ ಎದುರಾಗುತ್ತದೆ. ಅವೆಲ್ಲವನ್ನೂ ನಿಭಾಯಿಸಿ ಮುನ್ನಡೆಸಬೇಕು. ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಸಾಧ್ಯ.

ಪಿ.ಎಸ್. ಮಂಜುನಾಥ್, ಬ್ರಾಹ್ಮಣ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.