ADVERTISEMENT

ವಿ.ವಿ ಸಾಗರ: ಸೌಲಭ್ಯ ಕೊರತೆಯ ಆಗರ

‘ಕೆಆರ್‌ಎಸ್‌ ಮಾದರಿ’ ಅಭಿವೃದ್ಧಿಗೂ ಮೊದಲು ಮೂಲಸೌಲಭ್ಯ ಸಿಗಲಿ, ಸ್ಥಳೀಯರ ಒತ್ತಾಯ

ಎಂ.ಎನ್.ಯೋಗೇಶ್‌
Published 12 ಜೂನ್ 2025, 6:36 IST
Last Updated 12 ಜೂನ್ 2025, 6:36 IST
ಚಿತ್ರದುರ್ಗ ಜಿಲ್ಲೆಯಲ್ಲಿರುವ ವಿ.ವಿ. ಸಾಗರ ಜಲಾಶಯದ ಕೆಳಭಾಗದಲ್ಲಿರುವ ‘ಪ್ರಕೃತಿ ವಿಹಾರ ವನ’ ಹಾಳಾಗಿರುವುದು
ಚಿತ್ರದುರ್ಗ ಜಿಲ್ಲೆಯಲ್ಲಿರುವ ವಿ.ವಿ. ಸಾಗರ ಜಲಾಶಯದ ಕೆಳಭಾಗದಲ್ಲಿರುವ ‘ಪ್ರಕೃತಿ ವಿಹಾರ ವನ’ ಹಾಳಾಗಿರುವುದು   

ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯದ ಕೆಳಗಿರುವ ಉದ್ಯಾನವು ನಿರ್ವಹಣೆ ಕೊರತೆಯಿಂದಾಗಿ ಪಾಳು ಬಿದ್ದಿದೆ. ಜಲಾಶಯ ಸಮೀಪದ ಪ್ರವಾಸಿ ಮಂದಿರ ಉದ್ಘಾಟನೆ ಕಾಣದೇ ಗಿಡಗಂಟಿಗಳ ನಡುವೆ ಅಡಗಿದೆ. ಹೀಗಿರುವಾಗ ಜಲಾಶಯವನ್ನು ಕೃಷ್ಣರಾಜ ಸಾಗರ (ಕೆಆರ್‌ಎಸ್) ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವೇ? ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

‘ವಿ.ವಿ. ಸಾಗರ ಜಲಾಶಯವನ್ನು ಕೆಆರ್‌ಎಸ್‌ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಪ್ರಕಟಿಸಿದ್ದಾರೆ. ಈ ಸಂಬಂಧ ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಸಿರುವ ಸಚಿವರು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ವಿಸ್ತ್ರತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಮೊದಲ ಹಂತವಾಗಿ ಹಿರಿಯೂರು ಪಟ್ಟಣದ ವಿ.ವಿ. ಪುರ ಕ್ರಾಸ್‍ನಿಂದ ಕಣಿವೆ ಮಾರಮ್ಮ ದೇವಸ್ಥಾನದವರೆಗೆ 17.50 ಕಿ.ಮೀ ರಸ್ತೆ ವಿಸ್ತರಣೆ ಮಾಡುವುದಾಗಿ, ಲೋಕೋಪಯೋಗಿ ಇಲಾಖೆಯ ಸಹಕಾರದೊಂದಿಗೆ ಜಂಟಿ ಸರ್ವೇ ನಡೆಸಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ. ಸಚಿವರ ನಿರ್ಧಾರಕ್ಕೆ ಸ್ಥಳೀಯ ರೈತ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದು, ‘ಮೊದಲು ಜಲಾಶಯದ ಆಸುಪಾಸಿನಲ್ಲಿ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯ ಒದಗಿಸಲಿ, ನಂತರ ಕೆಆರ್‌ಎಸ್‌ ಮಾದರಿ ಬಗ್ಗೆ ಯೋಚಿಸಲಿ’ ಎಂದು ತಿಳಿಸಿದೆ.

ADVERTISEMENT

ಅಭಿವೃದ್ಧಿ ಕಾಮಗಾರಿಗೂ ಮೊದಲು ರಸ್ತೆ ವಿಸ್ತರಣೆಗೆ ಕೈಹಾಕುತ್ತಿರುವುದನ್ನು ಸಂಘಟನೆಗಳ ಮುಖಂಡರು ಆಕ್ಷೇಪಿಸಿದ್ದಾರೆ. ಕೆಆರ್‌ಎಸ್‌ ಮಾದರಿ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ವಿಸ್ತರಣೆಗೆ ಭೂಸ್ವಾಧೀನ ಮಾಡಿಕೊಳ್ಳುವುದು, ಆ ಮೂಲಕ ಕೋಟ್ಯಂತರ ರೂಪಾಯಿ ಹಣ ತಂದು ಇಡೀ ಯೋಜನೆಯನ್ನು ರಸ್ತೆ ವಿಸ್ತರಣೆಗೆ ಮಾತ್ರ ಸೀಮಿತಗೊಳಿಸುವ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.

‘ಕೆಆರ್‌ಎಸ್‌ ಮಾದರಿ ಅಭಿವೃದ್ಧಿಯ ಬಗ್ಗೆ ನಮ್ಮ ವಿರೊಧವಿಲ್ಲ. ಆದರೆ, ಸಚಿವರು ಈ ಕುರಿತು ಸ್ಥಳೀಯವಾಗಿ ವಿವಿಧ ಸಂಘಟನೆಗಳ ಸಭೆ ನಡೆಸಿ ಬದ್ಧತೆ ತೋರಬೇಕು. ರಸ್ತೆ ವಿಸ್ತರಣೆ ಜೊತೆಗೆ ಪ್ರವಾಸಿ ತಾಣ ಅಭಿವೃದ್ಧಿ ಕಾಮಗಾರಿಯನ್ನೂ ಏಕಕಾಲದಲ್ಲಿ ಕೈಗೆತ್ತಿಕೊಳ್ಳಬೇಕು. ಆದರೆ ಆರಂಭಿಕವಾಗಿ ರಸ್ತೆ ವಿಸ್ತರಣೆಗೆ ಮುಂದಾಗಿರುವುದು ಅನುಮಾನ ಮೂಡಿಸುತ್ತದೆ. ಹಣ ದುರುಪಯೋಗದ ದುರುದ್ದೇಶವಿದ್ದಂತೆ ಕಾಣುತ್ತಿದೆ. ಈ ಕುರಿತು ನಾವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ’ ಎಂದು ರಾಜ್ಯ ರೈತಸಂಘ– ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರವಾಸಿ ಮಂದಿರಕ್ಕಿಲ್ಲ ಉದ್ಘಾಟನೆ ಭಾಗ್ಯ: ವಾಣಿವಿಲಾಸ ಜಲಾಶಯದ ಅಣೆಕಟ್ಟೆ ಕೆಳಭಾಗದಲ್ಲಿ ನಿರ್ಮಾಣಗೊಂಡಿದ್ದ ‘ಪ್ರಕೃತಿ ವಿಹಾರ ವನ’ ಈಗ ಬರಡಾಗಿದೆ. ವಿವಿಧ ಜಾತಿಯ ಹೂವಿನ ಗಿಡ, ಔಷಧಿ ಗಿಡಗಳು ನಾಶವಾಗಿವೆ. ಮಕ್ಕಳ ಆಟಕ್ಕಾಗಿ ಅಳವಡಿಸಿದ್ದ ಆಟಿಕೆಗಳು ತುಕ್ಕು ಹಿಡಿದಿವೆ.

ಜಲಾಶಯದ ಸಮೀಪ ₹ 5 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಮಾಡಲಾಗಿದೆ. 10–12 ವರ್ಷ ಸಾಗಿದ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಆದರೆ, ಕಟ್ಟಡವನ್ನು ಇಲ್ಲಿಯವರೆಗೂ ಉದ್ಘಾಟಿಸಿಲ್ಲ. ಪ್ರವಾಸಿ ಮಂದಿರದ ಸುತ್ತಲೂ ಗಿಡ–ಗಂಟಿ ಬೆಳೆದು ನಿಂತಿದ್ದು ಉಪಯೋಗಕ್ಕೆ ಬಾರದಾಗಿದೆ. ₹ 5 ಕೋಟಿ ಅನುದಾನ ವ್ಯರ್ಥವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಜಲಾಶಯ ತುಂಬಿರುವ ಕಾರಣ ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ಊಟ, ವಸತಿಗೆ ಯಾವುದೇ ಸೌಲಭ್ಯಗಳಿಲ್ಲ. ವಿ.ವಿ. ಪುರ ವೃತ್ತದಲ್ಲಿರುವ ಐದಾರು ಸಣ್ಣ ಹೋಟೆಲ್‌ಗಳೇ ಊಟಕ್ಕೆ ಆಧಾರ. ಶೌಚಾಲಯ ಸೌಲಭ್ಯವೂ ಇಲ್ಲದ ಕಾರಣ ರಸ್ತೆ ಬದಿಯಲ್ಲೇ ಶೌಚ ಮಾಡುತ್ತಾರೆ. ಹೀಗಾಗಿ ಇಡೀ ಆವರಣದಲ್ಲಿ ಸ್ವಚ್ಛತೆ ಮಾಯವಾಗಿದೆ. ಕಣಿವೆ ಮಾರಮ್ಮ ದೇವಾಲಯಕ್ಕೆ ಬರುವ ಭಕ್ತರ ವಾಹನ ನಿಲುಗಡೆಗೂ ಸೌಲಭ್ಯಗಳಿಲ್ಲ. ಮೊದಲು ಕನಿಷ್ಠ ಸೌಲಭ್ಯ ಒದಗಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

‘ವಿ.ವಿ. ಸಾಗರ ಜಲಾಶಯ ತುಂಬಿದ್ದರೂ ಹಿರಿಯೂರು ತಾಲ್ಲೂಕು ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೆರೆಗಳು ನೀರಿಲ್ಲದೇ ಒಣಗುತ್ತಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯಾಗುತ್ತದೆ. ಕೆಆರ್‌ಎಸ್‌ ಮಾದರಿ ಅಭಿವೃದ್ಧಿಗೂ ಮೊದಲು ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಬೇಕು’ ಎಂದು ಪರಿಸರ ಪ್ರೇಮಿ ಟಿ.ಎಂ. ಮಂಜುನಾಥ್‌ ಒತ್ತಾಯಿಸಿದರು.

ಸೌಲಭ್ಯವಂಚಿತ ಪ್ರವಾಸಿ ಮಂದಿರ
ಕೆಆರ್‌ಎಸ್‌ ಮಾದರಿ ಅಭಿವೃದ್ಧಿ ಭವಿಷ್ಯದ ಚಿಂತನೆಯಷ್ಟೇ. ಸದ್ಯ ರಾಷ್ಟ್ರೀಯ ಹೆದ್ದಾರಿಯಿಂದ ಜಲಾಶಯದವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಚರ್ಚಿಸಲಾಗಿದೆ
ಬಿ.ಚಂದ್ರಪ್ಪ ಇಇ ವಿಶ್ವೇಶ್ವರಯ್ಯ ಜಲ ನಿಗಮ

ಹಿನ್ನೀರು ರೈತರ ಕಣ್ಣೀರು ಒರೆಸಿ

ಜಲಾಶಯ ತುಂಬಿರುವ ಕಾರಣ ಹೊಸದುರ್ಗ ತಾಲ್ಲೂಕಿನ ಸಾವಿರಾರು ಎಕರೆ ಕೃಷಿ ಭೂಮಿ ಹಿನ್ನೀರಿನಲ್ಲಿ ಮುಳುಗಿದೆ. ತೆಂಗು ಅಡಿಕೆ ತೋಟಗಳು ನಾಶವಾಗುತ್ತಿವೆ. ಜಮೀನು ಕಳೆದುಕೊಂಡಿರುವ ರೈತರು ಕಣ್ಣೀರು ಹಾಕುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹೊಸದುರ್ಗ ರೈತರ ಸಮಸ್ಯೆ ಆಲಿಸದೇ ಕೆಆರ್‌ಎಸ್‌ ಮಾದರಿ ಅಭಿವೃದ್ಧಿ ಮಾತುಗಳನ್ನಾಡುತ್ತಿರುವುದು ಅಲ್ಲಿಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ‘ಡಿ.ಸುಧಾಕರ್‌ ಅವರು ಹಿರಿಯೂರು ತಾಲ್ಲೂಕಿಗೆ ಮಾತ್ರ ಸಚಿವರಾಗಿದ್ದಾರೆ. ನಮ್ಮ ಸಮಸ್ಯೆಗಳಿಗೆ ಅವರು ಕಿವಿಗೊಡುತ್ತಿಲ್ಲ ನಮ್ಮ ಕಣ್ಣೀರು ಒರೆಸುತ್ತಿಲ್ಲ. ಕೆಆರ್‌ಎಸ್‌ ಮಾದರಿ ಅಭಿವೃದ್ಧಿಗಿಂತ ಮೊದಲು ನಮ್ಮ ತೋಟ ಮನೆಗಳನ್ನು ರಕ್ಷಿಸಿಕೊಡಲಿ’ ಎಂದು ಮುತ್ತೋಡು ಗ್ರಾಮದ ರೈತರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.