ADVERTISEMENT

ಮೊಳಕಾಲ್ಮುರು: ಚಿತ್ತರಗಿ ಗಡಿನಾಡ ಸಾಂಸ್ಕೃತಿಕ ಉತ್ಸವ ಫೆ.5ರಿಂದ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:43 IST
Last Updated 3 ಫೆಬ್ರುವರಿ 2026, 5:43 IST
ಬಸವಲಿಂಗ ಸ್ವಾಮೀಜಿ.
ಬಸವಲಿಂಗ ಸ್ವಾಮೀಜಿ.   

ಮೊಳಕಾಲ್ಮುರು: ತಾಲ್ಲೂಕಿನ ಸಿದ್ದಯ್ಯನಕೋಟೆ ಇಳಕಲ್‌ ವಿಜಯ ಮಹಾಂತೇಶ್ವರ ಶಾಖಾಮಠ ವತಿಯಿಂದ ಗಡಿನಾಡ ಸಾಂಸ್ಕೃತಿಕ ಉತ್ಸವ ಫೆ.5 ರಿಂದ 9ರ ವರೆಗೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ಬಸವಕೇಂದ್ರ, ಚಿತ್ತರಗಿ ವಿಜಯ ಮಹಾಂತೇಶ್ವರ ಮಠ, ಚಿತ್ತರಗಿ ಚಿಚ್ಛೋತಿ ಸಾಂಸ್ಕೃತಿಕ ಕಲಾವೇದಿಕೆ ಮತ್ತು ಕ್ರೀಡಾ ಯುವಕ ಸಂಘ, ಬಸವ ಅಂಬೇಡ್ಕರ್‌ ಜನಕಲ್ಯಾಣ ಸಂಸ್ಥೆಗಳು ಜಂಟಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ ಎಂದು ಮಠದ ಪೀಠಾಧ್ಯಕ್ಷ ಬಸವಲಿಂಗ ಸ್ವಾಮೀಜಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫೆ.5 ರಂದು ಸಂಜೆ ಘಟಸ್ಥಲ ಧ್ವಜಾರೋಹಣವನ್ನು ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ವಿರೂಪಾಕ್ಷಿ ಪೂಜಾರಹಳ್ಳಿ ನೆರವೇರಿಸುವರು. ನಂತರ ಶೈಕ್ಷಣಿಕ ಕ್ಷೇತ್ರದಲ್ಲಿ ಶರಣರ ಪಾತ್ರ ವಿಚಾರಗೋಷ್ಠಿ ನಡೆಯಲಿದೆ. ಇಳಕಲ್‌ ವಿಜಯ ಮಹಾಂತ ಗುರುಪೀಠದ ಗುರುಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಹಂಪಿ ವಿವಿಯ ಹಿರಿಯ ಪ್ರಾದ್ಯಾಪಕ ಎನ್.‌ ಚಿನ್ನಸ್ವಾಮಿ ಸೂಸಲೆ ಉಪನ್ಯಾಸ ನೀಡಲಿದ್ದಾರೆ. ಚಿತ್ರದುರ್ಗದ ಬಸವನಾಗೀದೇವ ಸ್ವಾಮೀಜಿ ಉಪಸ್ಥಿತರಿರುವರು.

ADVERTISEMENT

ಫೆ.6 ರಂದು ಯುವ ಜನೋತ್ಸವ ಜರುಗಲಿದ್ದು, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಗುಳೇದಗುಡ್ಡ ಜಗದ್ಗುರು ಗುರುಸಿದ್ಧ ಪಟ್ಟಾಧಾರ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ. ಮಂಜುನಾಥ್‌ ಭಾಗವಹಿಸಲಿದ್ದಾರೆ ಎಂದು ಹೇಳಿದರು.

7 ರಂದು ಬಸವತತ್ವ ಪ್ರತಿಪಾದಕ ಎಂ. ಭೀಮಪ್ಪ ಮಾಸ್ತರ್‌ ಜನ್ಮಶತಮಾನೋತ್ಸವ ಹಾಗೂ ಮಹಾಂತ ಗುರುಕಾರುಣ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಬಸವತತ್ವ ಪ್ರತಿಪಾದಕರಾದ ಬೆಂಗಳೂರಿನ ಉಮಾ ಬಿ.ಎಸ್.‌ ವಿಜೇಂದ್ರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

8 ರಂದು ಶಿವಾನುಭವ, ಶಿವಯೋಗಿಗಳ ಸ್ಮರಣೆ, ಚಿತ್ತರಗಿ ಮಹಾಂತ ಗುರುಕಾರಣ್ಯ ಪ್ರಶಸ್ತಿಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿಗೆ ಭಾಜನರಾಗಿರುವ ಎಸ್.‌ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಜಿ. ಪರಮೇಶ್ವರ್‌, ಎಚ್.ಸಿ. ಮಹಾದೇವಪ್ಪ, ಪ್ರಿಯಾಂಕ ಖರ್ಗೆ, ಡಿ. ಸುಧಾಕರ್‌, ಶಾಸಕ ಎನ್.ವೈ. ಗೋಪಾಲಕೃಷ್ಣ, ಮಾಜಿ ಸಚಿವ ಎಚ್.‌ ಆಂಜನೇಯ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಫೆ. 9 ರಂದು ಬೆಳಿಗ್ಗೆ ಬಸವತತ್ವ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ನಿಡಸೂಸಿ ಸಿದ್ಧ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿತ್ರದುರ್ಗ ಮಾದಾರ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಸಚಿವ ಶಿವರಾಜ್‌ ತಂಗಡಿಗಿ, ಸಂಸತ್‌ ಸದಸ್ಯ ಗೋವಿಂದ ಕಾರಜೋಳ ಭಾಗವಹಿಸಲಿದ್ದಾರೆ.

ರಾತ್ರಿ ಗುರು ತಿಪ್ಪೇರುದ್ರಸ್ವಾಮಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಬಸವಲಿಂಗ ಸ್ವಾಮೀಜಿ ಹೇಳಿದರು. ಮಠದ ಕಾರ್ಯದರ್ಶಿ ಪಿ.ಆರ್.‌ ಕಾಂತರಾಜ್‌, ಮುಖಂಡರಾದ ಭೋಗೇಶ್‌ ಗೌಡ, ಬೋವಿ ಸಮಾಜದ ಅಧ್ಯಕ್ಷ ಬಿ. ಬಸಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.