
ಹಿರಿಯೂರು: ಕ್ರಿಸ್‌ಮಸ್ ಜೊತೆಗೆ ಹೊಸವರ್ಷವನ್ನು ಬರಮಾಡಿಕೊಳ್ಳುವ ಹಬ್ಬದ ಸಿದ್ಧತೆಯಲ್ಲಿ ನಗರದ ಕ್ರೈಸ್ತರು ಹಗಲಿರುಳು ತೊಡಗಿಸಿಕೊಂಡಿದ್ದಾರೆ.
‘ಜಗತ್ತಿನಾದ್ಯಂತ ಏಸುಕ್ರಿಸ್ತನ ಜನ್ಮ ದಿನವನ್ನು ಡಿ. 25ರಂದು ‘ಕ್ರಿಸ್‌ಮಸ್’ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಕ್ರಿಸ್‌ಮಸ್ ಮುನ್ನಾ ದಿನ ಕ್ರಿಶ್ಚಿಯನ್ನರು ಮನೆಯ ಅಂಗಳದಲ್ಲೇ ಭಜನೆ, ಪ್ರಾರ್ಥನೆ, ನೆರವೇರಿಸಿ ಹಬ್ಬಕ್ಕೆ ಸಜ್ಜುಗೊಂಡು, ಸಮೀಪದ ಚರ್ಚ್‌ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ರೋಮನ್ನರ ಅಧಿಪತ್ಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಕ್ಕೆ ಬಲಿಯಾಗಿ ತನ್ನವರಿಂದಲೇ ಧರ್ಮದ್ರೋಹದ ಆರೋಪ ಹೊತ್ತು, ಅಂದಿನ ರೋಮನ್ ಆಡಳಿತಗಾರರಿಂದ ಶಿಲುಬೆಗೆ ಏರುವಾಗಲೂ ಏಸುಕ್ರಿಸ್ತರು ರೋಮನ್ ಆಡಳಿತಗಾರರ, ಅಧಿಕಾರಿಗಳ ತಪ್ಪನ್ನು ಕ್ಷಮಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತಾರೆ. ಏಸುಕ್ರಿಸ್ತನ ಅಂತಹ ಸಹನೆ, ತಾಳ್ಮೆಯ ಗುಣಗಳನ್ನು ಬಹುತೇಕ ಕ್ರಿಶ್ಚಿಯನ್ನರು ಅಳವಡಿಸಿಕೊಂಡಿರುವುದು’ ವಿಶೇಷ ಎಂದು ಹಿರಿಯೂರು ಅಸಂಷನ್ ಚರ್ಚ್‌ನ ಪಾದ್ರಿ ರೆವರೆಂಡ್ ಫಾದರ್ ಡಿ ಕುನ್ಹ ತಿಳಿಸಿದರು.
ಮನುಕುಲಕ್ಕೆ ದೇವರ ಪ್ರೀತಿ ಎಷ್ಟು ಅಗತ್ಯ ಎಂದು ಸಾರಲು, ಮನುಷ್ಯ ದೈವತ್ವಕ್ಕೆ ಹೋಗುವುದು ಹೇಗೆ ಎಂದು ತೋರಿಸಲು ಏಸುವಿನ ರೂಪದಲ್ಲಿ ಭಗವಂತ ಜನಿಸಿದ ಹಬ್ಬವೇ ಕ್ರಿಸ್‌ಮಸ್.
ದೇವರಿಂದ ಈ ಸೃಷ್ಟಿ. ಸೃಷ್ಟಿಯ ನಂತರ ಸೃಷ್ಟಿಕರ್ತನನ್ನೇ ಮರೆತ ಮನುಷ್ಯ ದ್ವೇಷ, ಅಸೂಯೆ ತುಂಬಿಕೊಂಡ. ಆದರೂ ಮನುಷ್ಯನನ್ನು ನಾಶಪಡಿಸುವ ಬದಲು ದೇವರು ಪ್ರೀತಿ ತೋರಿದ. ದೈವತ್ವಕ್ಕೆ ಸಿರಿವಂತಿಕೆ ಬೇಕಿಲ್ಲ ಎಂಬುದಕ್ಕೆ ಅರಮನೆಯಲ್ಲಿ ಜನಿಸುವ ಬದಲು ಏಸು ಪ್ರಭು ಗೋದಲಿಯಲ್ಲಿ ಜನಿಸುತ್ತಾರೆ. ಪಾಪ ಪರಿಹಾರ ಬಲಿಗಾಗಿ ಏಸು ಧರೆಗೆ ಬರುತ್ತಾರೆ. ಅಂತಹ ಶಕ್ತಿ ಇದ್ದ ಕಾರಣಕ್ಕೆ ಅವರು ದೇವ ಮಾನವರಾಗುತ್ತಾರೆ. ದೀನತೆಯಲ್ಲಿ ಶ್ರೇಷ್ಠತೆಯನ್ನು ತೋರಿಸುವ ಸಂಕೇತ ಇದು ಎಂದು ಅವರು ಹೇಳಿದರು.
‘ವಿಶ್ವದಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುವ ಈ ಹಬ್ಬವು ದ್ವೇಷದ ಜಾಗದಲ್ಲಿ ಪ್ರೀತಿಯನ್ನು ನೆಲೆಗೊಳಿಸಲಿ. ಮಾನವೀಯ ಮೌಲ್ಯಗಳು ಉಳಿದು ಬೆಳೆಯಲಿ. ಅಶಾಂತಿಯ ವಾತಾವರಣ ದೂರವಾಗಲಿ’ ಡಿ ಕುನ್ಹ ಹಾರೈಸಿದರು.
ಕ್ರಿಸ್‌ಮಸ್ ಅಂಗವಾಗಿ ತಾಲ್ಲೂಕಿನ ವಿವಿಧೆಡೆ ಸಡಗರದ ಸಿದ್ಧತೆ ನಡೆದಿದೆ. ನಗರದ ಚರ್ಚ್‌ಗಳನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕ್ರೈಸ್ತರು ತಮ್ಮ ಮನೆಗಳಿಗೆ ಸುಣ್ಣಬಣ್ಣ ಬಳಿದು, ಒಂದು ವಾರದ ಮುಂಚೆಯೇ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದಾರೆ. ಬಗೆಬಗೆಯ ಸ್ವಾದದ, ಆಕೃತಿಯ ಕೇಕ್‌ಗಳನ್ನು ತಯಾರಿಸಿಕೊಂಡಿದ್ದು, ಪರಿಚಯದವರಿಗೆ, ಬಂಧುಗಳಿಗೆ ಹಂಚಲು ಕ್ಷಣಗಣನೆಯಲ್ಲಿ ತೊಡಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಕ್ರೈಸ್ತ ಧರ್ಮೀಯರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.