ADVERTISEMENT

ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುರುವಾದ ಪೈಪೋಟಿ

ಜಿ.ಬಿ.ನಾಗರಾಜ್
Published 15 ಮಾರ್ಚ್ 2020, 19:30 IST
Last Updated 15 ಮಾರ್ಚ್ 2020, 19:30 IST
ಚಿತ್ರದುರ್ಗ ನಗರಸಭೆ
ಚಿತ್ರದುರ್ಗ ನಗರಸಭೆ   

ಚಿತ್ರದುರ್ಗ: ನಗರ ಸ್ಥಳೀಯ ಸಂಸ್ಥೆಗೆ ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ಕೌನ್ಸಿಲ್‌ ರಚನೆಯಾಗುವ ಕಾಲ ಕೂಡಿಬಂದಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಲೆಕ್ಕಾಚಾರ ಶುರುವಾಗಿವೆ.

ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಯಕನಟ್ಟಿ ಹೊರತುಪಡಿಸಿ ಉಳಿದವುಗಳಿಗೆ ವರ್ಷ, ಒಂದೂವರೆ ವರ್ಷದ ಹಿಂದೆ ಚುನಾವಣೆ ನಡೆದಿತ್ತು. ಚಿತ್ರದುರ್ಗ, ಚಳ್ಳಕೆರೆ ನಗರಸಭೆ ಹಾಗೂ ಹೊಸದುರ್ಗ ಪುರಸಭೆಗೆ 2018ರ ಸೆಪ್ಟೆಂಬರ್‌ನಲ್ಲಿ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಿತ್ತು. ಹಿರಿಯೂರು ನಗರಸಭೆ, ಮೊಳಕಾಲ್ಮುರು, ಹೊಳಲ್ಕೆರೆ ಪಟ್ಟಣ ಪಂಚಾಯಿತಿಗೆ 2019ರ ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟವಾಗಿತ್ತು.

ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿಗದಿಯಾಗಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಅನೇಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆ ನನೆಗುದಿಗೆ ಬಿದ್ದಿತ್ತು. ಬಿಜೆಪಿ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಿಸಿರುವುದು ಕೌನ್ಸಿಲರುಗಳಲ್ಲಿ ಹಲವು ನಿರೀಕ್ಷೆಗಳನ್ನು ಗರಿಗೆದರಿಸಿದೆ.

ADVERTISEMENT

ಪರಿಶಿಷ್ಟ ಜಾತಿ ಮಹಿಳೆಗೆ ಅವಕಾಶ:

ಚಿತ್ರದುರ್ಗ ನಗರಸಭೆ 35 ವಾರ್ಡ್‌ಗಳನ್ನು ಹೊಂದಿದೆ. ಬಿಜೆಪಿ 17, ಕಾಂಗ್ರೆಸ್‌ 5, ಜೆಡಿಎಸ್‌ 6 ಹಾಗೂ ಏಳು ಪಕ್ಷೇತರ ಇದ್ದಾರೆ. ಸರಳ ಬಹುಮತಕ್ಕೆ 18 ಸದಸ್ಯಬಲ ಇದ್ದರೆ ಸಾಕು. ಪಕ್ಷೇತರರಲ್ಲಿ ಬಿಜೆಪಿ ಬೆಂಬಲಿತರು ಅನೇಕರಿದ್ದಾರೆ. ಹೀಗಾಗಿ, ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಮೊದಲ ಬಾರಿಗೆ ಅಧಿಕಾರ ಹಿಡಿಯಲು ಬಿಜೆಪಿ ಕೂಡ ಸಜ್ಜಾಗಿದೆ.

ಅಧ್ಯಕ್ಷ ಸ್ಥಾನ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಬಿಜೆಪಿಯ ಚುನಾಯಿತ ಸದಸ್ಯರಲ್ಲಿ 32ನೇ ವಾರ್ಡ್‌ನ ತಾರಕೇಶ್ವರಿ ಹಾಗೂ 13ನೇ ವಾರ್ಡ್‌ನ ಭಾಗ್ಯಮ್ಮ ಅರ್ಹತೆ ಪಡೆದಿದ್ದಾರೆ. ಇಬ್ಬರ ನಡುವೆ ಪೈಪೋಟಿ ನಡೆಯುತ್ತಿದೆ. 60 ತಿಂಗಳ ಅಧಿಕಾರವಧಿ ಇಬ್ಬರ ನಡುವೆ ಹಂಚಿಕೆಯಾಗುವ ಸಾಧ್ಯತೆಯೂ ಇದೆ. ಈ ಬಗ್ಗೆ ಇಬ್ಬರೂ ಆಶಾಭಾವನೆ ಹೊಂದಿದ್ದಾರೆ.

ಉಪಾಧ್ಯಕ್ಷ ಹುದ್ದೆಗೆ ಕುತೂಹಲ:

ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಬಿಸಿಎಂ) ‘ಎ’ಗೆ ನಿಗದಿಯಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಏಳು ಸದಸ್ಯರುಈ ಸ್ಥಾನಕ್ಕೆ ಅರ್ಹತೆ ಪಡೆದಿದ್ದು, ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹಾಗೂ ಬಿಜೆಪಿ ಮುಖಂಡರು ಒಮ್ಮತದ ತೀರ್ಮಾನ ಕೈಗೊಳ್ಳಲಿದ್ದಾರೆ. ಅಧ್ಯಕ್ಷರಿಗಿಂತ ಉಪಾಧ್ಯಕ್ಷರು ಯಾರಾಗಬಹುದು ಎಂಬ ಕುತೂಹಲವೇ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.