ಚಿತ್ರದುರ್ಗ: ‘ನಗರದ ಐತಿಹಾಸಿಕ ಕಲ್ಲಿನಕೋಟೆ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ದೇಶ, ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಶಾಸಕ ಕೆ.ಸಿ.ವೀರೇಂದ್ರ ಹೇಳಿದರು.
ಕೋಟೆ ಮುಂಭಾಗದಲ್ಲಿ ನಿರ್ಮಾಣವಾಗಿರುವ ಪ್ರವಾಸಿ ಮಾಹಿತಿ ಕೇಂದ್ರ, ಪಾರ್ಕಿಂಗ್ ಸೌಲಭ್ಯ, ಲಗೇಜ್ ಕೊಠಡಿ, ಕುಡಿಯುವ ನೀರಿನ ಸೌಲಭ್ಯ, ವಿಶ್ರಾಂತಿ ಕೊಠಡಿ, ಸ್ನಾನಗೃಹ ಹಾಗೂ ಶೌಚಾಲಯ ಉದ್ಘಾಟಿಸಿ ಅವರು ಮಾತನಾಡಿದರು.
‘2018–19ನೇ ಸಾಲಿನ ಬಂಡವಾಳ ವೆಚ್ಚ ಯೋಜನೆಯಡಿ ₹ 2 ಕೋಟಿ ವೆಚ್ಚದಲ್ಲಿ ಕಲ್ಲಿನಕೋಟೆ ಆವರಣದಲ್ಲಿ ವಿವಿಧ ಸೌಲಭ್ಯ ಒದಗಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಇಲ್ಲಿಯವರೆಗೂ ವಿವಿಧ ಕಟ್ಟಡಗಳು ಉದ್ಘಾಟನೆ ಕಂಡಿರಲಿಲ್ಲ. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ನಂತರ ಬಗೆಹರಿಸಿಕೊಳ್ಳಬಹುದು, ಕೂಡಲೇ ಕಾಮಗಾರಿಗೆ ಚಾಲನೆ ನೀಡಬೇಕು ಎಂಬ ಉದ್ದೇಶದಿಂದ ಉದ್ಘಾಟನೆ ಮಾಡಲಾಗಿದೆ’ ಎಂದು ಹೇಳಿದರು.
‘ಕೋಟೆಯ ಆವರಣದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಪ್ರವಾಸಿಗರಿಗೆ ಶೌಚಾಲಯ ಸೌಲಭ್ಯಗಳಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದವು. ಈ ನಿಟ್ಟಿನಲ್ಲಿ ಸದ್ಯ ಪುರುಷ ಹಾಗೂ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಪ್ರವಾಸಿಗರು ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು. ಸದ್ಯ ಉದ್ಘಾಟನೆ ಕಂಡಿರುವ ಮಾಹಿತಿ ಕೇಂದ್ರ, ಲಗೇಜ್ ಕೊಠಡಿ ಮುಂತಾದ ಸೌಲಭ್ಯಗಳನ್ನು ಪ್ರವಾಸೋದ್ಯಮ ಇಲಾಖೆಯೇ ನಿರ್ವಹಣೆ ಮಾಡಲಿದೆ’ ಎಂದು ಹೇಳಿದರು.
‘ಕೆಲ ದಿನಗಳ ಹಿಂದೆ ಇಲ್ಲಿಯ ಸೌಲಭ್ಯ ವೀಕ್ಷಣೆಯ ವೇಳೆ ಬಂದಿದ್ದಾಗ ಕಟ್ಟಡಗಳು ಪೂರ್ಣಗೊಂಡಿರುವ ವಿಷಯ ತಿಳಿದುಬಂತು. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸಬೇಕು. ವಿವಿಧೆಡೆಯಿಂದ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರ ಪರಿಣಾಮವಾಗಿ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆ. ಇನ್ನು ಮುಂದೆ ಪ್ರವಾಸಿಗರಿಗೆ ಮೂಲ ಸೌಲಭ್ಯಗಳ ಕೊರತೆ ಕಂಡುಬರುವುದಿಲ್ಲ’ ಎಂದು ತಿಳಿಸಿದರು.
‘ಪ್ರವಾಸಿಗರಿಗೆ ಅವಶ್ಯವಾಗಿರುವ ಎಲ್ಲಾ ಸೌಲಭ್ಯಗಳು ಒಂದೇ ಆವರಣದಲ್ಲಿ ಇರುವುದು ಉತ್ತಮ. ಕೊಠಡಿಗಳ ರಕ್ಷಣೆಗಾಗಿ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ. ಐತಿಹಾಸಿಕ ಕೋಟೆ ವೀಕ್ಷಣೆಗೆ ಸಂಜೆಯವರೆಗೆ ಮಾತ್ರ ಅವಕಾಶವಿದ್ದು ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ಸಮಸ್ಯೆಗಳಿದ್ದರೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.
‘ಕೋಟೆಯ ಮುಂಭಾಗದಲ್ಲೇ ಪ್ರವಾಸೋದ್ಯಮ ಇಲಾಖೆಯ ಮಯೂರ ದುರ್ಗ ಹೋಟೆಲ್ ಇದ್ದು ಪ್ರವಾಸಿಗರು ರಾತ್ರಿಯ ವೇಳೆ ಅಲ್ಲಿ ವಾಸ್ತವ್ಯ ಹೂಡಬಹುದು. ಕೋಟೆಯ ಬಳಿ ದುರ್ಗೋತ್ಸವ ಆಚರಣೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಕೋಟೆಗೆ ಅವಶ್ಯಕವಾಗಿ ಬೇಕಿರುವ ರಸ್ತೆ ಯೋಜನೆಗೆ ಮರುಜೀವ ನೀಡಿ ಆದಷ್ಟು ಬೇಗ ಜನರ ಪ್ರವಾಸಿಗರ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ನಗರಸಭಾ ಪೌರಾಯುಕ್ತೆ ಎಂ.ರೇಣುಕಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ನಾಗವೇಣಿ, ಕೆಆರ್‍ಐಡಿಎಲ್ ಕಾರ್ಯಪಾಲಕ ಎಂಜಿನಿಯರ್ ಟಿ.ಎನ್.ವಿನಾಯಕ, ಕಾಂಗ್ರೆಸ್ ಒಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಡಿ.ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.