ADVERTISEMENT

ವಾಮಮಾರ್ಗದ ರಾಜಕೀಯಕ್ಕೆ ಹಿನ್ನಡೆ: ಬಿಜೆಪಿ ವಿರುದ್ಧ ಎಚ್‌.ಆಂಜನೇಯ ಕಿಡಿ

​ಪ್ರಜಾವಾಣಿ ವಾರ್ತೆ
Published 22 ಮೇ 2020, 12:49 IST
Last Updated 22 ಮೇ 2020, 12:49 IST
ಎಚ್.ಆಂಜನೇಯ
ಎಚ್.ಆಂಜನೇಯ   

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗಾದಿ ಏರಲು ಬಿಜೆಪಿ ನಡೆಸಿದ ವಾಮಮಾರ್ಗದ ರಾಜಕೀಯಕ್ಕೆ ಸೋಲುಂಟಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಶಿಸ್ತು ಹಾಗೂ ಒಗ್ಗಟ್ಟು ಇರುವುದು ನಿರೂಪಿತವಾಗಿದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ನಾಯಿ, ನರಿಗಳ ರೀತಿಯಲ್ಲಿ ಜನಪ್ರತಿನಿಧಿಗಳನ್ನು ಖರೀದಿಸಲು ಮುಂದಾಗುತ್ತಿದೆ. ಬಿಜೆಪಿಯ ಆಪರೇಷನ್‌ ಚಿತ್ರದುರ್ಗದಲ್ಲಿ ಯಶಸ್ಸು ಕಂಡಿಲ್ಲ. ಹೀಗಾಗಿ, ಸಹಜ ಹೆರಿಗೆ ಆಯಿತು’ ಎಂದು ವ್ಯಂಗ್ಯವಾಡಿದರು.

‘ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತವಿದೆ. ಆದರೂ, ಅಧಿಕಾರ ಹಿಡಿಯುವ ಪ್ರಯತ್ನವನ್ನು ಬಿಜೆಪಿ ಮಾಡಿತು. ಕಾಂಗ್ರೆಸ್‌ ಪಕ್ಷದ ಸದಸ್ಯರು ಹೈಕಮಾಂಡ್‌ ಸೂಚನೆಯನ್ನು ಪಾಲನೆ ಮಾಡಿದರು. ಚುನಾವಣಾ ವೀಕ್ಷಕರಾಗಿದ್ದ ರೇವಣ್ಣ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷದ ಯಶಸ್ಸಿಗೆ ಕಾರಣರಾದರು’ ಎಂದು ಹೇಳಿದರು.

ADVERTISEMENT

‘ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಮೂಲಕ ಎಲ್ಲ ಜಾತಿಯ ಜನರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್‌ ನಿರ್ಧರಿಸಿತ್ತು. ಲಿಂಗಾಯತ ಹಾಗೂ ಉಪ್ಪಾರ ಸಮುದಾಯದ ಪ್ರತಿನಿಧಿಗೆ ಅವಕಾಶ ಕಲ್ಪಿಸಿತ್ತು. ಕುರುಬ ಸಮುದಾಯದ ಶಶಿಕಲಾ ಅವರು ಆಯ್ಕೆಯಾಗಿದ್ದು ಪಕ್ಷದ ಒಮ್ಮತದ ತೀರ್ಮಾನ. ಇನ್ನೂ ಕೆಲ ಸಮುದಾಯಗಳಿಗೆ ಅವಕಾಶ ಸಿಗಬೇಕಿತ್ತು’ ಎಂದರು.

ಮಾಜಿ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿ, ‘ಸರ್ಕಾರಗಳನ್ನು ಉರುಳಿಸಿ ಅಧಿಕಾರ ಹಿಡಿಯುವುದರಲ್ಲಿ ನಿಪುಣರಾಗಿರುವ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದೇವೆ. ಬಿಜೆಪಿಯ ಷಡ್ಯಂತ್ರಕ್ಕೆ ಸೋಲುಂಟಾಗಿದೆ’ ಎಂದು ಹೇಳಿದರು.

‘ಕೊರೊನಾ ಸೋಂಕು ಸೃಷ್ಟಿಸಿದ ಪರಿಸ್ಥಿತಿಯನ್ನು ಎದುರಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಸೋಂಕು ಕಾಣಿಸಿಕೊಂಡು ಎರಡು ತಿಂಗಳ ಬಳಿಕ ಲಾಕ್‌ಡೌನ್‌ ಘೋಷಣೆ ಮಾಡಿತು. ಪೂರ್ವತಯಾರಿ ಇಲ್ಲದ ಲಾಕ್‌ಡೌನ್‌ನಿಂದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ರೂಪಿಸಿದ ₹ 20 ಲಕ್ಷ ಕೋಟಿ ಪ್ಯಾಕೇಜ್‌ ಕನ್ನಡಿಯೊಳಗಿನ ಗಂಟಾಗಿದ್ದು, ಸಂತ್ರಸ್ತರಿಗೆ ಸಿಗುವುದಿಲ್ಲ’ ಎಂದು ಆರೋಪಿಸಿದರು.

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮಾಜಿ ಶಾಸಕರಾದ ಡಿ.ಸುಧಾಕರ್‌, ಬಿ.ಜಿ.ಗೋವಿಂದಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.