ADVERTISEMENT

ಚಿತ್ರದುರ್ಗ | ಕಾಂಗ್ರೆಸ್‌ಗೆ ನದಾಫ– ಪಿಂಜಾರರ ಆಶೀರ್ವಾದ: ಡಿ.ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 6:38 IST
Last Updated 26 ಅಕ್ಟೋಬರ್ 2025, 6:38 IST
ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ನದಾಫ–ಪಿಂಜಾರರ ಸಂಘದ 33ನೇ ಸಂಸ್ಥಾಪನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಮಾತನಾಡಿದರು
ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ನದಾಫ–ಪಿಂಜಾರರ ಸಂಘದ 33ನೇ ಸಂಸ್ಥಾಪನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಮಾತನಾಡಿದರು   

ಚಿತ್ರದುರ್ಗ: ‘ನದಾಫ್‌– ಪಿಂಜಾರರಿಗೆ ಸ್ವಾಭಿಮಾನವೇ ಉಸಿರಾಗಿದೆ. ಸಮಾಜದಲ್ಲಿ ಅವರು ಬಹಳ ಸಾಮರಸ್ಯ, ಔದಾರ್ಯದಿಂದ ಬದುಕುತ್ತಿದ್ದಾರೆ. ಕಾಂಗ್ರೆಸ್‌ ಮೇಲೆ ನದಾಫ– ಪಿಂಜಾರರ ಆಶೀರ್ವಾದವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು.

ಮುರುಘರಾಜೇಂದ್ರ ಮಠ, ಅನುಭವ ಮಂಟಪದಲ್ಲಿ ಶನಿವಾರ ನಡೆದ ನದಾಫ– ಪಿಂಜಾರ ಸಂಘದ 33ನೇ ಸಂಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನನ್ನೂ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಶಾಸಕರ ಗೆಲುವಿಗೆ ನದಾಫ– ಪಿಂಜಾರರ ಬೆಂಬಲವಿದೆ. ನಾನು ಚಿಕ್ಕಂದಿನಿಂದಲೂ ಮುಸ್ಲಿಂ ಸಮುದಾಯದ ಜೊತೆಯಲ್ಲೇ ಬೆಳೆದು ಬಂದಿದ್ದೇನೆ. ಸಂಘದ ಸ್ಥಾಪಕರಾದ ಇಬ್ರಾಹಿಂ ಅವರ ಆಶೀರ್ವಾದವೂ ನಮ್ಮ ಮೇಲಿತ್ತು. ಸಮುದಾಯದ ಋಣ ತೀರಿಸುವ ಕೆಲಸ ಮಾಡುತ್ತೇವೆ. ಯಾವುದೇ ಬೇಡಿಕೆಗಳಿದ್ದರೂ ಅವುಗಳನ್ನು ಈಡೇರಿಸುತ್ತೇವೆ’ ಎಂದು ಹೇಳಿದರು.

ADVERTISEMENT

‘ಆದಷ್ಟು ಬೇಗ ನದಾಫ– ಪಿಂಜಾರ ಸಮುದಾಯದ ಮುಖಂಡರನ್ನು ಮುಖ್ಯಮಂತ್ರಿಯೊಂದಿಗೆ ಭೇಟಿ ಮಾಡಿಸಲಾಗುವುದು. ಸಮುದಾಯದ ಸದಸ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಣ್ಣಪುಟ್ಟ ಸಮುದಾಯಗಳ ಪ್ರಗತಿಗೆ ಆದ್ಯತೆ ನೀಡುತ್ತಾರೆ’ ಎಂದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಜಲೀಲ್‌ ಸಾಬ್‌ ಮಾತನಾಡಿ, ‘ನದಾಫ– ಪಿಂಜಾರ ಸಮುದಾಯದ ಸದಸ್ಯರು 33 ವರ್ಷಗಳ ಹಿಂದೆ ಇದ್ದ ಸ್ಥಿತಿಯಲ್ಲೇ ಇದ್ದಾರೆ. ವಿವಿಧೆಡೆ ಪಿಂಜಾರ ಓಣಿಗಳು ಕೊಳೆಗೇರಿಗಳಾಗಿವೆ. ಮಂಗಳೂರು ಭಾಗದಲ್ಲಿ ಗುಂಡಿಗಳಂತಹ ಜಾಗದಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ನಮಗೆ ವಸತಿ ಸೌಲಭ್ಯ ಕಲ್ಪಿಸಬೇಕು. ನಮಗಾಗಿ ಸರ್ಕಾರ ವಿಶೇಷ ಯೋಜನೆ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಪ್ರವರ್ಗ– 1ರಡಿ ಮೀಸಲಾತಿ ದೊರೆತ ನಂತರ ನಮ್ಮವರು ಹಲವು ಜಿಲ್ಲೆಗಳಲ್ಲಿ ವಿದ್ಯಾವಂತರಾಗಿದ್ದಾರೆ, ಅಧಿಕಾರಿಗಳಾಗಿದ್ದಾರೆ. ಆದರೆ, ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನಗಳು ಇಲ್ಲಿಯವರೆಗೂ ಲಭಿಸಿಲ್ಲ. ಹೀಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ರಾಜಕೀಯ, ಆರ್ಥಿಕ, ಸಾಮಾಜಿಕ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ’ ಎಂದರು.

‘ನದಾಫ– ಪಿಂಜಾರರನ್ನು ಕಂಡರೆ ಬಹಳ ತಿರಸ್ಕಾರ ಭಾವನೆಯಿಂದ ನೋಡುವುದು ಹೆಚ್ಚಾಗುತ್ತಿದೆ. ಇದರ ವಿರುದ್ಧ ನಾವು ಧ್ವನಿ ಎತ್ತಬೇಕು. ಸಂಘದ ಯುವ ಘಟಕ ರೂಪಿಸಿ ಅವರ ಮೂಲಕ ಮುಂದಿನ ಹೋರಾಟ ರೂಪಿಸಲಾಗುವುದು. ನಾವು ಬೀದಿಗಿಳಿದು ಹೋರಾಟ ಮಾಡುವುದಿಲ್ಲ. ಗಾಂಧೀಜಿ ಮಾರ್ಗದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ’ ಎಂದರು.

‘ನಮ್ಮ ಸಮುದಾಯದವರು ಯಾರೂ ವಿಧಾನಸೌಧಕ್ಕೆ ಹೋಗಿ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ನಮ್ಮ ಸಮುದಾಯದವರಿಗೆ ವಸತಿ ಸೌಕರ್ಯಗಳಿಲ್ಲ. ಮೂಲ ಸೌಕರ್ಯ ಕೊರತೆಗಳನ್ನು ಅನುಭವಿಸುತ್ತಿದ್ದೇವೆ. ನಮ್ಮ ಸಮುದಾಯದ ಕಾರ್ಯಕ್ರಮಗಳಿಗೆ ಮುಖಂಡರನ್ನು ಆಹ್ವಾನಿಸುತ್ತೇವೆ. ಆದರೆ, ಅವರು ಯಾರು ಸಹ ಬರುವುದಿಲ್ಲ. ಇಂತಹ ತಿರಸ್ಕಾರ ಭಾವನೆ ತೊಲಗಬೇಕು’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು, ವಿವಿಧ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರನ್ನು ಅಭಿನಂದಿಸಲಾಯಿತು. ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್‌ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌, ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್‌ ಸಾಬ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ ಪೀರ್‌, ಮುಖಂಡರಾದ ಶಕೀಂ ನವಾಜ್‌, ಟಿಪ್ಪು ಖಾಸಿಂ ಅಲಿ, ಜೆ.ಡಿ.ನದಾಫ್‌, ಬೆಂಡಿಗೇರಿ ಸಾಬ್‌, ರಿಯಾಜ್‌ ಸಲೀಂ, ನೂರ್‌ ಪಾಷಾ ಇದ್ದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.