ADVERTISEMENT

ಗ್ರಾ.ಪಂ. ಕಾರ್ಯದರ್ಶಿಗೆ ಜೈಲು

ಉದ್ಯೋಗ ಖಾತ್ರಿ ಯೋಜನೆ ಅನುದಾನ ದುರುಪಯೋಗ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 15:44 IST
Last Updated 6 ಆಗಸ್ಟ್ 2019, 15:44 IST

ಚಿತ್ರದುರ್ಗ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ದುರುಪಯೋಗಪಡಿಸಿಕೊಂಡ ಸೊಂಡೆಕೊಳ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ 1ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

2006–07ರಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಶಿವಕುಮಾರ್‌ ಶಿಕ್ಷೆಗೆ ಗುರಿಯಾದವರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಂಕರಪ್ಪ ಮಲ್ಲಾಶೆಟ್ಟಿ ಅವರು ಮಂಗಳವಾರ ಈ ಆದೇಶ ಪ್ರಕಟಿಸಿದರು.

2006–07ನೇ ಆರ್ಥಿಕ ವರ್ಷದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗೆ ₹ 39.81 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ ₹ 30.33 ಲಕ್ಷವನ್ನು ಯೋಜನೆಗೆ ಬಳಸಿರುವುದಕ್ಕೆ ದಾಖಲೆ ಸಿಕ್ಕಿದ್ದವು. ಉಳಿದ ₹ 9.48 ಲಕ್ಷ ಅನುದಾನ ಬಳಕೆಗೆ ದಾಖಲೆ ಒದಗಿಸಲು ಕಾರ್ಯದರ್ಶಿ ಶಿವಕುಮಾರ್‌ ವಿಫಲರಾಗಿದ್ದರು.

ADVERTISEMENT

ಈ ಬಗ್ಗೆ ಆಂತರಿಕ ತನಿಖೆ ನಡೆಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿಯಾಗಿದ್ದ ಓಂಕಾರಪ್ಪ ಅವರು ಆರೋಪಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ರೂಪಾ ಸರ್ಕಾರದ ‍ಪರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.