ADVERTISEMENT

ಭಾನುವಾರದ ಲಾಕ್‌ಡೌನ್‌ಗೆ ಕೋಟೆನಾಡು ಚಿತ್ರದುರ್ಗ ಸ್ತಬ್ಧ

ನೀರವಮೌನಕ್ಕೆ ಶರಣಾದ ಮುಖ್ಯ ರಸ್ತೆಗಳು, ಅಗತ್ಯ ವಸ್ತು ಸೇವೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 12:47 IST
Last Updated 5 ಜುಲೈ 2020, 12:47 IST
ಚಿತ್ರದುರ್ಗದ ಬಿ.ಡಿ. ರಸ್ತೆ ‘ಭಾನುವಾರದ ಲಾಕ್‌ಡೌನ್’‌ಗೆ ವಾಹನ, ಜನ ಸಂಚಾರವಿಲ್ಲದೆ, ಬಿಕೊ ಎನ್ನುತ್ತಿರುವುದು. ಚಿತ್ರ: ಭವಾನಿ ಮಂಜು.
ಚಿತ್ರದುರ್ಗದ ಬಿ.ಡಿ. ರಸ್ತೆ ‘ಭಾನುವಾರದ ಲಾಕ್‌ಡೌನ್’‌ಗೆ ವಾಹನ, ಜನ ಸಂಚಾರವಿಲ್ಲದೆ, ಬಿಕೊ ಎನ್ನುತ್ತಿರುವುದು. ಚಿತ್ರ: ಭವಾನಿ ಮಂಜು.   

ಚಿತ್ರದುರ್ಗ:ಜನಸಂಚಾರವೇ ಇಲ್ಲದ ಮುಖ್ಯ ರಸ್ತೆಗಳಲ್ಲಿ ಬಾಗಿಲು ಮುಚ್ಚಿದ ಅಂಗಡಿ-ಮುಂಗಟ್ಟು. ಖಾಲಿ ಖಾಲಿ ಆಗಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ. ಸದಾ ಗಿಜಿಗುಡುತ್ತಿದ್ದ ಮಾರುಕಟ್ಟೆ ಬಳಿ ಗ್ರಾಹಕರಿಲ್ಲದೇ ಬಿಕೊ ಎನ್ನುವ ವಾತಾವರಣ. ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಂಚಾರ ವಿರಳ.

ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾನುವಾರ ಕಂಡು ಬಂದ ದೃಶ್ಯಗಳಿವು. ರಾಜ್ಯದಾದ್ಯಂತ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಪುನಾ ಜಾರಿಗೊಳಿಸಿರುವ ‘ಭಾನುವಾರದ ಲಾಕ್‌ಡೌನ್‌’ಗೆ ಕೋಟೆನಾಡು ಸಂಪೂರ್ಣ ಸ್ತಬ್ಧವಾಗಿತ್ತು.

ತರಕಾರಿ, ಹಣ್ಣು, ಹಾಲು, ದಿನಸಿ, ಮಾಂಸದ ಅಂಗಡಿ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಬೆಳಿಗ್ಗೆ 9ರೊಳಗೆ ಜನ ಅಗತ್ಯ ವಸ್ತುಗಳನ್ನು ಖರೀದಿಸಿ ತಮ್ಮ ಮನೆಗಳತ್ತ ತೆರಳಿದರು.

ADVERTISEMENT

ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5ರ ವರೆಗಿನ 33 ಗಂಟೆಗಳ ‘ಲಾಕ್‌ಡೌನ್’‌ಗೆ ಜನತೆ ಬೆಂಬಲಿಸುವ ಮೂಲಕ ಮನೆಯಲ್ಲಿಯೇ ಉಳಿದರು. ಹಿರಿಯೂರು, ಮೊಳಕಾಲ್ಮುರು, ಚಳ್ಳಕೆರೆ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಇದೇ ಪರಿಸ್ಥಿತಿ ಇತ್ತು.

ಬಿಕೊ ಎನ್ನುತ್ತಿದ್ದ ರಸ್ತೆಗಳು: ಬಿ.ಡಿ. ರಸ್ತೆ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆ, ಕನಕ ವೃತ್ತ, ಮೆದೇಹಳ್ಳಿ ರಸ್ತೆ, ಸಂತೆಹೊಂಡದ ರಸ್ತೆ, ಜೆಸಿಆರ್‌ ಮುಖ್ಯ ರಸ್ತೆ, ಜಿಲ್ಲಾಧಿಕಾರಿ ವೃತ್ತ, ತುರುವನೂರು ರಸ್ತೆ, ದಾವಣಗೆರೆ ರಸ್ತೆಯಲ್ಲಿ ಜನಸಂಚಾರವೇ ಕಾಣಲಿಲ್ಲ. ಜಿಲ್ಲೆಯ ರಸ್ತೆಗಳು ನೀರವ ಮೌನಕ್ಕೆ ಶರಣಾದಂತೆ ಭಾಸವಾಯಿತು. ಸದಾ ಜನದಟ್ಟಣೆ ಮತ್ತು ವಾಹನ ಸಂಚಾರದಿಂದ ಕೂಡಿರುತ್ತಿದ್ದ ರಸ್ತೆಗಳೂ ಬಿಕೊ ಎನ್ನುತ್ತಿದ್ದವು.

ಜೋಗಿಮಟ್ಟಿ ರಸ್ತೆ, ಫಿಲ್ಟರ್‌ ಹೌಸ್ ರಸ್ತೆ, ಕೆಳಗೋಟೆ, ಮುನ್ಸಿಪಲ್ ಕಾಲೊನಿ, ಬುರುಜನಹಟ್ಟಿ, ಬಸವೇಶ್ವರ ನಗರ, ವಿದ್ಯಾನಗರ, ಜೆ.ಜೆ. ಹಟ್ಟಿ ಸೇರಿ ಕೆಲ ಬಡಾವಣೆಗಳಲ್ಲಿ ದಿನಸಿ ಅಂಗಡಿಗಳು ಮಾತ್ರ ತೆರೆದಿದ್ದವು. ಉಳಿದಂತೆ ಇಡೀ ಮಾರುಕಟ್ಟೆ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಭಾಗಗಳಲ್ಲಿ ದ್ವಿಚಕ್ರ ವಾಹನ ಸವಾರರು ಸಂಚಾರ ನಡೆಸಿದರು.

ಹಾಲು ಮಾರಾಟಕ್ಕೆ ಅವಕಾಶ ಇದ್ದಿದ್ದರಿಂದ ನಂದಿನಿ ಹಾಲಿನ ಕೇಂದ್ರಗಳು ಮಧ್ಯಾಹ್ನದವರೆಗೆ ಮಾತ್ರ ತೆರೆದಿದ್ದವು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಾಲು ಉಳಿದರೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ವ್ಯಾಪಾರಸ್ಥರು ಎಂದಿನಂತೆ ಹೆಚ್ಚು ಪ್ರಮಾಣದಲ್ಲಿ ಹಾಲು ತರಿಸಿಕೊಂಡಿರಲಿಲ್ಲ. ಅಲ್ಲಲ್ಲಿ ತೆರೆದಿದ್ದ ಕೇಂದ್ರಗಳಿಗೆ ಧಾವಿಸಿ ಗ್ರಾಹಕರು ಹಾಲು ಖರೀದಿಸಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಅಲ್ಲದೆ, ಲಾಕ್‌ಡೌನ್‌ ಕಾರಣಕ್ಕೆ ರೈತರೂ ಮಾರುಕಟ್ಟೆಗೆ ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತರಲಿಲ್ಲ. ಆದರೂ ನಸುಕಿನಿಂದ ಬೆಳಿಗ್ಗೆ 8ರ ವರೆಗೂ ತೆರೆದಿದ್ದ ತರಕಾರಿ ಮಾರುಕಟ್ಟೆಗಳ ಬಳಿ ಮಾತ್ರ ಒಂದಿಷ್ಟು ಜನ ಕಂಡುಬಂದರು. ಇಲ್ಲಿ ವ್ಯಾಪಾರ ಚಟುವಟಿಕೆ ನಡೆಯಿತು. ಉಳಿದಂತೆ ಬಹುತೇಕ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಯಾವೊಬ್ಬರು ಅಂಗಡಿಯನ್ನು ತೆರೆಯುವ ಪ್ರಯತ್ನ ಮಾಡಲಿಲ್ಲ.

ಮಾರುಕಟ್ಟೆ, ಹೆದ್ದಾರಿ ಭಣ–ಭಣ: ಭಾನುವಾರ ಮಾತ್ರ ಬಹುತೇಕ ಮಳಿಗೆಗಳು ಬಾಗಿಲು ತೆರೆಯಲಿಲ್ಲ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ವಾಹನ ಸಂಚಾರ ವಿರಳವಾಗಿತ್ತು. ಹಿರಿಯೂರು ತಾಲ್ಲೂಕಿನ ಗುಯಿಲಾಳು ಟೋಲ್‌ ಪ್ಲಾಜಾದಲ್ಲಿ ವಾಹನಗಳಿಲ್ಲದೇ ಭಣ-ಭಣ ಎನ್ನುತ್ತಿತ್ತು. ರಸ್ತೆ ಬದಿ, ನಗರದ ಹೊರವಲಯದಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದವು.

ಮಾಸ್ಕ್‌ ಇಲ್ಲದವರಿಗೆ ದಂಡ:‘ಲಾಕ್‌ಡೌನ್’ ಅಂಗವಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್‌, ಲಾರಿ, ಆಟೊ, ಟ್ಯಾಕ್ಸಿ ಸೇರಿ ಇತರೆ ವಾಹನಗಳು ಕೂಡ ರಸ್ತೆಗೆ ಇಳಿಯಲಿಲ್ಲ. ದಿನಸಿ ಸೇರಿ ಆಹಾರ ಸಾಮಗ್ರಿ ತುಂಬಿಕೊಂಡಿದ್ದ ಸರಕು ಸಾಗಣೆ ವಾಹನಗಳು ಕೆಲವೆಡೆ ಸಂಚಾರ ನಡೆಸಿದವು. ಅಲ್ಲಲ್ಲಿ ದ್ವಿಚಕ್ರ ವಾಹನಗಳು ಮಾತ್ರ ಕಂಡುಬರುತ್ತಿದ್ದವು. ಇದೇ ವೇಳೆ ಅನಗತ್ಯವಾಗಿ ಸಂಚರಿಸಿದ ಕೆಲವರನ್ನು ತಡೆದ ಪೊಲೀಸರು ಮನೆಗೆ ಮರಳುವಂತೆ ಸೂಚನೆ ನೀಡುತ್ತಿದ್ದರು. ಮಾಸ್ಕ್ ಇದ್ದರೂ ಹಾಕಿಕೊಳ್ಳದ ಕೆಲವರಿಗೆ ಸ್ಥಳದಲ್ಲೇ ದಂಡ ವಿಧಿಸಿ, ಬಿಸಿ ಮುಟ್ಟಿಸಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಗುರುತಿಸಿದ್ದ ಕೆಲ ಚೆಕ್‌ಪೋಸ್ಟ್‌ಗಳಲ್ಲಿ ಕೆಲವು ಭಾನುವಾರ ಮತ್ತೆ ಕಾರ್ಯನಿರ್ವಹಿಸಿದವು. ನಗರ ಪ್ರವೇಶದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ಕುಳಿತಿದ್ದರು. ಪ್ರತಿ ವಾಹನ ಪರಿಶೀಲಿಸಿ ಸಂಚಾರಕ್ಕೆ ಅವಕಾಶ ನೀಡುತ್ತಿದ್ದದು ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.