ADVERTISEMENT

ಶೈಕ್ಷಣಿಕ ವರ್ಷ ಏರುಪೇರು; ಪ್ರವಾಸಿ ತಾಣಗಳೀಗ ಭಣ ಭಣ

ನಿರ್ಧಾರವಾಗದ ಬೇಸಿಗೆ ರಜೆ

ಜಿ.ಬಿ.ನಾಗರಾಜ್
Published 22 ಮಾರ್ಚ್ 2021, 19:30 IST
Last Updated 22 ಮಾರ್ಚ್ 2021, 19:30 IST
ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಗೆ ಸೋಮವಾರ ಬೆರಳೆಣಿಕೆಯ ಪ್ರವಾಸಿಗರು ಭೇಟಿ ನೀಡಿದ್ದರು.
ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಗೆ ಸೋಮವಾರ ಬೆರಳೆಣಿಕೆಯ ಪ್ರವಾಸಿಗರು ಭೇಟಿ ನೀಡಿದ್ದರು.   

ಚಿತ್ರದುರ್ಗ: ಬೇಸಿಗೆ ರಜೆಗೆ ಮೈದುಂಬಿಕೊಳ್ಳುತ್ತಿದ್ದ ಪ್ರವಾಸಿತಾಣಗಳು ಈಗ ಭಣಗುಡುತ್ತಿವೆ. ಕೊರೊನಾ ಸೋಂಕಿನ ಪ್ರಭಾವದಿಂದ ಶೈಕ್ಷಣಿಕ ವರ್ಷ ಏರುಪೇರು ಆಗಿರುವುದರಿಂದ ಪ್ರವಾಸಿತಾಣಗಳತ್ತ ಜನರು ಚಿತ್ತ ಹರಿಸುವುದು ಕಡಿಮೆಯಾಗಿದೆ.

ಐತಿಹಾಸಿಕ ಕಲ್ಲಿನ ಕೋಟೆ, ಆಡುಮಲ್ಲೇಶ್ವರ ಕಿರುಮೃಗಾಲಯ, ಮುರುಘಾ ವನ, ಚಂದ್ರವಳ್ಳಿ ಹಾಗೂ ವಿ.ವಿ.ಸಾಗರ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಘೋಷಣೆಯಾಗದಿದ್ದರೆ ಪ್ರವಾಸೋದ್ಯಮ ನಂಬಿಕೊಂಡವರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಈ ನಡುವೆ ಕೋವಿಡ್‌ ಎರಡನೇ ಅಲೆಯ ಬಗೆಗೆ ಆತಂಕಗಳು ಎದುರಾಗಿವೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಕೋವಿಡ್‌ ಪ್ರಕರಣಗಳು ಏರಿಕೆ ಆಗುತ್ತಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ ಕೋವಿಡ್‌ ಪ್ರಕರಣ ಎರಡಂಕಿ ದಾಟುತ್ತಿಲ್ಲ. ಮೂರು ತಿಂಗಳಿಂದ ಯಾರೊಬ್ಬರು ಕೋವಿಡ್‌ಗೆ ಬಲಿಯಾಗಿಲ್ಲ. ಪ್ರವಾಸಿತಾಣಗಳಿಗೆ ಹೊರಗಿನಿಂದ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿರುವ ಕಾರಣ್ಕಕೆ ಆತಂಕಪಡುವ ಅಗತ್ಯವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ADVERTISEMENT

ಮಾರ್ಚ್‌ ತಿಂಗಳ ಅಂತ್ಯದಿಂದ ಪ್ರವಾಸಿಗರ ದಂಡು ಕಲ್ಲಿನಕೋಟೆಗೆ ಭೇಟಿ ನೀಡುತ್ತಿತ್ತು. ರಾಜ್ಯ ಹಾಗೂ ಹೊರರಾಜ್ಯದ ಪ್ರವಾಸಿಗರು ಕೋಟೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ನಿತ್ಯ ಸರಾಸರಿ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, ಇತ್ತೀಚೆಗೆ ಸರಾಸರಿ 120 ಜನರು ಮಾತ್ರ ಕೋಟೆಗೆ ಬರುತ್ತಿದ್ದಾರೆ. ಅದರಲ್ಲಿ ಹೊರರಾಜ್ಯದ ಪ್ರವಾಸಿಗರ ಸಂಖ್ಯೆ ತೀರಾ ವಿರಳ. ಕಿರು ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿಲ್ಲ. ವಿ.ವಿ.ಸಾಗರಕ್ಕೆ ಪ್ರವಾಸಿಗರಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಕೋವಿಡ್‌ ಕಾರಣಕ್ಕೆ ಕೋಟೆ ಪ್ರವೇಶಕ್ಕೆ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ. ನಗದು ಪಡೆದು ಟಿಕೆಟ್‌ ನೀಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಮಾಸ್ಕ್‌ ಇರುವವರಿಗೆ ಮಾತ್ರ ಪ್ರವೇಶಾವಕಾಶವಿದೆ. ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗುತ್ತಿದೆ. ‍ಪ್ರವಾಸಿಗರ ದೇಹದ ಉಷ್ಣತೆ ಪರೀಕ್ಷಿಸುವ ಕುರಿತು ಕೇಂದ್ರ ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆ ಚಿಂತನೆ ನಡೆಸುತ್ತಿದೆ. ಆಹಾರ, ತಿನಿಸು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಪ್ರವಾಸಿತಾಣದಲ್ಲಿ ಗುಂಪು ಸೇರದಂತೆ ನೋಡಿಕೊಳ್ಳಲಾಗುತ್ತಿದೆ. ಅಂತರ ಕಾಯ್ದುಕೊಳ್ಳುವಂತೆ ಸಿಬ್ಬಂದಿಗಳು ಸೂಚನೆ ನೀಡುವುದು ಸಾಮಾನ್ಯವಾಗಿದೆ. ಪ್ರವೇಶದ್ವಾರದಲ್ಲಿ ಕೈಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

‘ಶಾಲಾ–ಕಾಲೇಜುಗಳಿಗೆ ರಜೆ ಇದ್ದರೆ ಮಾತ್ರ ಜನರಲ್ಲಿ ಪ್ರವಾಸದ ಆಲೋಚನೆ ಮೊಳೆಯುತ್ತದೆ. ಪರೀಕ್ಷೆಗಳೇ ಮುಗಿಯದ ಕಾರಣ ಪ್ರವಾಸದ ಯೋಜನೆಯನ್ನು ಬಹುತೇಕರು ಮುಂದೆ ಹಾಕಿಕೊಳ್ಳುತ್ತಿದ್ದಾರೆ. ಹೀಗಾಗಿ, ಪ್ರಸಕ್ತ ಬೇಸಿಗೆಯಲ್ಲಿ ವಾಡಿಕೆಯಷ್ಟು ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆ ಕಡಿಮೆ’ ಎಂಬುದು ಕೋಟೆಯ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಯ ಅಭಿಪ್ರಾಯ.

ಪ್ರವಾಸಿಗರನ್ನೇ ನಂಬಿ ಬದುಕು ಕಟ್ಟಿಕೊಂಡ ಹಲವರಲ್ಲಿ ಆತಂಕ ಮನೆ ಮಾಡಿದೆ. ವ್ಯಾಪಾರ ಚೇತರಿಕೆ ಕಾಣುವ ಸಂದರ್ಭದಲ್ಲಿ ಸೃಷ್ಟಿಯಾದ ಕೊರೊನಾ ಸೋಂಕಿನ ಎರಡನೇ ಅಲೆ ಇನ್ನಷ್ಟು ಹೊಡೆತ ನೀಡುವ ಸಾಧ್ಯತೆ ಇದೆ.

ಕಲ್ಲಿನ ಕೋಟೆಯ ಸುತ್ತ ಹಲವು ಹೋಟೆಲುಗಳಿವೆ. ಜ್ಯೂಸ್‌, ಹಣ್ಣು, ಐಸ್‌ಕ್ರೀಂ ಮಳಿಗೆಗಳಿವೆ. ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿರುವುದರಿಂದ ಅಂಗಡಿಗಳಲ್ಲಿ ವಹಿವಾಟು ಕುಸಿಯುತ್ತಿದೆ. ಟ್ಯಾಕ್ಸಿ ಉದ್ಯಮದಲ್ಲಿ ನಿರೀಕ್ಷೆಯಷ್ಟು ಚೇತರಿಕೆ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.