ADVERTISEMENT

ಚಿತ್ರದುರ್ಗ: ಕಾನ್‌ಸ್ಟೆಬಲ್‌ ಸೇರಿ ನಾಲ್ವರಿಗೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 13:38 IST
Last Updated 10 ಜುಲೈ 2020, 13:38 IST

‌ಚಿತ್ರದುರ್ಗ: ಶ್ರೀರಾಂಪುರ ಠಾಣೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಸೇರಿ ನಾಲ್ವರಿಗೆ ಕೊರೊನಾ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದ್ದು, ಕೋವಿಡ್‌–19 ರೋಗಿಗಳ ಸಂಖ್ಯೆ 98ಕ್ಕೆ ಏರಿಕೆ ಆಗಿದೆ.

ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರದ 38 ವರ್ಷದ ಕಾನ್‌ಸ್ಟೆಬಲ್‌, ಚಿತ್ರದುರ್ಗ ನಗರದ 60 ವರ್ಷದ ಮಹಿಳೆ, ಮೊಳಕಾಲ್ಮುರು ತಾಲ್ಲೂಕಿನ ರಾಂಪುರದ 67 ವರ್ಷದ ಪುರುಷ ಹಾಗೂ 22 ವರ್ಷದ ಮಹಿಳೆಗೆ ಕೋವಿಡ್‌ ಇರುವುದು ಪತ್ತೆಯಾಗಿದೆ.

ಶುಕ್ರವಾರ 51 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ನಾಲ್ವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಇದೇ ದಿನ ಮೂವರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 79 ಜನರು ಗುಣಮುಖರಾಗಿದ್ದು, 19 ಸಕ್ರಿಯೆ ಪ್ರಕರಣ ಜಿಲ್ಲೆಯಲ್ಲಿವೆ.

ADVERTISEMENT

ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ 10, ಹಿರಿಯೂರು ತಾಲ್ಲೂಕು ಧರ್ಮಪುರದ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ 2, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ 1, ಪರಶುರಾಂಪುರದಲ್ಲಿ 3, ಮೊಳಕಾಲ್ಮೂರು ತಾಲ್ಲೂಕು ರಾಂಪುರದಲ್ಲಿ 2, ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದದ ಒಬ್ಬರು ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.