ADVERTISEMENT

ಅಪರಾಧ ಹೆಚ್ಚದಂತೆ ತಡೆಯಲು ಸನ್ನದ್ಧರಾಗಿ

ದಾವಣಗೆರೆ ಪೂರ್ವವಲಯ ಐಜಿಪಿ ಅಮ್ರಿತ್ ಪಾಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 14:37 IST
Last Updated 27 ಜೂನ್ 2019, 14:37 IST
ಚಿತ್ರದುರ್ಗದಲ್ಲಿ ಗುರುವಾರ ದಾವಣಗೆರೆ ಪೂರ್ವವಲಯ ಐಜಿಪಿ ಅಮ್ರಿತ್ ಪಾಲ್ ಅವರಿಗೆ ಗೌರವ ವಂದನೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳು.
ಚಿತ್ರದುರ್ಗದಲ್ಲಿ ಗುರುವಾರ ದಾವಣಗೆರೆ ಪೂರ್ವವಲಯ ಐಜಿಪಿ ಅಮ್ರಿತ್ ಪಾಲ್ ಅವರಿಗೆ ಗೌರವ ವಂದನೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳು.   

ಚಿತ್ರದುರ್ಗ: ‘ಅಪರಾಧ ಕೃತ್ಯಗಳು ಹೆಚ್ಚದಂತೆ ತಡೆಯಲು ಪ್ರತಿಯೊಬ್ಬ ಪೊಲೀಸರು ಸನ್ನದ್ಧರಾಗಬೇಕು. ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು’ ಎಂದು ದಾವಣಗೆರೆ ಪೂರ್ವ ವಲಯ ಐಜಿಪಿ ಅಮ್ರಿತ್ ಪಾಲ್ ಸೂಚನೆ ನೀಡಿದರು.

ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿ ಚಿತ್ರದುರ್ಗಕ್ಕೆ ಗುರುವಾರ ಭೇಟಿ ನೀಡಿದ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಯಿತು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

‘ಅಪರಾಧ ತಡೆಯಲು ಪೊಲೀಸರ ಮೈಯೆಲ್ಲಾ ಕಣ್ಣಾಗಿರಬೇಕು. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರು ಆರೋಗ್ಯವನ್ನು ಸದಾ ಸದೃಢತೆಯಿಂದ ಇಟ್ಟುಕೊಳ್ಳಬೇಕು. ಕೊಲೆ, ಸುಲಿಗೆ, ದರೋಡೆ ಹೆಚ್ಚದಂತೆ ಜಾಗ್ರತೆ ವಹಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಿರುವ ಪೊಲೀಸರು ಸಾರ್ವಜನಿಕರೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಳ್ಳಬೇಕು. ಸ್ನೇಹಿತರಂತೆ ವರ್ತಿಸಿದಾಗ ನಿಮ್ಮೊಂದಿಗಿನ ಬಾಂಧವ್ಯ ಹೆಚ್ಚುತ್ತದೆ. ಎಲ್ಲಿಯಾದರೂ ದುಷ್ಕೃತ್ಯ ನಡೆದರೆ, ತಕ್ಷಣ ನಿಮ್ಮ ಗಮನಕ್ಕೆ ತರುತ್ತಾರೆ. ಆದ್ದರಿಂದ ನಾಗರಿಕ ಸ್ನೇಹಿಯಾಗಿ ವರ್ತಿಸಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.