ADVERTISEMENT

ಕೈಕೊಟ್ಟ ಮಳೆ: ಕಮರುತ್ತಿದೆ ಬೆಳೆ

ಎರಡು ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿ ಸಾಧ್ಯತೆ

ಜಿ.ಬಿ.ನಾಗರಾಜ್
Published 26 ಸೆಪ್ಟೆಂಬರ್ 2021, 4:07 IST
Last Updated 26 ಸೆಪ್ಟೆಂಬರ್ 2021, 4:07 IST
ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿಯ ರೈತ ಹೇಮಂತ್‌ ಅವರ ಜಮೀನಿನಲ್ಲಿ ಮಳೆ ಕೊರತೆಯಿಂದ ಒಣಗುತ್ತಿರುವ ಶೇಂಗಾ ಬೆಳೆ.
ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿಯ ರೈತ ಹೇಮಂತ್‌ ಅವರ ಜಮೀನಿನಲ್ಲಿ ಮಳೆ ಕೊರತೆಯಿಂದ ಒಣಗುತ್ತಿರುವ ಶೇಂಗಾ ಬೆಳೆ.   

ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಪರಿಣಾಮ ಕಾಳು ಕಟ್ಟುವ ಹಂತದಲ್ಲಿದ್ದ ಬೆಳೆ ಕಮರತ್ತಿದೆ. ಶೇಂಗಾ, ರಾಗಿ ಹಾಗೂ ಮೆಕ್ಕೆಜೋಳ ಇಳುವರಿ ಕುಸಿಯುವ ಕಳವಳ ರೈತರನ್ನು ಕಾಡತೊಡಗಿದೆ.

ಮುಂಗಾರು ಹಂಗಾಮು ಹಾಗೂ ಪೂರ್ವ ಮುಂಗಾರು ಮಳೆ ಜಿಲ್ಲೆಯಲ್ಲಿ ಉತ್ತಮವಾಗಿತ್ತು. ವಾಡಿಕೆಗೂ ಹೆಚ್ಚು ಮಳೆ ಸುರಿದು ರೈತರಲ್ಲಿ ಭರವಸೆ ಮೂಡಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ರೈತರು ಬಿತ್ತನೆ ಮಾಡಿದ್ದರು. ಸೆಪ್ಟೆಂಬರ್‌ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಜಿಲ್ಲೆಯಲ್ಲಿ 3.35 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದೆ. ಈ ಪೈಕಿ ಶೇಂಗಾ ಬೆಳೆ 1.42 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 85 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆ ಇದೆ. ಮೊಳಕಾಲ್ಮುರು, ಹಿರಿಯೂರು ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯ ಬೆಳೆಗೆ ಮಳೆ ಕೊರತೆ ಆಗಿದೆ. ಜಿಲ್ಲೆಯಲ್ಲಿ ಎರಡು ಲಕ್ಷ ಹೆಕ್ಟೇರ್‌ಗೂ ಹೆಚ್ಚು ವಿಸ್ತೀರ್ಣದ ಭೂಮಿಯಲ್ಲಿರುವ ಬೆಳೆ ನಷ್ಟ ಆಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ.

ADVERTISEMENT

ಜಿಲ್ಲೆಯಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ 45 ಮಿ.ಮೀ ಮಳೆ ಆಗಬೇಕಿತ್ತು. ಸೆ. 22ರವರೆಗೆ ಕೇವಲ 14 ಮಿ.ಮೀ ಮಳೆಯಾಗಿದೆ. ಶೇ 70ರಷ್ಟು ಮಳೆ ಕೊರತೆಯಾಗಿದೆ. ಇದೇ ಸಮಯದಲ್ಲಿ ಶೇಂಗಾ ಹೂ ಬಿಟ್ಟು ಕಾಯಿ ಕಟ್ಟುತ್ತದೆ. ಮೆಕ್ಕೆಜೋಳ ಹಾಗೂ ರಾಗಿ ತೆನೆ ಕಟ್ಟುತ್ತವೆ. ಕಾಳು ಕಟ್ಟಲು ಹದ ಮಳೆಯ ಅಗತ್ಯವಿದೆ. ಆದರೆ, ಒಂದೂವರೆ ತಿಂಗಳಿಂದ ಹದ ಮಳೆ ಮಳೆ ಸುರಿದಿಲ್ಲ.

ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಕೆಲ ಭಾಗಗಳಲ್ಲಿ ಮಳೆ ಕೊರತೆ ಕಡಿಮೆ. ತಡವಾಗಿ ಬಿತ್ತನೆ ಮಾಡಿದ ರಾಗಿಗೆ ಹೊಸದುರ್ಗ ತಾಲ್ಲೂಕಿನಲ್ಲಿ ತೊಂದರೆ ಆಗಿದೆ. ಇದನ್ನು ಮುಂಗಾರು ಹಂಗಾಮು ಮಧ್ಯದಲ್ಲಿ ಉಂಟಾದ ತೊಂದರೆ ಎಂಬುದಾಗಿ ಕೃಷಿ ಇಲಾಖೆ ಪರಿಗಣಿಸಿದೆ. ಈ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸುವ ಪ್ರಕ್ರಿಯೆ
ಚಾಲನೆಯಲ್ಲಿದೆ.

ಮಳೆ ಕೊರತೆಯ ಕಾರಣಕ್ಕೆ ಶೇಂಗಾ ಬೆಳೆಗೆ ಸುರಳಿ ಪೂಚಿ ಕೀಟಬಾಧೆ ಕಾಣಿಸಿಕೊಂಡಿದೆ. ಹೂವು ಕಾಯುವ ಭಂಡಾರವನ್ನು ಕೀಟಗಳು ತಿನ್ನುತ್ತಿವೆ. ಬೆಂಕಿ ರೋಗವೂ ತೀವ್ರವಾಗಿ ಹರಡುತ್ತಿದೆ. ದಿನ ಕಳೆದಂತೆ ಬೆಳೆ ಒಣಗುತ್ತಿವೆ. ಇದನ್ನು ಕಂಡು ರೈತರು ಆತಂಕಗೊಂಡಿದ್ದಾರೆ. ಬಿತ್ತನೆ ಮಾಡಿದ ವೆಚ್ಚವಾದರೂ ಕೈಸಿಗದೇ ಹೋದರೆ ರೈತರ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಲಿದೆ.

ಈಗ ಮಳೆ ಸುರಿದರೂ ಬೆಳೆಗೆ ಆಗಿರುವ ಹಾನಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಇಳುವರಿ ಅರ್ಧದಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಮಳೆಗಾಗಿ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ. ಬೆಳೆ ಕೈಸೇರದೇ ಇದ್ದರೂ ಜಾನುವಾರಿಗೆ ಮೇವು ಲಭ್ಯವಾಗಬಹುದು ಎಂಬ ಸಣ್ಣ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ, ಈರುಳ್ಳಿಯಂತೆ ಈ ಬೆಳೆ ನಾಶಪಡಿಸಲು ಮುಂದಾಗುತ್ತಿಲ್ಲ.

..

ಮುಂಗಾರು ಹಂಗಾಮಿನ ಕೆಲ ತಿಂಗಳು ವಾಡಿಕೆಗೂ ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಮಾತ್ರ ಕೊರತೆ ಉಂಟಾಗಿದೆ. ಕಾಳು ಕಟ್ಟುವ ಸಮಯದಲ್ಲಿ ಮಳೆ ಬಾರದಿರುವುದು ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ.

-ಡಾ.ಪಿ. ರಮೇಶಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.