ADVERTISEMENT

ಚಳ್ಳಕೆರೆ: ಪ್ರಸಿದ್ಧ ಜಾನಪದ ಗಾಯಕಿ ಸಿರಿಯಜ್ಜಿ ಸ್ಮಾರಕ ಲೋಕಾರ್ಪಣೆ ಇಂದು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 19:30 IST
Last Updated 23 ಆಗಸ್ಟ್ 2025, 19:30 IST
ದೇವರಮರಿಕುಂಟೆ ಗ್ರಾಮದ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಸಿರಿಯಜ್ಜಿ ಸ್ಮಾರಕಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವುದು
ದೇವರಮರಿಕುಂಟೆ ಗ್ರಾಮದ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಸಿರಿಯಜ್ಜಿ ಸ್ಮಾರಕಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವುದು   

ಚಳ್ಳಕೆರೆ (ಚಿತ್ರದುರ್ಗ): ನಾಡಿನ ಪ್ರಸಿದ್ಧ ಜಾನಪದ ಗಾಯಕಿ, ಕಾಡುಗೊಲ್ಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಿರಿಯಜ್ಜಿಯ ‌ಸ್ಮಾರಕ ಆ.24ರಂದು ಲೋಕಾರ್ಪಣೆಯಾಗಲಿದೆ. ನಿವೃತ್ತ ಐಎಫ್‌ಎಸ್‌ ಅಧಿಕಾರಿ ಚಿಕ್ಕಪ್ಪಯ್ಯ, ಡಿವೈಎಸ್ಪಿ ಟಿ.ಬಿ.ರಾಜಣ್ಣ ಮತ್ತು ಜಾನಪದ ಸಿರಿ ನಾಡೋಜ ಅಭಿಮಾನಿಗಳ ಬಳಗದ ಸದಸ್ಯರು ಇದನ್ನು ನಿರ್ಮಿಸಿದ್ದಾರೆ. 

ಸಮಾನ ಮನಸ್ಕರೆಲ್ಲರೂ ಸೇರಿ ₹ 2.5 ಲಕ್ಷ ವೆಚ್ಚದಲ್ಲಿ ದೇವರಮರಿಕುಂಟೆ ಗ್ರಾಮದ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. 10X6 ಅಡಿ ವಿಸ್ತೀರ್ಣದ ಸಮಾಧಿ, 4 X 5 ಅಡಿ ವಿಸ್ತೀರ್ಣದ ಶಿಲಾ ಮಂಟಪ ಕಟ್ಟಲಾಗಿದೆ. ಇದರಲ್ಲಿ ಸಿರಿಯಜ್ಜಿಯ ಭಾವಚಿತ್ರ, ಪರಿಚಯವುಳ್ಳ ಶಿಲಾಶಾಸನ, ಸಾಧನೆಗಳ ಫಲಕ ಅಳವಡಿಸಲಾಗಿದೆ.

‘ಸಿರಿಯಜ್ಜಿ ನಿಧನರಾಗಿ 16 ವರ್ಷಗಳಾಗಿದ್ದು ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣಗೊಳ್ಳಬೇಕು ಎಂಬ ಒತ್ತಾಯ ಮೊದಲಿನಿಂದಲೂ ಇತ್ತು. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಸಾಕಾರಗೊಂಡಿರಲಿಲ್ಲ. ಸಿರಿಯಜ್ಜಿ ಪ್ರತಿಷ್ಠಾನವಿದ್ದರೂ ಸ್ಮಾರಕ ಆಗಿರಲಿಲ್ಲ. ಈಗ ನಾವು ಏಳೆಂಟು ಮಂದಿ ಸೇರಿ ಸ್ವಂತ ಹಣ ಹಾಕಿ ಸಣ್ಣದಾಗಿ ಸ್ಮಾರಕ ನಿರ್ಮಿಸಿದ್ದೇವೆ’ ಎಂದು ಚಿಕ್ಕಪ್ಪಯ್ಯ ತಿಳಿಸಿದರು. 

ADVERTISEMENT

ಸಿರಿಯಜ್ಜಿ, ಅಪೂರ್ವ ಕಂಠದಿಂದ ಕೇಳುಗರ ಮನಸೂರೆಗೊಂಡಿದ್ದರು. ಬಾಲ್ಯದಿಂದಲೂ ಸಸಿ ನಾಟಿ ಮಾಡುವಾಗ, ಕಳೆ ಕೀಳುವಾಗ, ಧಾನ್ಯ ಕುಟ್ಟುವಾಗ, ಬೀಸುವಾಗ ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದರು. ಜಾತ್ರೆ, ಉತ್ಸವ, ಮದುವೆ ಮುಂತಾದ ಶುಭ ಕಾರ್ಯಗಳಲ್ಲಿ ಅವರನ್ನು ಕರೆಸಿ ಹಾಡಿಸಲಾಗುತ್ತಿತ್ತು. 

ನಾಡಿನ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು, ಮೀರಾಸಾಬಿಹಳ್ಳಿ ಶಿವಣ್ಣ, ಕಲಮರಹಳ್ಳಿ ಮಲ್ಲಿಕಾರ್ಜುನ ಮುಂತಾದ ವಿದ್ವಾಂಸರ ಒಡನಾಟದಿಂದ ಸಮಾಜಕ್ಕೆ ಪರಿಚಯವಾಗಿದ್ದರು. ಕೃಷ್ಣಮೂರ್ತಿ ಹನೂರು ಅವರು ಸಾವಿರಾರು ತ್ರಿಪದಿಗಳನ್ನು ಸಂಗ್ರಹಿಸಿದ್ದರು. 1983ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ 4,000 ತ್ರಿಪದಿಗಳನ್ನು ‘ಸಾವಿರದ ಸಿರಿ ಬೆಳಗು’ ಶೀರ್ಷಿಕೆಯಡಿ ಪ್ರಕಟಿಸಿತ್ತು. ಇದೀಗ ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪುನರ್‌ ಮುದ್ರಣ ಮಾಡುತ್ತಿದೆ. ಜನಪದ ಕಥನ ಗೀತೆಗಳು, ಸಿರಿಯಜ್ಜಿ ಕಥನ ಮುಂತಾದ ಕೃತಿಗಳೂ ಪ್ರಕಟವಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.