ADVERTISEMENT

ದಲೈಲಾಮಾ ಜನ್ಮದಿನ: ದುರ್ಗದಲ್ಲಿ ‘ದಯೆ– ಕರುಣೆ’ಯ ಹೆಜ್ಜೆ ಗುರುತು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 21:12 IST
Last Updated 10 ಆಗಸ್ಟ್ 2025, 21:12 IST
<div class="paragraphs"><p>ಟಿಬೆಟ್‌ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಲಾಮಾಗಳು ಚಿತ್ರದುರ್ಗದಲ್ಲಿ ಪಾದಯಾತ್ರೆ ನಡೆಸಿದರು</p></div>

ಟಿಬೆಟ್‌ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಲಾಮಾಗಳು ಚಿತ್ರದುರ್ಗದಲ್ಲಿ ಪಾದಯಾತ್ರೆ ನಡೆಸಿದರು

   

ಚಿತ್ರದುರ್ಗ: ಟಿಬೆಟನ್‌ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಭಾನುವಾರ ರಾಜ್ಯದ ವಿವಿಧ ಟಿಬೆಟ್‌ ಪುನರ್ವಸತಿ ಕ್ಯಾಂಪ್‌ಗಳಿಂದ ಬಂದಿದ್ದ 500ಕ್ಕೂ ಹೆಚ್ಚು ಲಾಮಾಗಳು ‘ದಯೆ ಹಾಗೂ ಕರುಣೆ’ಯ ಹೆಸರಿನಲ್ಲಿ ಪಾದಯಾತ್ರೆ ನಡೆಸಿದರು.

‘ಬಸವ ನಾಡಿನಲ್ಲಿ ಬುದ್ಧ ಸ್ಮರಣೆ’ ಶೀರ್ಷಿಕೆಯಡಿ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್‌ ಲಾಡ್‌ ಫೌಂಡೇಷನ್‌, ಇಂಡೊ–ಟಿಬೆಟ್‌ ಸ್ನೇಹ ಸೊಸೈಟಿ ವತಿಯಿಂದ ಪಾದಯಾತ್ರೆ ಆಯೋಜಿಸಲಾಗಿತ್ತು.

ADVERTISEMENT

ದಲೈಲಾಮಾ ಜನ್ಮದಿನವನ್ನು ‘ಜೀವ ಕಾರುಣ್ಯ’ದ ವರ್ಷವೆಂದು ಘೋಷಣೆ ಮಾಡಲಾಗಿದ್ದು, ಇದರ ಅಂಗವಾಗಿ ನಗರದಲ್ಲಿ ವಿಶೇಷ ಆಚರಣೆ ನಡೆಯಿತು.

ಮೆರವಣಿಗೆಯಲ್ಲಿ ಲಾಮಾಗಳು ಧಾರ್ಮಿಕ ಶ್ಲೋಕ ಪಠಿಸಿದರು. ರಾಜ್ಯದಲ್ಲಿ ವೈಭವದಿಂದ ಧರ್ಮಗುರು ಜಯಂತಿ ಆಚರಣೆಗಾಗಿ ‘ಧನ್ಯವಾದ ಭಾರತ, ಧನ್ಯವಾದ ಕರ್ನಾಟಕ’ ಎಂದು ಅಭಿನಂದಿಸಿದರು.

ಮೆರವಣಿಗೆ ವೇಳೆ  ಲಾಮಾಗಳು ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ, ಮದಕರಿ ವೃತ್ತದಲ್ಲಿ ಮದಕರಿ ನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಚಿವ ಸಂತೋಷ್‌ ಲಾಡ್‌ ಪಾಲ್ಗೊಂಡಿದ್ದರು.

ಬಸವ ಧರ್ಮ ದೊಡ್ಡದು: ನಂತರ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ‘ಬಸವ ಧರ್ಮದಲ್ಲಿ ಜಾತಿ ಭೇದವಿಲ್ಲ. ಬಸವೇಶ್ವರರು ಸೃಷ್ಟಿಸಿದ ಅನುಭವ ಮಂಟಪ ಇಂದು ಇದ್ದಿದ್ದರೆ ಅರ್ಧ ದೇಶವೇ ಬಸವ ಧರ್ಮವಾಗುತ್ತಿತ್ತು’ ಎಂದು ಹೇಳಿದರು. 

‘ಬಸವಣ್ಣ ಮಾನವತಾವಾದಕ್ಕಾಗಿ 12ನೇ ಶತಮಾನದಲ್ಲೇ ಕ್ರಾಂತಿ ಮಾಡಿದ್ದರು. ದಯೆ, ಕರುಣೆಗೆ ಹೋರಾಡಿದ ಮತ್ತೊಬ್ಬ ದಾರ್ಶನಿಕನನ್ನು ಕಾಣಲು ಸಾಧ್ಯವಿಲ್ಲ’ ಎಂದು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. 

ದಲೈಲಾಮಾ ಅವರ ಪ್ರತಿನಿಧಿ ಜಿಗ್ಮೇ ಜಗ್ನೆ ಪಾಲ್ಗೊಂಡಿದ್ದರು. ಲಾಮಾಗಳು ಸಂಜೆ ನಗರ ಹೊರವಲಯದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಸಮಾಧಿ ಸ್ಥಳಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಚೀನಾ ಮಧ್ಯಪ್ರವೇಶ ಬೇಕಿಲ್ಲ
ದಲೈಲಾಮಾ ಅವರು ಚಿತ್ರದುರ್ಗದ ಕಾರ್ಯಕ್ರಮ ಕುರಿತು ಸಂದೇಶ ಕಳುಹಿಸಿದ್ದರು. ‘ಚಿತ್ರದುರ್ಗದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ನನ್ನ ದೇಶದ ಜನರು ನಿರಾಶ್ರಿತರಾಗಿ ಇದ್ದಾಗ ಬೆಂಬಲಕ್ಕೆ ಬಂದ ಮುಖ್ಯಮಂತ್ರಿಯವರ ಪೈಕಿ ಎಸ್‌.ನಿಜಲಿಂಗಪ್ಪ ಅವರು ಮುಂಚೂಣಿಯಲ್ಲಿದ್ದರು. ಅವರನ್ನು ಸದಾ ನೆನೆಯುತ್ತೇನೆ’ ಎಂದು ತಿಳಿಸಿದ್ದಾರೆ. ‘ಮುಂದಿನ ದಲೈಲಾಮಾರ ಆಯ್ಕೆಯ ಅಧಿಕಾರ ಟಿಬೆಟ್‌ನ ಜನರಿಗೆ ಮಾತ್ರವಿದೆ. ಈ ವಿಚಾರದಲ್ಲಿ ಚೀನಾದ ಮಧ್ಯಪ್ರವೇಶ ಬೇಡ. ಈ ನಿರ್ಣಯವನ್ನು ಚಿತ್ರದುರ್ಗದ ಸಭೆ ಅಂಗೀಕರಿಸಬೇಕು’ ಎಂಬ ಸಂದೇಶವನ್ನು ಸಭೆಯಲ್ಲಿ ಓದಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.