
ಚಳ್ಳಕೆರೆ: ತಾಲ್ಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ದಲಿತ ಕುಟುಂಬಗಳಿಗೆ ವಿತರಿಸಿರುವ ನಿವೇಶನದ ಖಾತೆಗೆ ಆಗ್ರಹಿಸಿ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ದಲಿತ ಸಂಘಟನೆ ಕಾರ್ಯಕರ್ತರು ನಡೆಸುತ್ತಿರುವ ಧರಣಿ 8ನೇ ದಿನಕ್ಕೆ ಮುಂದುವರೆದಿದೆ.
ಅಧಿಕಾರಿಗಳು ಮತ್ತು ಶಾಸಕರು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ನಿವಾರಿಸುವ ಭರವಸೆ ನೀಡಿರೂ ಧರಣಿ ಮುಂದುವರೆದಿದೆ.
ಅಡುಗೆ ತಯಾರಿಸಿ ಸಾಮೂಹಿಕ ಭೋಜನ ಮಾಡುವ ಮೂಲಕ ರಾತ್ರಿ ಹಗಲು ಸ್ಥಳದಲ್ಲೆ ಬೀಡು ಬಿಟ್ಟಿದ್ದಾರೆ.
ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, 1992ರಲ್ಲಿ ಹಕ್ಕುಪತ್ರ ನೀಡಿದ್ದು, ಇದುವರೆಗೆ ನಿವೇಶಕ್ಕೆ ಖಾತೆ ಮಾಡಿಸಿಲ್ಲ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ.
ಅಲ್ಲದೆ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದರೂ ಈಡೇರಿಸುವಲ್ಲಿ ನಿರ್ಲಕ್ಷವಹಿಸುತ್ತಿದ್ದಾರೆ. ಬೇಡಿಕೆಗಳನ್ನು ಈಡೇರಿಸಲು ವಿಳಂಬವಾದಲ್ಲಿ ಜಿಲ್ಲಾಡಳಿತದ ವಿರುದ್ಧ ತೀವ್ರತರ ಪ್ರತಿಭಟನೆ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಟಿ.ಡಿ. ರಾಜಗಿರಿ ಮಾತನಾಡಿ, ಸರ್ಕಾರಿ ಗೋಮಾಳದ ಭೂಮಿ ದಲಿತರಿಗೆ ಮೀಸಲಿಡಬೇಕು. ಆಶ್ರಯ ಯೋಜನೆಯಡಿಯಲ್ಲಿ ಉಚಿತವಾಗಿ ವಸತಿ ನಿರ್ಡಿಸಿ ಕೊಡಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಇದ್ದರು.