ಹಿರಿಯೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ ಮೀಸಲಾತಿ ಜಾರಿಮಾಡುವಾಗ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಜಾತಿಯವರೊಂದಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯದಿಂದ ವಂಚಿಸಿದೆ ಎಂದು ಮಹಾನಾಯಕ ದಲಿತ ಸೇನೆ ಸಂಘಟನೆ ಆರೋಪಿಸಿದೆ.
ಜಸ್ಟಿಸ್ ನಾಗಮೋಹನ್ ದಾಸ್ ವರದಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ ತೀರಾ ಹಿಂದುಳಿದ ಅಲೆಮಾರಿ ಸಮುದಾಯಗಳಿಗೆ ಶೇ 1 ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರವು ಅಲೆಮಾರಿ ಸಮುದಾಯಗಳನ್ನು ಸ್ಪೃಷ್ಯ ಜಾತಿಯವರೊಂದಿಗೆ ಸೇರಿಸುವ ಮೂಲಕ ಅನ್ಯಾಯ ಮಾಡಿದೆ. ನಾಗಮೋಹನ್ ದಾಸ್ ವರದಿಯಲ್ಲಿರುವಂತೆ ಅಲೆಮಾರಿ ಸಮುದಾಯಗಳಿಗೆ ಶೇ 1 ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಗುರುವಾರ ಉಪವಿಭಾಗಧಿಕಾರಿ ಮಹಬೂಬ್ ಜಿಲಾನಿ ಖುರೇಷಿ ಹಾಗೂ ತಹಶೀಲ್ದಾರ್ ಎಂ. ಸಿದ್ದೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಕೆ.ಪಿ.ಶ್ರೀನಿವಾಸ್, ಬ್ಯಾಡರಹಳ್ಳಿ ಹನುಮಂತರಾಯ, ಅಬ್ಬಿನಹೊಳೆ ಜಗದೀಶ್, ಕೂನಿಕೆರೆ ಮಾರುತೇಶ್, ಖಂಡೇನಹಳ್ಳಿ ಶಿವು, ಆಲೂರು ಕಾಂತರಾಜ್, ಮರಡಿಹಳ್ಳಿ ತಿಪ್ಪೇಸ್ವಾಮಿ, ಪಟ್ರೆಹಳ್ಳಿ ಮಹೇಶ್, ಕಾಟನಾಯಕನಹಳ್ಳಿ ಮಹೇಶ್, ಬೀರೇನಹಳ್ಳಿ ಮಹಂತೇಶ್, ಹುಚ್ಚವ್ವನಹಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.
ದೊಂಬರ ವಿರೋಧ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಮಾಡಿರುವುದು ಸಂತಸದ ಸಂಗತಿಯಾಗಿದ್ದರೂ, ಅತ್ಯಂತ ಹಿಂದುಳಿದ ಹಾಗೂ ಅತ್ಯಲ್ಪರಾಗಿರುವ 59 ಜಾತಿಗಳನ್ನು ಬಲಾಢ್ಯರ ಪ್ರವರ್ಗಕ್ಕೆ ಸೇರಿಸಿರುವುದು ಸರಿಯಲ್ಲ ಎಂದು ದೊಂಬರ ಜನಾಂಗದ ಮುಖಂಡ ಡಿ.ಸಿ. ಪಾಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಸುಪ್ರೀಂ ಕೋರ್ಟ್ ಮಾರ್ಗ ಸೂಚನೆಗಳ ಉಲ್ಲಂಘನೆಯಾಗಿದೆ. ಹಾಗಾಗಿ ಸರ್ಕಾರ ಕೂಡಲೇ 59 ಜಾತಿಗಳನ್ನು ಒಂದು ಪ್ರತ್ಯೇಕ ಪ್ರವರ್ಗವನ್ನಾಗಿ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.