ADVERTISEMENT

ವಾಣಿವಿಲಾಸ ಜಲಾಶಯ ಪ್ರದೇಶದ ಸ್ವಚ್ಛತೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 12:53 IST
Last Updated 12 ಜನವರಿ 2025, 12:53 IST
ಆಲೂರು ಸಿದ್ದರಾಮಣ್ಣ
ಆಲೂರು ಸಿದ್ದರಾಮಣ್ಣ   

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಅಣೆಕಟ್ಟೆ ಸುತ್ತಮುತ್ತ ಹಾಗೂ ಆರನಕಣಿವೆ ರಂಗನಾಥಸ್ವಾಮಿ ದೇವಸ್ಥಾನದ ಪ್ರದೇಶದಲ್ಲಿ ಸಂಬಂಧಿಸಿದವರು ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರುಸೇನೆ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ ಆಗ್ರಹಿಸಿದ್ದಾರೆ.

ವಾಣಿವಿಲಾಸ ಜಲಾಶಯ ಶನಿವಾರ ಗರಿಷ್ಠಮಟ್ಟ (130ಅಡಿ) ತಲುಪಿದ್ದು, ಸತತ ಮೂರನೇ ಬಾರಿಗೆ ಯಾವ ಕ್ಷಣದಲ್ಲಾದರೂ ಕೋಡಿಯ ಮೂಲಕ ಹೆಚ್ಚುವರಿ ನೀರು ಹೊರಬರಬಹುದು. ಹೀಗಾಗಿ ಕೋಡಿಯಲ್ಲಿ ಹರಿಯುವ ನೀರು ನೋಡಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಕೋಡಿ ನೋಡಲು ಬರುವ ಪ್ರವಾಸಿಗರು ಪಕ್ಕದಲ್ಲಿಯೇ ಇರುವ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದು ವಾಡಿಕೆ. ಪ್ರವಾಸಿಗರಿಗೆ ಈ ಜಾಗದಲ್ಲಿ ಊಟ–ವಸತಿ ಸೌಲಭ್ಯ ಇಲ್ಲದ ಕಾರಣಕ್ಕೆ ಮನೆಯಿಂದಲೇ ಅಡುಗೆ ತರುತ್ತಾರೆ. ತಿಂದ ಎಲೆಗಳನ್ನು, ನೀರಿನ ಖಾಲಿ ಬಾಟೆಲ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವ ಕಾರಣ ಕಸದ ರಾಶಿ ಬೀಳುತ್ತದೆ. ಜೊತೆಗೆ ಕೆಲವು ಭಕ್ತರು ದೇವರಿಗೆ ಕುರಿ, ಕೋಳಿ ಬಲಿ ಕೊಟ್ಟು ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದ ಅಡಿಕೆ ಪಟ್ಟೆಗಳನ್ನು ಬಿಸಾಡಿ ಹೋಗುತ್ತಾರೆ. ಮಾಂಸದ ತ್ಯಾಜ್ಯ, ಊಟ ಮಾಡಿದ ಎಲೆಗಳಲ್ಲಿ ಬಿಟ್ಟ ಆಹಾರದಿಂದ ಇಡೀ ಆವರಣದಲ್ಲಿ ದುರ್ವಾಸನೆ ಆವರಿಸುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಜ.18 ರಂದು ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದು, ಅಷ್ಟರೊಳಗೆ ಕುರಿ ಕೋಳಿ ಬಲಿ ನೀಡಿದ ನಂತರ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಮಾಂಸದ ಅಡುಗೆ ತಯಾರಿಸಿ ಊಟ ಮಾಡಲು ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ಊಟ ಮಾಡಿದ ಎಲೆಗಳನ್ನು, ಹಾಕಲು ಕಸದ ತೊಟ್ಟಿಗಳನ್ನು ನಿರ್ಮಿಸಿ ಪ್ರತಿದಿನ ವಿಲೇವಾರಿ ಮಾಡಬೇಕು. ಸ್ವಚ್ಛತೆ ನಿರ್ವಹಣೆಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಬೇಕು. ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಿ ಅದಕ್ಕೆ ತಗುಲುವ ವೆಚ್ಚವನ್ನು ಪ್ರವಾಸಿಗರಿಂದ ಸಂಗ್ರಹಿಸಬೇಕು ಎಂದು ಸಿದ್ದರಾಮಣ್ಣ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.