ADVERTISEMENT

ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಗುರುವಂದನೆ: ಹಳೆ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:52 IST
Last Updated 26 ಡಿಸೆಂಬರ್ 2025, 5:52 IST
ಧರ್ಮಪುರದ ಶ್ರೀ ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆ
ಧರ್ಮಪುರದ ಶ್ರೀ ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆ   

ಧರ್ಮಪುರ: ಇಲ್ಲಿನ ಶ್ರೀ ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಮಾಗಮ ಮತ್ತು ಗುರುವಂದನಾ ಕಾರ್ಯಕ್ರಮ ಡಿ. 27ರಂದು (ಶನಿವಾರ) ನಡೆಯಲಿದೆ.

ಹಲವು ವರ್ಷಗಳ ಈ ಭಾಗದ ವಿದ್ಯಾರ್ಥಿಗಳು ಪ್ರೌಢಶಿಕ್ಷಣ ಕಲಿಯಲು ದೂರದ ನಗರಕ್ಕೆ ಹೋಗಬೇಕಿತ್ತು, ಅಂತಹ ಸಂದರ್ಭದಲ್ಲಿ ಬಸ್ ಸಂಚಾರವೂ ಸಹ ಇರಲಿಲ್ಲ. ಇದನ್ನು ಮನಗಂಡ ಅಂದಿನ ಕೃಷಿ ಸಚಿವ ಬಿ.ಎಲ್.ಗೌಡರ ಪರಿಶ್ರಮ, ವಿದ್ಯಾಸಂಸ್ಥೆ ಆರಂಭಿಸಲು ಮೂರು ಎಕರೆ ಭೂಮಿ ದಾನ ಮಾಡಿದ ಖುದ್ದೂಸ್ ಸಾಬ್ ಅವರ ದೂರದೃಷ್ಟಿ ಮತ್ತು ಅರಳೀಕೆರೆ ಸಣ್ಣಪ್ಪ ಹಾಗೂ ಅವರ ಸ್ನೇಹಿತರ ಶಿಕ್ಷಣ ಪ್ರೇಮದಿಂದ 24 ಜುಲೈ 1974ರಲ್ಲಿ ಧರ್ಮಪುರ ವಿದ್ಯಾ ಸಂಸ್ಥೆ ನೋಂದಣಿಯಾಗಿ ಆರಂಭವಾಗಿದ್ದೆ ಶ್ರೀ ಪಂಚಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆ.

ನಡೆದು ಬಂದ ದಾರಿ: ಹೋಬಳಿಯ ಅರಳೀಕೆರೆ, ಹಲಗಲದ್ದಿ, ಖಂಡೇನಹಳ್ಳಿ, ಹೊಸಕೆರೆ, ಮದ್ದಿಹಳ್ಳಿ, ಸಕ್ಕರ, ಶ್ರವಣಗೆರೆ, ಕಣಜನಹಳ್ಳಿ ಮತ್ತಿತರ ಹಳ್ಳಿಗಳ ವಿದ್ಯಾರ್ಥಿಗಳಿಗಾಗಿ ಆರಂಭವಾದ ಶಾಲೆ 1979ರಲ್ಲಿ ಸರ್ಕಾರದ ಅನುದಾನಕ್ಕೆ ಒಳಪಟ್ಟಿತ್ತು. ಅಂದಿನಿಂದಲೂ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು.1996ರಿಂದ 1999ರ ಅವಧಿಯಲ್ಲಿ 540ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರವೇಶ ಪಡೆದಿದ್ದರಿಂದ 1999ರಲ್ಲಿ ಉಪ ಪ್ರಾಂಶುಪಾಲ ಹುದ್ದೆ ಸೃಜಿಸಲ್ಪಟ್ಟಿತು. ಈಗಲೂ 235 ವಿದ್ಯಾರ್ಥಿಗಳಿದ್ದಾರೆ.

ADVERTISEMENT

ಮೂರು ಎಕರೆ ವಿಶಾಲವಾದ ಜಾಗ ಮತ್ತು ಕಲಿಯುವ ವಿದ್ಯಾರ್ಥಿಗಳ ಆಸಕ್ತಿಯ ಪ್ರೇರಣೆ ಹಾಗೂ ವಿದ್ಯಾ ಸಂಸ್ಥೆಯವರ ಶೈಕ್ಷಣಿಕ ಗುರುತರ ಜವಾಬ್ದಾರಿಯಿಂದಾಗಿ 1982ರಲ್ಲಿ ಪದವಿಪೂರ್ವ ಕಾಲೇಜು ಸ್ಥಾಪನೆ ನಂತರ 1991ರಲ್ಲಿ ವೃತ್ತಿ ಶಿಕ್ಷಣ ವಿಭಾಗದಲ್ಲಿ ರೇಷ್ಮೆ ಕೃಷಿ ಮತ್ತು ಎಲೆಕ್ಟ್ರಿಕಲ್ ವೈರಿಂಗ್ ವಿಭಾಗಗಳು ಪ್ರಾರಂಭವಾದವು. ಆ ನಂತರ ಉನ್ನತ ಶಿಕ್ಷಣಕ್ಕೆ ಪ್ರಾತಿನಿಧ್ಯ ಕಲ್ಪಿಸುವ ಸಲುವಾಗಿ ಧರ್ಮಪುರ ವಿದ್ಯಾ ಸಂಸ್ಥೆಯವರು ಪದವಿ ಕಾಲೇಜು ಪ್ರಾರಂಭಿಸಲು ಯೋಚಿಸಿದಾಗ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿಗಳಾಗಿದ್ದ ಬೇತೂರು ಪಾಳ್ಯ ಬಿ.ಕೆ.ಸೀತಾರಾಮಯ್ಯನವರು 1992-93ರಲ್ಲಿ ಪದವಿ ಕಾಲೇಜು ಆರಂಭಿಸಲು ಸಹಾಯ ಮಾಡಿದರು.

ಇದರಿಂದಾಗಿ ಪ್ರೌಢಶಾಲೆಯಿಂದ ಆರಂಭವಾದ ಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಕ್ಯಾಂಪಸ್‌ನಲ್ಲಿ ಪದವಿಯವರೆಗೂ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಈಗಿರುವ ಆಡಳಿತ ಮಂಡಳಿಯ ನಿರ್ದೇಶಕರು ವಿದ್ಯಾರ್ಥಿಗಳ ಉಚಿತ ಕಲಿಕೆಗೆ ಆಸರೆಯಾಗಿದ್ದಾರೆ.

ಡಿ. 27ರಂದು 1982-84ರ ಸಾಲಿನ ಹಳೇ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ 8ಕ್ಕೆ ಮೆರವಣಿಗೆ ಮತ್ತು ಚಿಕ್ಕನಹಳ್ಳಿ ವೀರಗಾಸೆ ತಂಡದವರಿಂದ ನೃತ್ಯ ಹಾಗೂ 10ಗಂಟೆಗೆ ಗುರುಗಳ ಗೌರವ ಸಮರ್ಪಣೆ, ಮಧ್ಯಾಹ್ನ 3ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು 1982-84ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.