ADVERTISEMENT

ದಿಂಡಾವರ: ರೈತರ ಹೋರಾಟ ಬೆಂಬಲಿಸಿ ಗ್ರಾ.ಪಂ. ಕಚೇರಿ ಮುಂದೆ ಪ್ರತಿಭಟನೆ

ದಿಂಡಾವರ: ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:25 IST
Last Updated 4 ಮಾರ್ಚ್ 2026, 6:25 IST
ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮುಂದೆ ಖಾಲಿ ಕೊಡಗಳನ್ನು ಇಟ್ಟು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು
ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮುಂದೆ ಖಾಲಿ ಕೊಡಗಳನ್ನು ಇಟ್ಟು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು   

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಸೋಮವಾರದಿಂದ ಆರಂಭಿಸಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಬೆಂಬಲಿಸಿ ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಮಂಗಳವಾರ ನೂರಾರು ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಖಾಲಿ ಕೊಡ ಇಟ್ಟು ಪ್ರತಿಭಟನೆ ನಡೆಸಿದರು.

ದಿಂಡಾವರ ಗ್ರಾಮದ ಜನರು 15 ವರ್ಷದಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದೇವೆ. ಪ್ರತಿವರ್ಷ ಬೇಸಿಗೆ ಬಂದಾಗ ಟ್ಯಾಂಕರ್‌ ನೀರು ಕಳಿಸಿ ಜನರ ಕಣ್ಣೊರೆಸುವ ನಾಟಕ ನಡೆಯುತ್ತಲೇ ಇದೆ. 1,000 ಅಡಿವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರು ಹೊಂದಿಸುವುದೇ ನಿತ್ಯದ ಕಾಯಕವಾಗಿದೆ’ ಎಂದು ಗ್ರಾಮದ ರೈತ ಮಹಿಳೆ ಪುಟ್ಟಮ್ಮ ಆರೋಪಿಸಿದರು.

‘16 ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಜವನಗೊಂಡನಹಳ್ಳಿಯಲ್ಲಿ 256 ದಿನ ಧರಣಿ ನಡೆಸಿದ್ದೆವು. ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಆದೇಶ ಆಗಿದೆ ಎನ್ನಲಾಗುತ್ತಿದೆ. ಆದರೆ ಕಾಮಗಾರಿಗೆ ಹಣ ಬಿಡುಗಡೆ ಆಗಿರುವ ಮಾಹಿತಿ ಇಲ್ಲ. ಹೀಗಾಗಿ ನಮ್ಮ ರೈತ ಮುಖಂಡರು ಚಿತ್ರದುರ್ಗದಲ್ಲಿ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಒಂದೂವರೆ ದಿನ ಕಳೆದರೂ ಉಪವಾಸ ನಿರತರನ್ನು ಭೇಟಿ ಮಾಡಿ ಮಾತುಕತೆ ನಡೆಸದ ಸಚಿವರು, ಅಧಿಕಾರಿಗಳದ್ದು ರೈತ ವಿರೋಧಿ ಧೋರಣೆ. ಧರಣಿ ನಡೆಸುತ್ತಿರುವವರಿಗೆ ಏನಾದರೂ ತೊಂದರೆ ಆದಲ್ಲಿ ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ನೀರಿಗಾಗಿ ವಿಧಾನಸೌಧ ಮುತ್ತಿಗೆಗೂ ನಾವು ಸಿದ್ಧ’ ಎಂದು ಎಚ್ಚರಿಸಿದರು.

ADVERTISEMENT

ಅಧಿಕಾರಿಗಳ ದೌಡು: ತಾಲ್ಲೂಕು ಪಂಚಾಯಿತಿ ಇಒ ಪ್ರಮೋದ್, ತಹಶೀಲ್ದಾರ್ ಎಂ. ಸಿದ್ದೇಶ್ ಗ್ರಾಮಕ್ಕೆ ತೆರಳಿ ಪ್ರತಿಭಟನನಿರತರ ಜೊತೆ ಮಾತುಕತೆ ನಡೆಸಿದರು.

‘ಎರಡು ದಿನದ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ಸಾಕಷ್ಟು ನೀರು ಸಿಕ್ಕಿದೆ. ಅಲ್ಲಿಂದ ಗ್ರಾಮಕ್ಕೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಬುಧವಾರ ರಾತ್ರಿ ವೇಳೆಗೆ ನೀರು ಕೊಡುತ್ತೇವೆ. ಅಲ್ಲಿಯವರೆಗೆ ಸಚಿವ ಡಿ. ಸುಧಾಕರ್ ಅವರು ಸ್ವಂತ ಖರ್ಚಿನಲ್ಲಿ ಕಳಿಸಿರುವ ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ. ಗ್ರಾಮಸ್ಥರು ಸಹಕರಿಸಬೇಕು’ ಎಂದು ಪ್ರಮೋದ್ ಮನವಿ ಮಾಡಿದರು.

‘ಪೈಪ್‌ಲೈನಿನಲ್ಲಿ ನೀರು ಬಿಡುವಾಗ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಬೇಕು. ಆಗ ಮಾತ್ರ ಯಾರಿಗೂ ನಲ್ಲಿಗೆ ಪಂಪ್ ಅಳವಡಿಸಿ ನೀರೆತ್ತಲು ಆಗುವುದಿಲ್ಲ’ ಎಂದು ಗ್ರಾಮಸ್ಥರು ಸಲಹೆ ನೀಡಿದಾಗ ಇಒ ಮತ್ತು ತಹಶೀಲ್ದಾರ್ ಸಮ್ಮತಿಸಿದರು.

ಪ್ರತಿಭಟನೆಯಲ್ಲಿ ಎಲ್. ವಿರೂಪಾಕ್ಷ, ಮಂಜುನಾಥ್, ಗೋವಿಂದರಾಜ್, ಜಿ. ದೇವರಾಜ್, ರಾಜಮ್ಮ,ಅಂಜನಮ್ಮ, ಡಿ. ಭಾಗ್ಯಮ್ಮ, ಪದ್ಮ, ಮಮತಾ, ಇಂದಿರಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.