ADVERTISEMENT

ಡಾ. ಕೃಷ್ಣಮೂರ್ತಿ ಹನೂರು, ಸಿರಿಯಮ್ಮ ಅವರಿಗೆ ‘ಸಿರಿ ಬೆಳಗು’ ಪ್ರಶಸ್ತಿ

ಹಾಡುಗಳನ್ನು ಬೆಳಕಿಗೆ ತಂದ ಡಾ. ಕೃಷ್ಣಮೂರ್ತಿ ಹನೂರು ಅವರಿಗೂ ಪ್ರಶಸ್ತಿ

ಜಿ.ವಿ.ಆನಂದಮೂರ್ತಿ
Published 2 ಅಕ್ಟೋಬರ್ 2021, 2:27 IST
Last Updated 2 ಅಕ್ಟೋಬರ್ 2021, 2:27 IST
ಸಿರಿಯಮ್ಮ
ಸಿರಿಯಮ್ಮ   

ಚಿತ್ರದುರ್ಗ: ಈಚೆಗೆ ಅಸ್ತಿತ್ವಕ್ಕೆ ಬಂದಿರುವ ‘ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನ’ ತನ್ನ ಮೊದಲ ರಾಜ್ಯಮಟ್ಟದ ‘ಸಿರಿ ಬೆಳಗು’ ಪ್ರಶಸ್ತಿಯನ್ನು ಚಳ್ಳಕೆರೆ ತಾಲ್ಲೂಕು, ಯಲಗಟ್ಟೆ ಗೊಲ್ಲರಹಟ್ಟಿಯ ಸಿರಿಯಮ್ಮ ಮತ್ತು ಸಿರಿಯಜ್ಜಿ ಹಾಡುವ ಎಲ್ಲ ಹಾಡುಗಳನ್ನು ಮೊದಲ ಬಾರಿಗೆ ಬೆಳಕಿಗೆ ತಂದ ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಅವರಿಗೆ ನೀಡಿ ಗೌರವಿಸಲಿದೆ.

ಅ.3ರಂದು ‘ಸಿರಿಬೆಳಗು ಪ್ರಶಸ್ತಿ’ ಪ್ರದಾನ ಸಮಾರಂಭ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಿರಿಯಮ್ಮನನ್ನು ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಮಾತನಾಡಿಸಿದಾಗ ಅವರು ಹೇಳಿದ ಮಾತುಗಳು:

‘ಯವ್ವಾ, ನನಗೆ ಪದ ಕಲಿಸ್ತೋಳು ನಮ್ಮ ಹಟ್ಟೀಲೇ ಇದ್ದ ಸಿರಿಯಜ್ಜಿ. ನಮ್ಮ ಹಟ್ಟೀಗೆ ಹಿರೀಕಳು. ಅವಳು ಪದ ಹಾಡುತ್ತಿದ್ದ ಸೊಲ್ಲನ್ನೇ ಹಿಡಕೊಂಡು ನಾನು ಕಲಿತೆ.
ನಾನು ತಪ್ಪು ನುಡಿದರೆ ತಿದ್ದೋಳು. ಇಳ್ಳೂ ಹಗಲೂ ಅವಳ ಹಟ್ಟಿಯಲ್ಲೇ ಇರುತ್ತಿದ್ದೆ. ರಾತ್ರಿಯಿಡೀ ನಿದ್ರೆ ಬರೋಗಂಟ ಪದ ಹೇಳಿಕೊಡೋಳು. ನಾನೇನಾದರೂ ಹಾಡೋದು ಹೆಜ್ಜೆ ತಪ್ಪಿದರೆ, ಅವಳೇ ಸೊಲ್ಲೆತ್ತಿ ಕೋಡೋಳು. ಹಿಂಗೆ ಸಾವಿರಾರು ರಾತ್ರಿ ಅವಳ ಜೊತೆಗೇನೆ ಇದ್ದೂ ಇದ್ದೂ ಪದ ಹಾಡೋದನ್ನ ಕಲಿತೆ. ಇಸ್ಕೂಲು- ಮಠ ಮುಖ ನೋಡಿದೋಳಲ್ಲ ನಾನು. ಸಿರಿಯಜ್ಜಿಯೇ ನನ್ನ ಆದಿ ಗುರು ಕಣವ್ವಾ’ ಎಂದು ಸಿರಿಯಮ್ಮ ಗುರುವನ್ನು ನೆನೆದು ಹೇಳಿದಳು.
ಬಡತನದಲ್ಲೇ ನವೆದ ಸಿರಿಯಮ್ಮ ತಲೆತುಂಬಾ ಸೆರಗು, ಕೊರಳಿಗೆ ಚಿಂತಾಕು ತೊಟ್ಟ 70ರ ಆಸುಪಾಸಿನಲ್ಲಿದ್ದ ಆಕೆಯ ‘ಸೆಬೆರೆ’ ಬಂದ ಕಣ್ಣುಗಳು ಮುಗುಳುನಗುತ್ತಿದ್ದವು. ಅಲ್ಲೇ ಜಗುಲಿಯ ಮೇಲೆ ಮತ್ತೊಂದು ಹಣ್ಣಾದ ಹೆಣ್ಣು ಜೀವ ಕುಳಿತಿತ್ತು. ಸಿರಿಯಮ್ಮಜ್ಜಿ ನೆಟ್ಟಗೆ ಹೋಗಿ ಆಕೆಯ ಪಕ್ಕದಲ್ಲೇ ಕುಳಿತುಕೊಂಡು ಮಾತು ಮುಂದುವರೆಸಿದಳು.

ADVERTISEMENT

‘ಇವಳೇ ನಮ್ಮವ್ವ ಕ್ಯಾತಮ್ಮ. ನಮ್ಮ ಅಪ್ಪ ಸಿರಿಯಪ್ಪ. ಕರಡೇರ ಗೊಲ್ಲರು ನಾವು. ಇದೇ ಗೊಲ್ಲರಹಟ್ಟಿಯಲ್ಲಿಯೇ ನಾನು ಹುಟ್ಟಿ ಬೆಳೆದದ್ದು. ಗಂಡ ಚಿಕ್ಕಣ್ಣ ಅಮ್ತ. ಈಗ ಮೂರು ನಾಲ್ಕು ವರ್ಸದ ಕೆಳಗೆ ತೀರಿಕೊಂಡರು. ನಮ್ಮವ್ವ ಕ್ಯಾತಮ್ಮನೂ ಪದಗಾರ್ತಿ. ಇವರನ್ನೆಲ್ಲಾ ನೋಡುತ್ತಿದ್ದ ನನಗೂ ಪದ ಹಾಡೋದು ಕಲೀಬೇಕು ಅನ್ನಿಸೋದು! ಕೊನೆಗೆ ಸಿರಿಯಜ್ಜಿಯ ಬೆನ್ನುಬಿದ್ದು ಹಾಡೋದನ್ನ ಕಲಿತೆ. ಬಡತನ ಅಂಬೋದು ನಮಗೆ ಲೆಕ್ಕಕ್ಕೇ ಬರೊಲ್ಲದು! ಹಿಡಿಯಷ್ಟು ಸೆಲ್ಲಲು ಒಂದು ಸ್ಯಾರೆಯಷ್ಟು ಭೂಮಿ ಎಂಬೋದು ನಮಗೆ ಇರಲಿಲ್ಲ. ಸಸಿ ನಾಟಿ ಹಾಕೋದು, ಕಳೆ ಕೀಳೋದು ಹಿಂಗೆ ಕೂಲಿ - ನಾಲಿ ಮಾಡಿ, ಕುರಿಮೇಸಿಕೊಂಡು ಕಾಲ ಹಾಕಿದ್ದೀವಿ. ಈಗಲೂ ನಾನು ಕುರಿಮೇಸಿಕೊಂಡೇ ಬದುಕುತ್ತಿರೋದು. ರಾತ್ರಿಹೊತ್ತು ಮರ್ರೋ ಅಂಬೋ ಕತ್ತಲು! ಲಾಟೀನು ಇಲ್ಲದ ದಿನಗಳೂ ನಮ್ಮ ಪಾಲಿಗೆ ಇದ್ದವು. ಆದರೂ ಇದುವರೆಗೂ ಯಾರ ಮುಂದೆಯೂ ದೇಹೀ ಎಂದು ಕೈ ಚಾಚಿದ ಹೆಣ್ಣಲ್ಲ ನಾನು’ ಎಂದು ಸಿರಿಯಮ್ಮ ಹೇಳಿದಳು. ಬದುಕಿನ ಕಷ್ಟಗಳು ಸಬಲೀಕರಣದ ರೂಪಕದಂತೆ ಇದ್ದ ಸಿರಿಯಮ್ಮನ ಚೈತನ್ಯವನ್ನು ಹಿಮ್ಮೆಟ್ಟಿಸಲು ಸೋತಿದ್ದವು.
‘ಸಿರಿಯಜ್ಜಿ ಸಾವಿರಾರು ಪದ ಹಾಡೋ ಸರಸೋತಿ ಅವಳು. ನಾನು ಕಲಿತ ಕಾಲಕ್ಕೆ
ಇವೆಲ್ಲಾ ನಮಗೆ ಕೊಡ್ತಾರೆ ಅಂಬ್ತಾನೂ ಗೊತ್ತಿರಲಿಲ್ಲ! (ಪ್ರಶಸ್ತಿ ಕುರಿತು). ನಿಮ್ಮನ್ನೆಲ್ಲಾ ನೋಡ್ತಿದ್ದರೆ, ಸಿರಿಯಜ್ಜಿಯೇ ಕಣ್ಣಮುಂದೆ ಬರ್ತಾಳೆ. ಅವಳು ಹೇಳಿಕೊಟ್ಟ ‘ಸಿರಿಯಣ್ಣ ದೇವರು’ ‘ಸತ್ಯಮ್ಮ’ ‘ಎತ್ತಪ್ಪ’ ‘ಜುಂಜಪ್ಪ’ ‘ಈರಣ್ಣ ದೇವರು’ ‘ಕ್ಯಾತಪ್ಪ ದೇವರು’ ‘ಕಾಟುಂದೇವರು’ ‘ಚಿಕ್ಕಣ್ಣ ದೇವರು’ ‘ಕದಿರೆ ನರಸಿಂಹ ದೇವರು’ ಇವರನ್ನೆಲ್ಲಾ ಕುರಿತು ಹಾಡೋಕೆ ಬರುತ್ತದೆ ನನಗೆ, ಜೊತೆಗೆ ರಾಗಿ ಬೀಸೋ ಪದ, ಹಸೆ ಹಾಡು, ಮದುವೆ ಹಾಡುಗಳು ಇವೆಲ್ಲಾ ಸೆಂದಾಕಿ ಬರ‍್ತವೆ’ ಎಂದು ಹಾಡತೊಡಗಿದಳು. ಸುಳ್ಳು - ಕಪಟ ಅರಿಯದ ಮುಗ್ದ ಮನಸ್ಸು, ಯಾರ ಬಗ್ಗೆಯೂ ಕೊಂಕಿಲ್ಲದ ನುಡಿ ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು.

(ಚಿತ್ರ : ನಿಸರ್ಗ ಗೋವಿಂದರಾಜು ಚಳ್ಳಕೆರೆ)

ನಾಳೆ ಪ್ರಶಸ್ತಿ ‍ಪ್ರದಾನ

ಚಳ್ಳಕೆರೆ: ತಾಲ್ಲೂಕಿನ ಚಿಕ್ಕೇನಹಳ್ಳಿ ಯಲಗಟ್ಟೆ ಗೊಲ್ಲರಹಟ್ಟಿಯ ಜಾನಪದ ಸಿರಿಯಜ್ಜಿ ಹೆಸರಿನ ‘ಸಿರಿ ಬೆಳಗು’ ಪ್ರಶಸ್ತಿ ಪ್ರದಾನ ಸಮಾರಂಭ ಅ.3ರಂದು ತಾಲ್ಲೂಕಿನ ಬೆಳಗೆರೆ ಕೃಷ್ಣಶಾಸ್ತ್ರಿ ವಿದ್ಯಾಮಂದಿರದಲ್ಲಿ ನಡೆಯಲಿದೆ.

‘ಸಿರಿಯಜ್ಜಿ ಹಾಡಿದ ಕಥನ ಗೀತೆಗಳನ್ನು ಬರೆದು ಅವುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ಅಜ್ಜಿಯನ್ನು ಸಮಾಜಕ್ಕೆ ಪರಿಚಯಿಸಿದ ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಹಾಗೂ ಹಾಡುಗಳನ್ನು ಹಾಡಿರುವ ಸಿರಿಯಮ್ಮ ಅವರಿಗೆ ಮೊದಲ ನೀಡಲಾಗುವುದು’ ಎಂದು ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಕಲಮರಹಳ್ಳಿ ಮಲ್ಲಿಕಾರ್ಜುನ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾಡಿನ ಸಾಂಸ್ಕೃತಿಕ ಲೋಕದ ರೂವಾರಿ ಎಂದೇ ಪ್ರಸಿದ್ಧವಾಗಿರುವ ಸಿರಿಯಜ್ಜಿ ಅವರು ಕಾಡುಗೊಲ್ಲ ಬುಡಕಟ್ಟು ಸಮುದಾಯದ ಆರಾಧ್ಯ ದೈವಗಳಾದ ಚಿತ್ತಯ್ಯ, ಕಾಟಯ್ಯ, ಎತ್ತಪ್ಪ, ಜುಂಜಪ್ಪ, ಸಿರಿಯಣ್ಣ, ಚಿಕ್ಕಣ್ಣ, ವೀರಣ್ಣ, ಕ್ಯಾತಪ್ಪ ಮುಂತಾದ ಸಾಂಸ್ಕೃತಿಕ ವೀರರ ಬಗ್ಗೆ ಕಥನ ಕಾವ್ಯಗಳನ್ನು ಕಟ್ಟಿ ತಿಂಗಳುಗಟ್ಟಲೆ ನಿರಂತರ ಹಾಗೂ ನಿರರ್ಗಳವಾಗಿ ಹಾಡುವ ಮೂಲಕ ಅಭಿಜಾತ ಕಲಾವಿದೆಯಾಗಿದ್ದರು’ ಎಂದು ಹೇಳಿದರು.

ಪ್ರತಿಷ್ಠಾನದ ಕಾರ್ಯದರ್ಶಿ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಬೆಳಗೆರೆ ಪ್ರೊ. ರಾಜಶೇಖರಯ್ಯ, ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್, ವಿಮರ್ಶಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಮಹಿಳಾ ಚಿಂತಕಿ ಡಾ.ಎಚ್.ಎಲ್. ಪುಷ್ಪಾ, ಶಾಸಕ ಟಿ.ರಘುಮೂರ್ತಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಇದ್ದರು.‌ ನಿರ್ದೇಶಕ ನಿಸರ್ಗ ಗೋವಿಂದರಾಜು, ಸುರೇಶ್, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.