ಹಿರಿಯೂರು: ತಾಲ್ಲೂಕಿನ ಕಲ್ಲುವಳ್ಳಿ (ಜವನಗೊಂಡನಹಳ್ಳಿ ಹೋಬಳಿ)ಭಾಗದ ಆರೇಳು ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಾಕೀತು ಮಾಡಿದರು.
ಭಾನುವಾರ ತಾಲ್ಲೂಕಿನ ವಾಣಿವಿಲಾಸ ಅಣೆಕಟ್ಟೆ ಹಿನ್ನೀರಿನಿಂದ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ 128 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಶುದ್ಧೀಕರಣ ಘಟಕ ಹಾಗೂ ಜಾಕ್ ವೆಲ್ ಪಾಯಿಂಟ್ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.
‘ಕುಡಿಯುವ ನೀರು ಕೊಡಿ ಎಂದು ಕೇಳುವುದು ಜನರ ಹಕ್ಕು. ನೀರು ಪೂರೈಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಕೊಳವೆ ಮಾರ್ಗ ಅಳವಡಿಸಲು ಅಡ್ಡಿಯಾಗಿರುವ ಅರಣ್ಯ ಇಲಾಖೆ ಅನುಮತಿಯನ್ನು ಶೀಘ್ರವೇ ಪಡೆಯಬೇಕು. ಅಲ್ಲಿ ಯಾರಿಂದ ತಡವಾಗುತ್ತಿದೆ ಎಂಬುದನ್ನು ನನ್ನ ಗಮನಕ್ಕೆ ತಂದಲ್ಲಿ ಕ್ರಮ ವಹಿಸುತ್ತೇನೆ. ಮಳೆಗಾಲದಲ್ಲಿಯೇ ನೀರಿಗೆ ಇಷ್ಟೊಂದು ಹಾಹಾಕಾರ ಉಂಟಾದರೆ ಬೇಸಿಗೆಯಲ್ಲಿ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಬೇಕು. ಲಕ್ಕಿಹಳ್ಳಿ ವಿದ್ಯುತ್ ಕೇಂದ್ರ ಶೀಘ್ರ ಕಾರ್ಯಾರಂಭ ಮಾಡುವಂತಾಗಬೇಕು’ ಎಂದು ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಬಸವನಗೌಡ ಪಾಟೀಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಸನ್ ಭಾಷಾ, ಬೆಸ್ಕಾಂ ಅಧಿಕಾರಿ ಪೀರ್ ಸಾಬ್, ಮುಖಂಡರಾದ ಖಾದಿ ರಮೇಶ್, ಆರ್. ನಾಗೇಂದ್ರನಾಯ್ಕ್, ಅತಾವುಲ್ಲಾ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಶಮ್ಮು, ಮಹೇಶ್, ಲೋಕೇಶ್, ಕಾರ್ ಮೂರ್ತಿ, ರಂಗಸ್ವಾಮಿ, ಮುನ್ನ, ಗಿಡ್ಡೋಬನಹಳ್ಳಿ ಅಶೋಕ್, ಭೂತೇಶ್, ಕಣುಮಪ್ಪ, ತಿಪ್ಪೇಸ್ವಾಮಿ, ಗೋವಿಂದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.