ಚಿತ್ರದುರ್ಗ: ಸರ್ಕಾರಿ ಪ್ರೌಢಶಾಲೆಯಲ್ಲಿ ಇವರು ನೇಮಕಗೊಂಡಿದ್ದು ಇಂಗ್ಲಿಷ್ ವಿಷಯದ ಶಿಕ್ಷಕರಾಗಿ. ಆದರೆ, ಇವರಿಗೆ ಗಣಿತದ ಮೇಲೆ ಅತೀವ ಆಸಕ್ತಿ. ಬಿಡುವಿನ ಅವಧಿಯಲ್ಲಿ ಲೆಕ್ಕ ಹೇಳಿಕೊಡುವ ಇವರು, ಅನೇಕ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿ ವೇತನ (ಎನ್‌ಎಂಎಂಎಸ್) ದೊರೆಯುವಂತೆ ಮಾಡಿದ್ದಾರೆ.
ಹೊಸದುರ್ಗ ತಾಲ್ಲೂಕು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಂಗ್ಲಿಷ್ ಶಿಕ್ಷಕ ಆರ್.ಶಿವಶಂಕರ್ ಅವರ ಯಶೋಗಾಥೆ ಇದು.
ಕಬ್ಬಿಣದ ಕಡಲೆಯಂತಿದ್ದ ಗಣಿತಕ್ಕೆ ಸುಲಭ ಬೋಧನೆಯ ಮೂಲಕ ಸರಳ ರೂಪಕೊಟ್ಟರು. ಪ್ರತಿ ವರ್ಷ 35ರಿಂದ 40 ವಿದ್ಯಾರ್ಥಿಗಳು ಎನ್‌ಎಂಎಂಎಸ್ ಪರೀಕ್ಷೆ ಉತ್ತೀರ್ಣರಾಗುವಂತೆ ಮಾಡಿದರು. 13 ವರ್ಷಗಳಿಂದ ಒಂದೇ ಶಾಲೆಯ 436 ಮಕ್ಕಳು ₹ 2 ಕೋಟಿಗೂ ಹೆಚ್ಚು ವಿದ್ಯಾರ್ಥಿ ವೇತನ ಪಡೆಯುವಂತೆ ಮಾಡಿದರು.
ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ದಾಖಲೆ ಹೊಂದಿರುವ ಶಾಲೆಯ ಹಿಂದೆ ಇಂಗ್ಲಿಷ್ ಶಿಕ್ಷಕ ಶಿವಶಂಕರ ಅವರ ಅಪಾರ ಪರಿಶ್ರಮವಿದೆ. ಚಿಕ್ಕಂದಿನಿಂದಲೂ ಗಣಿತದ ಮೇಲೆ ಹಿಡಿತ ಹೊಂದಿದ್ದ ಅವರು ಅನಿವಾರ್ಯವಾಗಿ ಇಂಗ್ಲಿಷ್ ಭಾಷಾ ಶಿಕ್ಷಕರಾದರು. ಆದರೂ ಗಣಿತ ಬೋಧನೆಯ ಹಂಬಲ ಬಿಡದೇ, ಎನ್‌ಎಂಎಂಎಸ್ ಪರೀಕ್ಷೆಯ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಬೆಳಕಾದರು.
8ನೇ ತರಗತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಿರುವ ಈ ಪರೀಕ್ಷೆಗೆ ಗಣಿತವೇ ಆಧಾರವಾಗಿದ್ದು, ವಿದ್ಯಾರ್ಥಿಗಳಿಗೆ ಸುಲಭ ವಿಧಾನದ ಮೂಲಕ ಶಿವಶಂಕರ ಅವರು ಮನವರಿಕೆ ಮಾಡಿಕೊಡುತ್ತಾ ಬಂದಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳು ಪಿಯುಸಿವರೆಗೂ ಪ್ರತಿ ತಿಂಗಳು ₹ 1,000 ಹಣ ಪಡೆಯುವಂತೆ ಮಾಡಿದ್ದಾರೆ.
ಎನ್‌ಎಂಎಂಎಸ್ ವಿದ್ಯಾರ್ಥಿ ವೇತನವು ನೂರಾರು ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶಕ್ತಿ ತುಂಬಿದೆ. ಹಲವು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯಲು ಪ್ರೇಕರ ಶಕ್ತಿಯಾಗಿದೆ. ಹಲವರು ವೈದ್ಯರಾಗಿ, ಎಂಜಿನಿಯರ್ ಆಗಿ, ಲೆಕ್ಕಪರಿಶೋಧಕರಾಗಿ ಜೀವನವನ್ನು ಉಜ್ವಲಗೊಳಿಸಿಕೊಂಡಿದ್ದಾರೆ. ಸರಳ ಗಣಿತ ಬೋಧನೆಯ ಮೂಲಕ ಹೊಸದುರ್ಗ ತಾಲ್ಲೂಕು, ಕೋಟೆನಾಡಿನಲ್ಲಿ ಶಿವಶಂಕರ ಅವರು ಮಕ್ಕಳ ಹಾಗೂ ಪೋಷಕರ ಪ್ರೀತಿ ಸಂಪಾದನೆ ಮಾಡಿದ್ದಾರೆ. ವಿದ್ಯಾರ್ಥಿ ವೇತನದ ಕಾರಣದಿಂದಲೇ ಹೊಸದುರ್ಗ ಸರ್ಕಾರಿ ಶಾಲೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
56 ವರ್ಷ ವಯಸ್ಸಿನ ಶಿವಶಂಕರ ಅವರು ವಿದ್ಯಾರ್ಥಿಗಳ ಜೊತೆಗಿನ ಒಡನಾಟ, ಬೋಧನೆಯಿಂದ ಉತ್ಸಾಹ ಪಡೆಯುತ್ತಾರೆ. ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮದ ಅವರು, 30 ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ. 14 ವರ್ಷಗಳಿಂದ ಹೊಸದುರ್ಗ ಶಾಲೆಯಲ್ಲಿದ್ದಾರೆ. ಹಳೆಯ ವಿದ್ಯಾರ್ಥಿಗಳು ಶಿವಶಂಕರ ಅವರೊಂದಿಗೆ ಈಗಲೂ ಒಡನಾಟ ಹೊಂದಿದ್ದಾರೆ. ಉನ್ನತ ಶಿಕ್ಷಣ ಪಡೆಯುತ್ತಿದ್ದರೂ ಗಣಿತ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ಪಡೆಯುತ್ತಾರೆ. ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕ ಶಿವಶಂಕರ ಅವರಿಗೆ ಈ ಬಾರಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ.
ಶಾಲೆ ಆರಂಭಕ್ಕೆ ಮುನ್ನ ಶಾಲೆ ಮುಗಿದ ನಂತರ ಹಾಗೂ ಭಾನುವಾರ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇನೆ. ಸರ್ಕಾರ ಕೊಟ್ಟಿರುವ ಸೌಲಭ್ಯವು ಹೆಚ್ಚೆಚ್ಚು ಬಡಮಕ್ಕಳಿಗೆ ಸಿಗಬೇಕು ಎಂಬುದೇ ನನ್ನ ಗುರಿಆರ್.ಶಿವಶಂಕರ್. ಪ್ರಶಸ್ತಿ ಪುರಸ್ಕೃತ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.