ಮೊಳಕಾಲ್ಮುರು: ತಾಲ್ಲೂಕಿನ ಮೊಗಲಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿರುವ ಈಶ್ವರಸ್ವಾಮಿ ದೇವಸ್ಥಾನ ಮುಂಭಾಗದ ಸೇತುವೆ ಅತ್ಯಂತ ಕಿರಿದಾಗಿದ್ದು, ಅಪಘಾತ ಸ್ಥಳವಾಗಿ ಮಾರ್ಪಟ್ಟಿದೆ.
ಬಿ.ಜಿ.ಕೆರೆಯಿಂದ ಮೊಗಲಹಳ್ಳಿ ಮೂಲಕ ಮೊಳಕಾಲ್ಮುರು ಸಂಪರ್ಕಿಸುವ ಮೊಳಕಾಲ್ಮುರು-ಮಲ್ಪೆ ರಾಜ್ಯ ಹೆದ್ದಾರಿ-65 ಇದಾಗಿದ್ದು, ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ದೊಡ್ಡ ಹಳ್ಳಕ್ಕೆ ಈ ಸೇತುವೆಯನ್ನು ರಸ್ತೆ ವಿಸ್ತರಣೆಗೂ ಮುಂಚೆಯೇ ನಿರ್ಮಿಸಲಾಗಿದೆ. ರಸ್ತೆ ವಿಸ್ತರಣೆಯಾಗಿ 10 ವರ್ಷ ಕಳೆದರೂ ಸೇತುವೆಯನ್ನು ವಿಸ್ತರಿಸಿಲ್ಲ.
ಸೇತುವೆಯು ರಸ್ತೆಯ ತಿರುವು ಹಾಗೂ ಇಳಿಜಾರಿನಲ್ಲಿ ಇರುವ ಕಾರಣ ಎದುರಿಗೆ ಬರುವ ವಾಹನಗಳು ಸರಿಯಾಗಿ ಕಾಣಿಸುವುದಿಲ್ಲ. ಸೇತುವೆ ಇಕ್ಕೆಲಗಳಲ್ಲಿ ಗೋಡೆ ನಿರ್ಮಿಸಿಲ್ಲ. ಪರಿಣಾಮವಾಗಿ ಎರಡು ಸಲ ಬಸ್ಸು ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದಿದೆ. ದ್ವಿಚಕ್ರ ವಾಹನ ಅಪಘಾತಗಳು ಲೆಕ್ಕವಿಲ್ಲದಷ್ಟು ಸಂಭವಿಸಿವೆ.
ಇದೇ ರಸ್ತೆಯಲ್ಲಿ ಬರುವ ಬಹುತೇಕ ಸೇತುವೆಗಳನ್ನು 3-4 ವರ್ಷಗಳ ಹಿಂದೆ ನವೀಕರಣ ಮಾಡಲಾಯಿತು. ಈ ಸೇತುವೆಯನ್ನು ಮಾತ್ರ ಕೈ ಬಿಡಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಕ್ಕೆ ಹಲವು ಸಲ ತಂದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು.
ತಿಪ್ಪೇಸ್ವಾಮಿ ಹಾಗೂ ಸಿದ್ದು, ಗ್ರಾಮಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.