ADVERTISEMENT

ಚಿತ್ರದುರ್ಗ | ರೈತರ ಭೂಮಿ ಸ್ವಾಧೀನ ಪಡೆಯಬೇಡಿ: ಜೆ.ಯಾದವರೆಡ್ಡಿ

ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಯಾದವರೆಡ್ಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:38 IST
Last Updated 15 ಜುಲೈ 2025, 7:38 IST
ಜೆ.ಯಾದವರೆಡ್ಡಿ
ಜೆ.ಯಾದವರೆಡ್ಡಿ   

ಚಿತ್ರದುರ್ಗ: ‘ಕೃಷಿ ಭೂಮಿ ಉಳಿಸಿಕೊಳ್ಳಲು ದೇವನಹಳ್ಳಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ನರಗುಂದ– ನವಲಗುಂದ ರೀತಿಯಲ್ಲಿ ಆಗಲು ರಾಜ್ಯ ಸರ್ಕಾರ ಆಸ್ಪದ ಕೊಡಬಾರದು. ಯಾವುದೇ ಕಾರಣಕ್ಕೂ ರೈತರ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳಬಾರದು’ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಜೆ.ಯಾದವರೆಡ್ಡಿ ಆಗ್ರಹಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತಿನ ವರಸೆ ಬದಲಿಸಿದ್ದಾರೆ. ಮತ್ತೊಂದೆಡೆ ಸಚಿವ ಎಂ.ಬಿ.ಪಾಟೀಲ್‌ ಭೂಮಿಯನ್ನು ಹಿಂದಿರುಗಿಸಿದರೆ ಬಂಡವಾಳ ಹೂಡಲು ಯಾವ ಉದ್ಯಮಿಗಳೂ ಬರುವುದಿಲ್ಲ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆಂಬ ಹೇಳಿಕೆ ನೀಡಿದ್ದಾರೆ. ಇದು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆ ಎನ್ನುವುದರಲ್ಲಿ ಅನುಮಾನವಿಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೈಗಾರಿಕೆಗೆ ಕೃಷಿ ಭೂಮಿಯೇ ಬೇಕೆಂಬ ಹಠ ಏಕೆ? ಮೂವತ್ತು ವರ್ಷಗಳ ಹಿಂದೆ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಸಾವಿರಾರು ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಚನ್ನರಾಯಪಟ್ಟಣದಲ್ಲಿರುವ 600 ಕುಟುಂಬಗಳಲ್ಲಿ ದಲಿತರ ನಾಲ್ಕು ನೂರು ಕುಟುಂಬಗಳಿವೆ. ಎಲ್ಲರೂ ತುಂಡು ಭೂಮಿಯನ್ನು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅದನ್ನೇ ಕಿತ್ತುಕೊಂಡರೆ ಅವರ ಗತಿಯೇನು’ ಎಂದು ಪ್ರಶ್ನಿಸಿದರು.

ADVERTISEMENT

ರೈತ ಮುಖಂಡರಾದ ಜಿ.ಸುರೇಶ್‍ಬಾಬು, ಧನಂಜಯ, ಎಂ.ಬಿ.ತಿಪ್ಪೇಸ್ವಾಮಿ, ಸಮಿತಿಯ ಟಿ.ಶಫಿವುಲ್ಲಾ, ಶಿವಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.