ADVERTISEMENT

ಬೆಳೆ ಪರಿಹಾರ ವಿತರಣೆಯಲ್ಲಿ ಜಿಲ್ಲಾಡಳಿತ ವಿಫಲ

ಡಿ.ಸಿ ಕಚೇರಿ ಎದುರು ರೈತಸಂಘ ಹಾಗೂ ಹಸಿರು ಸೇನೆ ಸದಸ್ಯರಿಂದ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:23 IST
Last Updated 11 ಡಿಸೆಂಬರ್ 2025, 6:23 IST
ಬೆಳೆನಷ್ಟ ಪರಿಹಾರ ಬಿಡುಗಡೆ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ರೈತಸಂಘ ಹಾಗೂ ಹಸಿರು ಸೇನೆ ಸದಸ್ಯರು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು
ಬೆಳೆನಷ್ಟ ಪರಿಹಾರ ಬಿಡುಗಡೆ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ರೈತಸಂಘ ಹಾಗೂ ಹಸಿರು ಸೇನೆ ಸದಸ್ಯರು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು   

ಚಿತ್ರದುರ್ಗ: ಹಲವು ವರ್ಷಗಳಿಂದ ಜಿಲ್ಲೆಯ ರೈತರು ಅತೀವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದರೂ ಜಿಲ್ಲಾಡಳಿತ ನ್ಯಾಯಯುತವಾಗಿ ಬೆಳೆನಷ್ಟ ಪರಿಹಾರ ನೀಡಲು ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ಪ್ರವಾಸಿ ಮಂದಿರದ ಆವರಣದಿಂದ ಮೆರವಣಿಗೆಯಲ್ಲಿ ಬಂದ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

2022–23ನೇ ಸಾಲಿನ ಹವಾಮಾನ ಆಧಾರಿತ ಅಡಿಕೆ ಬೆಳೆಗೆ ವಿಮಾ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ವಿಮಾ ಕಂಪನಿಗಳ ಜೊತೆ ಶಾಮೀಲಾಗಿ ರೈತರನ್ನು ವಂಚಿಸುತ್ತಿದ್ದಾರೆ. ಜಿಲ್ಲೆಯ 6 ತಾಲ್ಲೂಕುಗಳಿಂದ ₹20 ಕೋಟಿಯಷ್ಟು ವಿಮಾ ಮೊತ್ತ ಪಾವತಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

2023–24ನೇ ಸಾಲಿನಲ್ಲಿ ಉಂಟಾದ ಅತಿವೃಷ್ಟಿಯಿಂದ ಜಿಲ್ಲೆಯ ರೈತರು ಅಪಾರ ಪ್ರಮಾಣದ ಬೆಳೆನಷ್ಟ ಅನುಭವಿಸಿದರು. ಬೆಳೆನಷ್ಟ ಪರಿಹಾರವನ್ನು ಬೋಗಸ್‌ ಖಾತೆಗಳಿಗೆ ಹಾಕಿರುವುದು ಪತ್ತೆಯಾಗಿದ್ದು ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲ. ₹46 ಕೋಟಿ ಹಣದ ಅವ್ಯವಹಾರ ನಡೆದಿದ್ದು ಪೂರ್ತಿ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

2024–25ನೇ ಸಾಲಿನಲ್ಲಿ ಮಳೆಯ ಕೊರತೆಯುಂಟಾಗಿ ಜಿಲ್ಲೆಯ ಬಹುತೇಕ ಭಾಗದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೆ ಬೆಳೆ ವಿಮೆಯಲ್ಲಿ ಶೇ 25ರಷ್ಟು ಪರಿಹಾರ ನೀಡಬೇಕು. ಜೊತೆಗೆ ವಿವಿಧೆಡೆ ಬೆಳೆ ವಿಫಲವಾಗಿರುವ ಕಾರಣ ಅವರಿಗೂ ಬೆಳೆನಷ್ಟ ಪರಿಹಾರ ವಿತರಣೆ ಮಾಡಬೇಕು. ಹಿಂದಿನ ವರ್ಷದಿಂದ ಬೆಳೆ ಕಟಾವು ಮಾಡುವ, ಪೆಂಡಿ ಕಟ್ಟುವ, ಒಕ್ಕಲು ಮಾಡುವ ಯಂತ್ರೋಪಕರಣಗಳ ಬಾಡಿಗೆ ದರ ನಿಗದಿ ಅನಷ್ಠಾನಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಳವೆಬಾವಿ ಯಂತ್ರಗಳ ಕಾರ್ಯನಿರ್ವಹಣೆಯ ದರ ನಿಗದಿ ಅನುಷ್ಠಾನ ಮಾಡಿಲ್ಲ. ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಲು ಜಿಲ್ಲಾಡಳಿತ ವಿಫಲವಾಗಿದೆ. ಮೆಕ್ಕೆಜೋಳದ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಮಾರಾಟಕ್ಕೆ ರೈತರು ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ, ದಾವಣಗೆರೆಗೆ ತೆರಳಬೇಕಾಗಿದೆ. ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿಯೇ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಮುಖಂಡರಾದ ತಿಮ್ಮಪ್ಪ, ಮಹಾದೇವಪ್ಪ, ಎಚ್‌.ಪ್ರಸನ್ನ, ಚಂದ್ರಮೌಳಿ, ಜಯಪ್ಪ, ಚಂದ್ರಪ್ಪ, ಪುಷ್ಪಾ, ಚಿತ್ರಾ, ಸಿ.ಚಿತ್ರಲಿಂಗಪ್ಪ, ಈರಪ್ಪ, ಎಚ್‌.ಮಂಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.