ADVERTISEMENT

ನಾಯಕನಹಟ್ಟಿ: ಸಿಬ್ಬಂದಿಯಿಲ್ಲದೆ ಸೊರಗಿದ ರೈತ ಸಂಪರ್ಕ ಕೇಂದ್ರಗಳು

ಕೃಷಿ ಸೇವೆ ಸಿಗದೇ ಸಮಸ್ಯೆ ಎದುರಿಸುತ್ತಿರುವ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ರೈತರು

ವಿ.ಧನಂಜಯ
Published 27 ಮೇ 2025, 6:01 IST
Last Updated 27 ಮೇ 2025, 6:01 IST
ಸಿಬ್ಬಂದಿ ಕೊರತೆಯಿಂದ ಬಿಕೋ ಎನ್ನುತ್ತಿರುವ ಎನ್ನುತ್ತಿರುವ ನಾಯಕನಹಟ್ಟಿ ರೈತ ಸಂಪರ್ಕ ಕೇಂದ್ರ
ಸಿಬ್ಬಂದಿ ಕೊರತೆಯಿಂದ ಬಿಕೋ ಎನ್ನುತ್ತಿರುವ ಎನ್ನುತ್ತಿರುವ ನಾಯಕನಹಟ್ಟಿ ರೈತ ಸಂಪರ್ಕ ಕೇಂದ್ರ   

ನಾಯಕನಹಟ್ಟಿ: ಇಲ್ಲಿನ ರೈತಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ ತಾಂತ್ರಿಕ ಸಿಬ್ಬಂದಿಯ ಕೊರತೆಯಿಂದ ಹೋಬಳಿಯ ರೈತಾಪಿ ವರ್ಗಕ್ಕೆ ಸಕಾಲದಲ್ಲಿ ಕೃಷಿ ಸಂಬಂಧಿಸಿದ ಸೇವೆಗಳು ದೊರೆಯದಾಗಿದೆ.

ನಾಯಕನಹಟ್ಟಿ ಪಟ್ಟಣಪಂಚಾಯಿತಿ, ನೇರಲಗುಂಟೆ, ನೆಲಗೇತನಹಟ್ಟಿ, ಗೌಡಗೆರೆ, ಅಬ್ಬೇನಹಳ್ಳಿ, ಮಲ್ಲೂರಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಎನ್.ಮಹದೇವಪುರ, ಎನ್.ದೇವರಹಳ್ಳಿ ಸೇರಿದಂತೆ 8 ಗ್ರಾಮ ಪಂಚಾಯಿತಿಗಳನ್ನು ಹೋಬಳಿ ಒಳಗೊಂಡಿದೆ. ನಿತ್ಯ ಹೋಬಳಿಯ ನೂರಾರು ರೈತರು ಒಂದಿಲ್ಲೊಂದು ಕೃಷಿ ಸಂಬಂಧಿತ ಸಹಕಾರವನ್ನರಸಿ ರೈತಸಂಪರ್ಕ ಕೇಂದ್ರಕ್ಕೆ ಬರುತ್ತಾರೆ. ಆದರೆ, ರೈತಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ತಾಂತ್ರಿಕ ಸಿಬ್ಬಂದಿ ಕೊರತೆಯಿಂದ ರೈತರಿಗೆ ಯಾವುದೇ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ.

ನಾಯಕನಹಟ್ಟಿ ರೈತಸಂಪರ್ಕ ಕೇಂದ್ರದಲ್ಲಿ ಇಬ್ಬರು ಕೃಷಿ ಅಧಿಕಾರಿಗಳು, ನಾಲ್ವರು ಸಹಾಯಕ ಕೃಷಿ ಅಧಿಕಾರಿಗಳು, ಒಬ್ಬರು ಲೆಕ್ಕಪತ್ರ ಅಧಿಕಾರಿ, ಒಬ್ಬರು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು, 8 ಜನ ರೈತ ಅನುವುಗಾರರು, ಇಬ್ಬರು ಸ್ವಚ್ಛತಾ ಸಿಬ್ಬಂದಿ ಇರಬೇಕು. ಆದರೆ ಪ್ರಸ್ತುತ ಲೆಕ್ಕಪತ್ರ ಅಧಿಕಾರಿಯನ್ನು ಹೊರತುಪಡಿಸಿ ಮತ್ಯಾವ ಕಾಯಂ ಅಧಿಕಾರಿಯೂ ಇಲ್ಲ.

ADVERTISEMENT

ಒಬ್ಬ ಕೃಷಿ ಅಧಿಕಾರಿ ಮೃತಪಟ್ಟಿದ್ದರೆ, ಮತ್ತೊಬ್ಬರನ್ನು ಕಳೆದ ವರ್ಷ ಮೊಳಕಾಲ್ಮುರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ನಾಲ್ವರು ಸಹಾಯಕ ಕೃಷಿ ಅಧಿಕಾರಿಗಳ ಸ್ಥಾನ ಖಾಲಿ ಉಳಿದಿವೆ. ಒಬ್ಬರು ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ, 8 ಜನ ರೈತ ಅನುವುಗಾರರು ಅರೆಕಾಲಿಕ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ.

ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಗಳು ಸೇರಿದಂತೆ ಹಲವು ತಾಂತ್ರಿಕ ಸಿಬ್ಬಂದಿಯ ಕೊರತೆಯಿಂದ ಹೋಬಳಿಯ ನೂರಾರು ರೈತರು ನಿತ್ಯ ಬೀಜ, ಗೊಬ್ಬರ, ಔಷಧಗಳ ಖರೀದಿ, ತಾಂತ್ರಿಕ ಮಾಹಿತಿ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಪಡೆಯಲು ಪಟ್ಟಣದಲ್ಲಿರುವ ಖಾಸಗಿ ಬೀಜ, ಗೊಬ್ಬರದ ಅಂಗಡಿಗಳನ್ನು ಎಡತಾಕುತ್ತಿದ್ದಾರೆ.  

ನಿವೃತ್ತಿ ವರ್ಗಾವಣೆ ಕಾರಣದಿಂದ ಜಿಲ್ಲೆಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ನಾಯಕನಹಟ್ಟಿ ರೈತ ಸಂಪರ್ಕ ಕೇಂದ್ರಕ್ಕೆ ಶೀಘ್ರ ಸಿಬ್ಬಂದಿ ನಿಯೋಜಿಸಲಾಗುವುದು.
ಬಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕರು ಚಿತ್ರದುರ್ಗ

ಪ್ರಸ್ತುತ ರೈತಸಂಪರ್ಕ ಕೇಂದ್ರಕ್ಕೆ ತಳಕು ಹೋಬಳಿಯ ಕೃಷಿ ಅಧಿಕಾರಿಯೊಬ್ಬರನ್ನು ವಾರದಲ್ಲಿ 3 ದಿನ ಕರ್ತವ್ಯ ನಿರ್ವಹಿಸಲು ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಆದರೆ, ತಳಕು ಹೋಬಳಿಯೂ ಸಹ ನಾಯಕನಹಟ್ಟಿ ಹೋಬಳಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಿದ್ದು, ಎರಡೂ ಹೋಬಳಿಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಅಧಿಕಾರಿಗಳಿಗೆ ಒತ್ತಡ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಜೂನ್ ಮತ್ತು ಜುಲೈನಲ್ಲಿ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಹೋಬಳಿಯ ಬಹುತೇಕ ರೈತರು ಶೇಂಗಾ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದಲೇ ಖರೀದಿಸುತ್ತಾರೆ. ಸಿಬ್ಬಂದಿ ಕೊರತೆಯಿಂದ ಬಿತ್ತನೆ ಬೀಜ ವಿತರಣೆಗೆ ಸಮಸ್ಯೆ ಎದುರಾಗಬಹುದು. ಕೃಷಿ ಇಲಾಖೆ ಆದಷ್ಟು ಬೇಗ ಕೃಷಿ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಬೇಕು’ ಎಂದು ರಾಷ್ಟ್ರೀಯ ಕಿಸಾನ್‌ ಸಂಘದ ಅಧ್ಯಕ್ಷ ಬಿ.ಟಿ.ಪ್ರಕಾಶ್‌ ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.