ADVERTISEMENT

ಜಮೀನಿಗೆ ತೆರಳಲು ದಾರಿ ಬಿಡಿಸಲು ಒತ್ತಾಯ: ಸಚಿವ ಕೃಷ್ಣ ಭೈರೇಗೌಡಗೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:18 IST
Last Updated 7 ಫೆಬ್ರುವರಿ 2026, 6:18 IST
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ   

ಚಿತ್ರದುರ್ಗ: ರೈತರು ತಮ್ಮ ಹೊಲಗಳಿಗೆ ತೆರಳಲು ದಾರಿ ಇಲ್ಲದೇ ಪರದಾಡುತ್ತಿದ್ದಾರೆ. ನಕಾಶೆಯಲ್ಲಿ ದಾರಿ ಇಲ್ಲ ಎಂಬ ಕಾರಣದಿಂದ ಅಧಿಕಾರಿಗಳೂ ದೂರ ಸರಿಯುತ್ತಿದ್ದಾರೆ. ವಾಡಿಕೆ ದಾರಿಗಳನ್ನು ನಕಾಶೆ ವ್ಯಾಪ್ತಿಗೆ ತಂದು ದಾರಿ ಬಿಡಿಸಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತಸಂಘದ ಸದಸ್ಯರು ಶುಕ್ರವಾರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.

ರೈತರು ಜಮೀನುಗಳಿಗೆ ತೆರಳಲು, ಬೆಳೆದ ಬೆಳೆಗಳನ್ನು ಸಾಗಣೆ ಮಾಡಲು ದಾರಿ ಇಲ್ಲದೇ ಪರದಾಡುತ್ತಿದ್ದಾರೆ. ರೂಢಿಗತವಾಗಿ ಇರುವ ದಾರಿಗಳು ನಕಾಶೆಯಲ್ಲಿ ಇಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಈ ಕುರಿತು ತಹಶೀಲ್ದಾರ್‌ ಅವರನ್ನು ಕೇಳಿದಾಗ ಹಾರಿಕೆಯ ಉತ್ತರ ನೀಡುತ್ತಾರೆ. ‘ನಕಾಶೆಯಲ್ಲಿ ದಾರಿ ಇಲ್ಲದಿದ್ದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುತ್ತಿದ್ದಾರೆ. ಇದು ಸರಿಯಲ್ಲ ಎಂದು ರೈತರು ಆರೋಪಿಸಿದರು.

ಬಹಳ ದಿನಗಳಿಂದ ಓಡಾಡುತ್ತಿರುವ ದಾರಿಗಳನ್ನು ಅಧಿಕಾರಿಗಳು ನಕಾಶೆ ವ್ಯಾಪ್ತಿಗೆ ತರಬೇಕು. ತಹಶೀಲ್ದಾರ್‌ಗಳು ರಸ್ತೆ ಬಿಡಿಸಿಕೊಡಲು ವಿಫಲರಾಗುತ್ತಿದ್ದಾರೆ. ಅವರು ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

2025–26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಪಾರ ಪ್ರಮಾಣದ ಬೆಳೆ ಅತೀವೃಷ್ಟಿಗೆ ಸಿಲುಕಿ ಹಾನಿಯಾಗಿದೆ. 769 ರೈತರಿಗೆ ಮಾತ್ರ ಪರಿಹಾರ ಜಮೆಯಾಗಿದೆ. ಇನ್ನೂ ಸಾವಿರಾರು ರೈತರ ಬೆಳೆ ಹಾನಿಯಾಗಿದ್ದರೂ ಅವರಿಗೆ ಇದೂವರೆಗೆ ಪರಿಹಾರ ಬಂದಿಲ್ಲ. 2 ಹೆಕ್ಟೇರ್‌ ಪ್ರದೇಶಕ್ಕೆ ಪರಿಹಾರ ನೀಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದ್ದರೂ ಕಡಿಮೆ ವ್ಯಾಪ್ತಿಗೆ ಪರಿಹಾರ ನೀಡಿದ್ದಾರೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಸೆಪ್ಟೆಂಬರ್‌, ಅಕ್ಟೋಬರ್ ವೇಳೆ ಜಿಲ್ಲೆಯಲ್ಲಿ ಮಳೆ ಕೊರತೆಯಾದ ಕಾರಣ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಬೆಳೆ ಅಪಾರ ಪ್ರಮಾಣದಲ್ಲಿ ಶೇಂಗಾ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಅನುಭವಿಸಿದ ರೈತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಈ ವೇಳೆ ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಆರ್‌.ಚೇತನ್‌, ಪಾಪಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.