
ಹೊಳಲ್ಕೆರೆ: ದೇಶಕ್ಕೆ ಅನ್ನ ನೀಡುವ ರೈತರಿಗೆ ಹೆಚ್ಚು ಗೌರವ, ಸನ್ಮಾನ, ಪುರಸ್ಕಾರಗಳು ಸಿಗಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಕುಮಾರ್ ಸಲಹೆ ನೀಡಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಮಂಗಳವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದರು.
ರೈತ ದೇಶದ ಬೆನ್ನೆಲುಬು. ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗಬೇಕು. ರೈತ ಬೆಳೆಯದಿದ್ದರೆ ಜನರಿಗೆ ಅನ್ನವೇ ಸಿಗುವುದಿಲ್ಲ. ಈಗ ಕೃಷಿ ಜಮೀನು ವಸತಿ, ಕೈಗಾರಿಕೆಗಳಿಗೆ ಬಳಕೆಯಾಗುತ್ತಿದ್ದು, ನಗರೀಕರಣ ಹೆಚ್ಚಾಗುತ್ತಿದೆ. ಕೃಷಿ ಜಮೀನು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಆಹಾರ ಭದ್ರತೆ ದೊರೆಯುವಂತೆ ನೋಡಿಕೊಳ್ಳಬೇಕು. ಸರ್ಕಾರ ರೈತರಿಗೆ ಹಲವು ಸೌಲಭ್ಯಗಳನ್ನು ನೀಡಿದೆ. ಕೃಷಿ ಇಲಾಖೆಯ ಮೂಲಕ ಬೆಂಬಲ ಬೆಲೆ, ಕೃಷಿ ಪರಿಕರಗಳಿಗೆ ರಿಯಾಯಿತಿ ಸೌಲಭ್ಯ ನೀಡುತ್ತಿದೆ ಎಂದರು.
ಪ್ರಗತಿಪರ ರೈತರಾದ ಯಲ್ಲಪ್ಪ, ಗೆಮ್ಯ ನಾಯ್ಕ, ಟಿ.ಆರ್.ಹನುಮಂತಪ್ಪ, ಜಯಮ್ಮ, ಆರ್.ಜೆ.ಪುನೀತ್ ಅವರನ್ನು ಸನ್ಮಾನಿಸಲಾಯಿತು.
ಕೃಷಿಕ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಮಹೇಶ್ವರಪ್ಪ, ರೈತ ಸಂಘದ ಅಧ್ಯಕ್ಷ ರಂಗಸ್ವಾಮಿ, ಸಿದ್ದರಾಮಪ್ಪ, ರಮೇಶಪ್ಪ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ತಾಂತ್ರಿಕ ಸಹಾಯಕ ಗೋಪಿಕೃಷ್ಣ, ಕೃಷಿ ಅಧಿಕಾರಿಗಳಾದ ವಿಕಾಸ್, ಪ್ರದೀಪ್, ಮಂಜುನಾಥ್, ಆತ್ಮ ಸಿಬ್ಬಂದಿ ಸುರೇಶ್, ರೂಪಾ, ಆಶಾ ಹಾಗೂ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.