
ಚಿತ್ರದುರ್ಗ: ‘ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ಸೇರಿದ ಜಾಗದಲ್ಲಿ ನಗರಸಭೆ ವತಿಯಿಂದ ಅಕ್ರಮವಾಗಿ ಆಹಾರ ಮಳಿಗೆ ನಿರ್ಮಾಣ ಮಾಡಲಾಗಿದೆ. ಕೂಡಲೇ ಈ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಕಾಲೇಜು ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಒಳಚರಂಡಿ, ಕಾಲೇಜು ಕಾಂಪೌಂಡ್ ಒಡೆದು ಮಳಿಗೆ ನಿರ್ಮಾಣ ಮಾಡಲಾಗಿದೆ. ಚರಂಡಿ ಮೇಲೆಯೇ ನೇರವಾಗಿ ನಿರ್ಮಿಸಲಾಗುತ್ತದೆ. ಚರಂಡಿಗಳು ಕಟ್ಟಿಕೊಂಡಾಗ ತೊಂದರೆ ಉಂಟಾಗಲಿದೆ. ಇದರಿಂದ ಕಾಲೇಜು ಪರಿಸರದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ಟ್ರಾಫಿಕ್ ಜಾಮ್ ಉಂಟಾಗುವ ಸ್ಥಳದಲ್ಲಿ ಆಹಾರ ಮಾರಾಟ ಮಳಿಗೆ ನಿರ್ಮಾಣ ಮಾಡುತ್ತಿರುವುದು ಖಂಡನೀಯ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ವಾಹನಗಳ ನಿಲುಗಡೆಗೆ ಜಾಗ ಗುರುತಿಸದೇ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ಕಾಲೇಜು ಸಮೀಪದಲ್ಲಿ ಮಳಿಗೆ ತೆರೆಯುವುದರಿಂದ ಮಾದಕ ವಸ್ತುಗಳ ಮಾರಾಟಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತದೆ. ಮಳಿಗೆ ನಿರ್ಮಾಣದ ವೇಳೆ ಕಾಲೇಜು ಕಾಂಪೌಂಡ್‌ಗೆ ಹಾನಿ ಮಾಡಲಾಗಿದೆ. ಕೂಡಲೇ ಮಳಿಗೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಈಗ ಕಟ್ಟಿರುವ ಮಳಿಗೆಗಳನ್ನು ಸ್ಥಳಾಂತರ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಗೋಪಿ, ಸಂಜಯ್, ಕನಕರಾಜ್ ಕೋಡಿಹಳ್ಳಿ, ನಿಹಾರಿಕಾ, ಮಧು, ಕುಬೇರ, ಚರಣ್, ಸುದೀಪ್ ದೊಡ್ಡಚೆಲ್ಲೂರು, ಪ್ರಶಾಂತ್, ಜೀವನ್, ತರುಣ್, ಪ್ರವೀಣ್, ಅಮಿತ್, ಗುರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.