
ಚಿಕ್ಕಜಾಜೂರು: ಬೇಸಿಗೆ ಬಂತೆಂದರೆ, ಬೆಂಕಿ ಅವಘಡಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ. ಬೆಂಕಿಯ ಕೆನ್ನಾಲಿಗಿಗೆ ರೈತರ ತೋಟ, ಜಮೀನಿನಲ್ಲಿ ಕೊಯಿಲು ಮಾಡಿ ಹಾಕಲಾದ ಮೆಕ್ಕೆಜೋಳದ ರಾಶಿ, ರಾಗಿ ಹುಲ್ಲಿನ ಬಣವೆಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎನ್ನುವುದು ರೈತರ ಆರೋಪವಾಗಿದೆ.
ಚಿಕ್ಕಜಾಜೂರಿನ ಮಾರುತಿ ನಗರ ಬಡಾವಣೆ ಸಮೀಪದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಂಗಡಣೆ ಘಟಕದ ಬಳಿ ಶನಿವಾರ ಸಂಜೆ ಯಾರೋ ಬೆಂಕಿ ಹಚ್ಚಿದ್ದು, ಅದನ್ನು ನೋಡಿದ ಸ್ಥಳಿಯರು ಹೊಳಲ್ಕೆರೆಯ ಅಗ್ನಿ ಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಆದರೆ, ಈ ವೇಳೆಗಾಗಲೇ ಸುತ್ತಮುತ್ತಲಿನ ಜಮೀನುಗಳಲ್ಲಿನ ಒಣ ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿತ್ತು.
ಕಸ ವಿಂಘಡಣೆ ಘಟಕವನ್ನು ಗ್ರಾಮ ಪಂಚಾಯಿತಿಯವರು ನಿರ್ಮಿಸಿದ್ದು, ಪೌರ ಕಾರ್ಮಿಕರು ನಿತ್ಯ ಗ್ರಾಮದಲ್ಲಿನ ಕಸ ಮತ್ತಿತರ ತ್ಯಾಜ್ಯಗಳನ್ನು ತಂದು ಘಟಕದ ಸಮೀಪದಲ್ಲಿ ರಾಶಿ ಹಾಕುತ್ತಾರೆ. ಕಸ ವಿಂಗಡಣೆ ಘಟಕದ ಸುತ್ತ ರೈತರ ಜಮೀನುಗಳಿದ್ದು, ಬಹುತೇಕ ರೈತರು ಮೆಕ್ಕೆಜೋಳ ಹಾಗೂ ರಾಗಿಯನ್ನು ಬೆಳೆಯುತ್ತಾರೆ. ಕೆಲವರು ಕೊಳವೆ ಬಾವಿಗಳನ್ನು ಕೊರೆಸಿಕೊಂಡು ಅಡಿಕೆ ಹಾಗೂ ಮಾವಿನ ತೋಟಗಳನ್ನೂ ಸಹ ಮಾಡಿಕೊಂಡಿದ್ದಾರೆ. ಆದರೆ, ಬೇಸಿಗೆ ಕಾಲದಲ್ಲಿ ಯಾರೋ ಬಂದು, ಕಸದ ರಾಶಿಗೆ ಬೆಂಕಿ ಹಚ್ಚಿಬಿಡುತ್ತಾರೆ. ಇದರಿಂದಾಗಿ, ಇಡೀ ಪ್ರದೇಶಕ್ಕೆ ಬೆಂಕಿ ಆವರಿಸಿಕೊಳ್ಳುವುದು. ಬಹುತೇಕರು ಜಮೀನುಗಳಲ್ಲಿ ಕೊಯಿಲು ಮಾಡಿಕೊಂಡ ಮೆಕ್ಕೆಜೋಳ ಹಾಗೂ ರಾಗಿಯ ಹುಲ್ಲನ್ನು ತಮ್ಮ ತಮ್ಮ ಕಣಗಳಿಗೆ ಸಾಗಿಸುತ್ತಾರೆ, ಆದರೆ, ಕಣಗಳಿಲ್ಲದವರು ಜಮೀನುಗಳಲ್ಲಿಯೇ ರಾಶಿ ಹಾಕಿ, ಬೆಲೆ ಬಂದಾಗ ಕಾಳುಗಳನ್ನು ವಿಂಗಡಿಸಿ, ಮಾರಾಟ ಮಾಡಿಕೊಳ್ಳುತ್ತೇವೆ. ಆದರೆ, ಬೆಂಕಿ ಬಿದ್ದಾಗ, ನಮ್ಮ ಧಾನ್ಯಗಳು ಬೆಂಕಿಗೆ ಆಹುತಿಯಾದರೆ, ವರ್ಷವಿಡೀ ಕಷ್ಟ ಪಟ್ಟು ಬೆಳೆದ ಪೈರುಗಳು ಬೆಂಕಿಗಾಹುತಿಯಾದರೆ, ಜೀವನ ನಡೆಸುವುದೇ ದುಸ್ತರವಾಗುತ್ತದೆ ಎನ್ನುತ್ತಾರೆ ರೈತ ಎ. ಶ್ರೀಧರ
ಕುಡುಕರ ಅಡ್ಡೆ: ಕಳೆದ ಎರಡು ವರ್ಷಗಳ ಹಿಂದೆ ಮಾರುತಿ ನಗರ ಬಡಾವಣೆಯ ಅನತಿ ದೂರದಲ್ಲಿ ಗ್ರಾಮದ ತ್ಯಾಜ್ಯವನ್ನು ಕೊಂಡೊಯ್ದು, ಅಲ್ಲಿ ಕಸ ವಿಂಗಡಣೆ ಮಾಡಲು ಕಸ ವಿಲೇವಾರಿ ಹಾಗೂ ವಿಂಗಡಣೆ ಘಟಕವನ್ನು ನಿರ್ಮಿಸಲಾಗಿದೆ. ಆದರೆ. ಈ ಘಟಕ ಈಗ ಕುಡುಕರ ಅಡ್ಡೆಯಾಗಿದೆ. ಘಟಕಕ್ಕೆ ಶೆಟರ್ ಹಾಕಿ ಬೀಗ ಹಾಕಿದ್ದರೂ ಸಹ, ಯಾರೋ ಕುಡುಕರು ಮಧ್ಯಾಹ್ನ ಅಥವಾ ರಾತ್ರಿ ವೇಳೆಯಲ್ಲಿ ಘಟಕಕ್ಕೆ ಹಾಕಿದ ಬೀಗವನ್ನು ಹೊಡೆದು, ಅಲ್ಲಿ ಕುಳಿತು ಕುಡಿದು ತಿಂದು ಮಧ್ಯದ ಬಾಟಲಿ ಮತ್ತು ಪಾಕೇಟ್‌ಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಅಲ್ಲದೆ, ಇದು ಇಸ್ಪೀಟ್ ಮತ್ತಿತರ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಬೆಂಕಿಯಿಂದ ರಕ್ಷಣೆ ಕೊಡಿ: ಕಸ ವಿಲೇವಾರಿ ಘಟಕದ ಸಮೀಪದಲ್ಲಿ ನಮ್ಮ ತೋಟ ಮತ್ತು ಜಮೀನುಗಳಿವೆ. ತ್ಯಾಜ್ಯದಲ್ಲಿನ ಬಾಟಲಿ ಮತ್ತಿತರ ವಸ್ತಗಳನ್ನು ಹಾಯಲು ಬರುವವರು ಅಥವಾ ಕುಡುಕರು ಕುಡಿದ ಅಮಲಿನಲ್ಲಿ ಬೆಂಕಿಯನ್ನು ಹಚ್ಚಿ ಹೋಗುತ್ತಾರೆ. ಬೆಂಕಿಯ ಕೆನ್ನಾಲಿಗೆ ಸಮೀಪದ ನಮ್ಮ ತೋಟಗಳಿಗೆ ನುಗ್ಗಿ ನೀರಾವರಿಗೆ ಅಳವಡಿಸಿದ ಲ್ಯಾಟರಾಲ್, ಪಿವಿಸಿ ಪೈಪ್‌ಗಳು, ವಾಲ್‌ಗಳು ಸುಟ್ಟು ಹೋಗುತ್ತವೆ. ಆದ್ದರಿಂದ, ಗ್ರಾಮ ಪಂಚಾಯಿತಿಯವರು ಕಸ ವಿಲೇವಾರಿ ಘಟಕವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದರೆ ಅಥವ ಕಸದ ರಾಶಿಯನ್ನು ಇಲ್ಲಿಗೆ ಹಾಕುವುದನ್ನು ನಿಲ್ಲಿಸಿದರೆ, ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರಾದ ಹುಲುಗಜ್ಜರ ರಾಜಪ್ಪ, ಎ. ಶ್ರೀಧರ, ಹಸನ್‌ಸಾಬ್ ಮತ್ತಿತರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.