ಹಿರಿಯೂರು: ಮನುಷ್ಯನ ಮನಸ್ಸನ್ನು ಅಧ್ಯಯನ ಮಾಡಿದ ಮೊದಲ ಮನೋವಿಜ್ಞಾನಿ ಗೌತಮ ಬುದ್ಧ ಎಂದು ತಹಶೀಲ್ದಾರ್ ಸಿ.ಜೆ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ಧ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡದೊಂದು ಸಾಮ್ರಾಜ್ಯದ ಅಧಿಪತಿಯಾಗಿ ಆಳ್ವಿಕೆ ನಡೆಸಬಹುದಾಗಿದ್ದ ಗೌತಮನು ಸಮಾಜದಲ್ಲಿನ ಮೂಲ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಹುಡುಕಿ ಹೊರಟನು. ಹುಟ್ಟು, ಮುಪ್ಪು, ಸಾವು, ರೋಗ, ದುಃಖ ಮನುಷ್ಯನಿಗೆ ಬರುವುದೇಕೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಮುಂದಾದ. ಹಲವು ವರ್ಷಗಳ ನಂತರ ಉತ್ತರ ದೊರಕಿ ಜ್ಞಾನಿಯಾದ. ಇಡೀ ಜಗತ್ತಿಗೆ ಶಾಂತಿ, ಅಹಿಂಸೆ, ಪ್ರೀತಿ, ಮೈತ್ರಿ, ಕರುಣೆಯ ಬಗ್ಗೆ ತಿಳಿಸಿದ. ಬುದ್ಧನ ಬೋಧನೆಗಳು ಎಂದೆಂದಿಗೂ ಅನುಕರಣನೀಯ. ಆದಕಾರಣ ಬಾಬಾಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮವನ್ನು ಅಪ್ಪಿಕೊಂಡರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಸಿಎಂ ಇಲಾಖೆ ಅಧಿಕಾರಿ ಶ್ರೀದೇವಿ, ಡಿ.ರಾಧಮ್ಮ, ವೀರಭದ್ರಯ್ಯ, ಪ್ರಜ್ವಲ್, ಶಶಿಕುಮಾರ್, ರತ್ನಮ್ಮ, ಮಲ್ಲಯ್ಯ, ಕಣುಮೇಶ್, ಟಿ. ಶ್ರೀನಿವಾಸರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.