
ಚಿತ್ರದುರ್ಗ: ಇತಿಹಾಸ ಪ್ರಸಿದ್ಧ ಕಲ್ಲಿನಕೋಟೆಗೆ ಹೊಂದಿಕೊಂಡಂತಿರುವ ಮೀನುಗಾರಿಕೆ ಇಲಾಖೆಯ ಮೀನು ಮರಿ ಪಾಲನಾ ಕೇಂದ್ರ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಅಲ್ಲಿರುವ ಮೀನುಗಾರಿಕೆ ತೊಟ್ಟಿ, ಬಾವಿ, ಕಚೇರಿ ಕಟ್ಟಡಗಳು ಕಿಡಿಗೇಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿವೆ.
ಮತ್ತಿ ತಿಮ್ಮಣ್ಣನಾಯಕನ ಕೆರೆ ಹಿಂಭಾಗದ ಆ ಜಾಗ ಹಲವು ದಶಕಗಳ ಹಿಂದೆ ಮಾವಿನ ತೊಪು ಆಗಿತ್ತು. ಆ ವಿಶಾಲ ಜಾಗವನ್ನು ಸರ್ಕಾರ ತೋಟಗಾರಿಕೆ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಗೆ ಹಂಚಿಕೆ ಮಾಡಿತ್ತು. 1 ಎಕರೆ ಜಾಗದಲ್ಲಿ ಮೀನುಗಾರಿಕೆ ಇಲಾಖೆ ಮೀನು ಮರಿ ಪಾಲನಾ ಕೇಂದ್ರ ಸ್ಥಾಪಿಸಿದ್ದು, ಮೀನು ಮರಿ ಪಾಲನೆ ಮಾಡಿ ರೈತರು, ಮೀನುಗಾರಿಕಾ ಸಂಘಗಳಿಗೆ ವಿತರಿಸುವುದು ಇಲಾಖೆಯ ಉದ್ದೇಶ.
ಜಿಲ್ಲೆಯಲ್ಲಿ 4 ಮೀನು ಮರಿ ಪಾಲನಾ ಕೇಂದ್ರಗಳಿದ್ದು ಅವುಗಳ ಪೈಕಿ ಎರಡು ಕೇಂದ್ರಗಳು ವಿವಿಧ ಕಾರಣಗಳಿಂದ ಪಾಳು ಬಿದ್ದಿವೆ. ನೀರಿನ ಕೊರತೆಯಿಂದ ಹೊಸದುರ್ಗ ತಾಲ್ಲೂಕಿನ ಪಾಲನಾ ಕೇಂದ್ರ ಸ್ಥಗಿತಗೊಂಡಿದೆ. ಕೋಟೆ ಬಳಿಯ ಚಿತ್ರದುರ್ಗ ಪಾಲನಾ ಕೇಂದ್ರ ಕಿಡಿಗೇಡಿಗಳ ತಾಣವಾಗಿದೆ. ಹಿರಿಯೂರು ಮತ್ತು ಮೊಳಕಾಲ್ಮುರು ಪಾಲನಾ ಕೇಂದ್ರಗಳು ಮಾತ್ರ ಕಾರ್ಯ ಪ್ರವೃತ್ತವಾಗಿವೆ.
ತಾಲ್ಲೂಕಿನ ಮೀನುಗಾರರಿಗೆ ಮೀನು ಮರಿ ಪಡೆಯಲು ಬೇರೆ ತಾಲ್ಲೂಕು, ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಭಾಗದ ಮೀನುಗಾರರು ವಿ.ವಿ. ಸಾಗರ ಜಲಾಶಯದ ಬಳಿ ಇರುವ ರಾಜ್ಯ ವಲಯದ ಮೀನು ಮರಿ ಪೋಷಣಾ ಕೇಂದ್ರದ ಮರಿ ಪಡೆದು ಸಾಕಣೆ ಮಾಡುತ್ತಿದ್ದಾರೆ. ತಾಲ್ಲೂಕಿಗೊಂದು ಪೋಷಣಾ ಕೇಂದ್ರ ಸ್ಥಾಪಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಇರುವ ಸಾಕಣೆ ಕೇಂದ್ರವನ್ನು ಅಧಿಕಾರಿಗಳು ಉಳಿಸಿಕೊಂಡಿಲ್ಲ ಎಂದು ಮೀನುಗಾರರು ಆರೋಪಿಸುತ್ತಾರೆ.
‘ಕೋಟೆಯ ಪಕ್ಕದಲ್ಲೇ ಇರುವ ಪಾಲನಾ ಕೇಂದ್ರ ಮರಿ ಸಾಕಣೆಗೆ ಹೇಳಿ ಮಾಡಿಸಿದಂತಿತ್ತು. ಬೆಟ್ಟದ ಮೇಲಿಂದ ಹರಿದು ಬರುವ ನೀರು ತೊಟ್ಟಿಗಳಲ್ಲಿ ಸಂಗ್ರಹವಾಗುತ್ತಿತ್ತು. ದೊಡ್ಡ ಮಳೆ ಬಂದರೂ ಯಾವುದೇ ತೊಂದರೆ ಇಲ್ಲ. ಆದರೆ ಅಧಿಕಾರಿಗಳು ನಿರ್ವಹಣೆ ಮಾಡದ ಕಾರಣ ಇಂದು ಪಾಳು ಬೀಳುವಂತಾಗಿದೆ’ ಎಂದು ಮೀನುಗಾರರಾದ ದೊಡ್ಡಯ್ಯ ಬೇಸರ ವ್ಯಕ್ತಪಡಿಸಿದರು.
ಪಾಲನಾ ಕೇಂದ್ರದಲ್ಲಿ 5 ತೊಟ್ಟಿಗಳಿವೆ. ಒಂದು ಬಾವಿ, ಹೊಂಡ ತೋಡಿಸಲಾಗಿದೆ. ಎಲ್ಲಾ ತೊಟ್ಟಿಗಳು ಹಾಗೂ ಬಾವಿ, ಹೊಂಡದಲ್ಲಿ ನೀರು ನಿಂತಿದೆ. ಸಮೀಪದಲ್ಲೇ ಅಗತ್ಯ ಪರಿಕರ ಸಂಗ್ರಹಿಸುವ ಕಚೇರಿ ಕಟ್ಟಡವಿದ್ದು, ಮೀನುಗಾರಿಕೆ ಇಲಾಖೆಯ ಸಿಬ್ಬಂದಿಯೇ ಬಾರದ್ದರಿಂದ ದಶಕದಿಂದ ಪಾಳುಬಿದ್ದಿದೆ. ಹೊಸದಾಗಿ ಬಂದ ಅಧಿಕಾರಿಗಳು ಪಾಲನಾ ಕೇಂದ್ರ ಹೇಗಿದೆ ಎಂಬುದನ್ನೇ ನೋಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಜಾಗ ನೋಡಿಕೊಳ್ಳಲು ಕಾವಲುಗಾರರನ್ನೂ ನೇಮಿಸದ್ದರಿಂದ ಅಲ್ಲಿ ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ. ಜನರೇ ಇಲ್ಲದ ಜಾಗವಾದ ಕಾರಣ ಕುಡುಕರು, ಗಾಂಜಾ ಸೇವನೆ ಮಾಡುವವರು ಕೋಟೆಯ ತಟದ ಕಲ್ಲು ಬಂಡೆಯ ಕೆಳಗೆ, ಮೀನು ಮರಿ ಕೇಂದ್ರದ ಪಾಳು ಕಟ್ಟಡಗಳ ಬಳಿ ಕುಡಿದು ಬಿದ್ದಿರುತ್ತಾರೆ. ಸುತ್ತಲೂ ಮದ್ಯದ, ಪಾಕೀಟುಗಳು ಬಿದ್ದಿವೆ.
ರಾಮದೇವರ ಒಡ್ಡಿನ ಮುಂಭಾಗದಿಂದ ಅಲ್ಲಿಗೆ ತೆರಳಲು ಒಂದು ಕಿರುದಾರಿಯನ್ನು ಕಿಡಿಗೇಡಿಗಳೇ ಮಾಡಿಕೊಂಡಿದ್ದಾರೆ. ಪೊಲೀಸರಾಗಲಿ, ಸಾರ್ವಜನಿಕರಿಗಾಗಲೀ ಅಲ್ಲಿಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಕಿಡಿಗೇಡಿಗಳಿಗೆ ಇದೇ ವರವಾಗಿದೆ.
‘ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಕೋಟೆ ತಟದಲ್ಲಿರುವ ಪೋಷಣಾ ಕೇಂದ್ರವನ್ನು ಸ್ವಚ್ಛಗೊಳಿಸಬೇಕು. ಮೀರು ಮರಿ ಸಾಕಣೆ ಪ್ರಕ್ರಿಯೆಯನ್ನು ಆರಂಭಿಸಬೇಕು’ ಎಂದು ಶ್ರೀ ಗಂಗಾಂಬಿಕೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಜಿ.ನರಸಿಂಹಮೂರ್ತಿ ಒತ್ತಾಯಿಸುತ್ತಾರೆ.
ಕೋಟೆ ಬಳಿಯ ಮೀನು ಮರಿ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸ್ವಚ್ಛತೆ ಹಾಗೂ ದುರಸ್ತಿಗಾಗಿ ಕ್ರಮ ವಹಿಸಲಾಗುವುದು. ಈ ಕುರಿತ ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗುವುದು–ಶ್ರೀನಿವಾಸ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ
ಜಿಲ್ಲೆಯಲ್ಲಿವೆ 297 ಜಲ ಮೂಲ
ಜಿಲ್ಲೆಯಲ್ಲಿ ಮೀನು ಸಾಕಣೆಗಾಗಿ ಒಟ್ಟು 297 ಜಲಮೂಲಗಳಿವೆ. ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 169 ಕೆರೆಗಳಲ್ಲಿ ಮೀನು ಸಾಕಣೆ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 122 ಕೆರೆಗಳಲ್ಲಿ ಮೀನುಗಾರಿಕೆಗೆ ಗುತ್ತಿಗೆ ನೀಡಲಾಗುತ್ತದೆ. 3 ಜಲಾಶಯಗಳಲ್ಲಿ ಮೀನು ಸಾಕಣೆ ಮಾಡಲಾಗುತ್ತದೆ. 3 ಕಡೆ ನದಿ ಭಾಗದಲ್ಲಿ ಮೀನುಗಾರಿಕೆ ಇದೆ.
ಒಟ್ಟಾರೆ ಜಿಲ್ಲೆಯಾದ್ಯಂತ 3.11 ಲಕ್ಷ ಹೆಕ್ಟೇರ್ ಪ್ರದೇಶ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿದೆ. ಮೀನು ಸಾಕಣೆಗೆ ಇಲಾಖೆಯು ಆದ್ಯತೆಯ ಮೇರೆಗೆ ಮೀನುಗಾರಿಕೆ ಸಹಕಾರ ಸಂಘಗಳಿಗೆ ಕೆರೆಗಳನ್ನು ಗುತ್ತಿಗೆ ನೀಡುತ್ತದೆ. ಉಳಿಕೆ ಕೆರೆಗಳನ್ನು ಇ–ಟೆಂಡರ್ ಮೂಲಕ ಹರಾಜು ಹಾಕಲಾಗುತ್ತದೆ. ಆದರೆ ಸ್ಥಳೀಯವಾಗಿ ಮೀನು ಮರಿ ಪಾಲನಾ ಕೇಂದ್ರ ಸಮರ್ಪಕವಾಗಿ ನಡೆಯದ ಕಾರಣ ಎಲ್ಲಾ ಕೆರೆಗಳಲ್ಲಿ ಮೀನು ಸಾಕಣೆ ಮಾಡಲು ತೊಂದರೆಯಾಗುತ್ತಿದೆ ಎಂಬುದು ಮೀನುಗಾರರ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.