ADVERTISEMENT

ಚಿತ್ರದುರ್ಗ | ಗಣಿ ಕಂಪನಿಗಳ ಜೊತೆ ಅರಣ್ಯಾಧಿಕಾರಿಗಳ ಶಾಮೀಲು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:37 IST
Last Updated 9 ಡಿಸೆಂಬರ್ 2025, 5:37 IST
ಹೊಳಲ್ಕೆರೆ ತಾಲ್ಲೂಕು ನೀರ್ತಡಿ ಮೀಸಲು, ಲೋಕದೊಳಲು–ದೇವರಗುಡ್ಡ ಕಾಯ್ದಿರಿಸಿದ ಅರಣ್ಯ ಪ್ರದೇಶಗಳಲ್ಲಿ ಅರಣ್ಯಾಧಿಕಾರಿಗಳೇ ಅರಣ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿ ಗಣಿಬಾಧಿತ ಪ್ರದೇಶ ಹೋರಾಟ ಸಮಿತಿ ಸದಸ್ಯರು ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಹೊಳಲ್ಕೆರೆ ತಾಲ್ಲೂಕು ನೀರ್ತಡಿ ಮೀಸಲು, ಲೋಕದೊಳಲು–ದೇವರಗುಡ್ಡ ಕಾಯ್ದಿರಿಸಿದ ಅರಣ್ಯ ಪ್ರದೇಶಗಳಲ್ಲಿ ಅರಣ್ಯಾಧಿಕಾರಿಗಳೇ ಅರಣ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿ ಗಣಿಬಾಧಿತ ಪ್ರದೇಶ ಹೋರಾಟ ಸಮಿತಿ ಸದಸ್ಯರು ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಅರಣ್ಯ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಹೊಳಲ್ಕೆರೆ ತಾಲ್ಲೂಕು ನೀರ್ತಡಿ ಮೀಸಲು, ಲೋಕದೊಳಲು–ದೇವರಗುಡ್ಡ ಕಾಯ್ದಿರಿಸಿದ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಸಾವಿರಾರು ಮರ ಕತ್ತರಿಸಿದ್ದಾರೆ. ಕಬ್ಬಿಣದ ಅದಿರು ಗಣಿ ಕಂಪನಿಗಳ ಜೊತೆ ಶಾಮೀಲಾಗಿ ಅರಣ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿ ಗಣಿಬಾಧಿತ ಪ್ರದೇಶ ಹೋರಾಟ ಸಮಿತಿ ಸದಸ್ಯರು ಸೋಮವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಾಯ್ದಿರಿಸಿದ ಅರಣ್ಯ ಪ್ರದೇಶ ಸರ್ವೆ ನಂಬರ್‌– 16ರಲ್ಲಿ ಅಧಿಕಾರಿಗಳು ಅರಣ್ಯ ಕಾಯ್ದೆಯನ್ನು ಸ್ವೇಚ್ಛೆಯಿಂದ ದುರುಪಯೋಗ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಸೂಚಿಸಿರುವ ಲೀಸ್‌ ರಸ್ತೆಯಲ್ಲಿ ಗಣಿ ಕಂಪನಿಯ ವಾಷಿಂಗ್‌ ಘಟಕ ಹಾಗೂ ಕ್ರಷರ್‌ ಸ್ಥಾಪನೆಗೆ ಅವಕಾಶ ನೀಡಿದ್ದಾರೆ. ಆ ಮೂಲಕ ಐಬಿಎಂ (ಇಂಡಿಯನ್‌ ಬ್ಯುರೊ ಆಫ್‌ ಮೈನ್ಸ್‌), ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಗಣಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಿ.ದುರ್ಗ ಗ್ರಾಮದಿಂದ ತಣಿಗೆಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧ, ತೇಗ, ಕರಿಮತ್ತಿ ಸೇರಿದಂತೆ ವಿವಿಧ ಜಾತಿಯ ಸಾವಿರಾರು ಅಮೂಲ್ಯ ಮರಗಳನ್ನು ಕಡಿದು ಹಾಕಲಾಗಿದೆ. ಗಣಿಬಾಧಿತ ಪ್ರದೇಶದಲ್ಲಿ ವಿವಿಧ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು 2 ಕಿ.ಮೀ ಉದ್ದದ, 60 ಅಡಿ ಅಗಲದ ಸಿಸಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದರು.

ADVERTISEMENT

ಗಣಿ ಕಂಪನಿಯು ಅರಣ್ಯ ಇಲಾಖೆ ಸೂಚಿಸಿದ ಜಾಗ ಬಿಟ್ಟು ಗಣಿ ಗುತ್ತಿಗೆಯ ಹೊರಗಿನ ಜಾಗದಲ್ಲಿ ತ್ಯಾಜ್ಯ ಸುರಿಯುವ ಜಾಗ ನಿರ್ಮಿಸಲಾಗಿದೆ. ಅದಕ್ಕಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಇಷ್ಟಾದರೂ ಹೊಳಲ್ಕೆರೆ ತಾಲ್ಲೂಕಿನ ವಲಯ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಅವರ ಜೊತೆ ಶಾಮೀಲಾಗಿರುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದಿರಿಸಿದ ಅರಣ್ಯ ಪ್ರದೇಶದ ಮೂರು ಎಕರೆ ಜಾಗದಲ್ಲಿ ಮರಗಳನ್ನು ನಾಶ ಮಾಡಿ ಫಲವತ್ತಾದ ಮಣ್ಣು ತೆಗೆಯಲಾಗಿದೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಬ್ಬರ ಜಿಟಿಆರ್‌ಬಿ ಹೆಸರಿನ 10 ಚಕ್ರದ ಲಾರಿಯಲ್ಲಿ ನೂರಾರು ಲೋಡ್‌ ಮಣ್ಣನ್ನು ಹೊರಗೆ ಸಾಗಿಸಲಾಗಿದೆ. ಈ ಮಣ್ಣು ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ಅರಣ್ಯಾಧಿಕಾರಿಗಳು ಉತ್ತರ ನೀಡಬೇಕು. ಅರಣ್ಯಾಧಿಕಾರಿಗಳ ಕರ್ತವ್ಯಲೋಪದಿಂದ ಅರಣ್ಯ ಇಲಾಖೆಗೆ ನೂರಾರು ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದರು.

ನಿಯಮಾನುಸಾರವಾಗಿ ಮರಗಳನ್ನು ಗುರುತಿಸದೇ, ನಂಬರ್‌ ಹಾಕದೇ, ಗಣತಿ ಕಾರ್ಯವನ್ನೂ ಮಾಡದೇ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು. ಇಂತಹ ಅಧಿಕಾರಿಗಳಿಂದ ಹೊಳಲ್ಕೆರೆ ತಾಲ್ಲೂಕಿನ ಅಮೂಲ್ಯ ಅರಣ್ಯ ಹಾಳಾಗುತ್ತಿದೆ. ಖಾಸಗಿ ಗುತ್ತಿಗೆದಾರರು, ಗಣಿ ಕಂಪನಿಗಳ ಜೊತೆ ಶಾಮೀಲಾಗಿ ಅರಣ್ಯವನ್ನು ನಾಶ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಮರ ಕಡಿಯುವ, ಅರಣ್ಯದ ಜಾಗದಿಂದ ಮಣ್ಣು ಸಾಗಿಸುತ್ತಿರುವ ನೂರಾರು ಸಾಕ್ಷಿಗಳು ನಮ್ಮ ಬಳಿ ಇವೆ. ಸ್ಥಳೀಯರು ವಿಡಿಯೊ, ಛಾಯಾಚಿತ್ರ ತೆಗೆದು ಕಳುಹಿಸಿದ್ದಾರೆ. ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದರೆ ಎಲ್ಲಾ ಸಾಕ್ಷ್ಯಗಳನ್ನು ನಾವು ಒದಗಿಸುತ್ತೇವೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಉಂಟಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳೇ ಅರಣ್ಯ ನಾಶ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಎಚ್‌.ರಮೇಶ್‌ ಬಿ ದುರ್ಗ, ಪ್ರಧಾನ ಕಾರ್ಯದರ್ಶಿ ಜಿ.ಆರ್.ಲೋಹಿತ್‌, ವಿಶ್ವನಾಥನಹಳ್ಳಿ ರಂಗಸ್ವಾಮಿ, ರಮೇಶ್‌ ನಾಯಕ್‌, ಕುಮಾರಣ್ಣ ಇದ್ದರು.

ಡಿಸಿ ಡಿಸಿಎಫ್‌ ಸಿಸಿಎಫ್‌ ಭೇಟಿ

ಕರ್ತವ್ಯ ಲೋಪ ಎಸಗಿರುವ ಅರಣ್ಯಾಧಿಕಾರಿಗಳ ಅಮಾನತು ಮಾಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೋರಾಟ ಸಮಿತಿ ಸದಸ್ಯರು ಪಟ್ಟು ಹಿಡಿದರು. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್‌ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್‌ ನಾಯಕ್‌ ಭೇಟಿ ನೀಡಿ ಹೋರಾಟಗಾರರ ಅಹವಾಲು ಆಲಿಸಿದರು. ರಾತ್ರಿವರೆಗೂ ಪ್ರತಿಭಟನೆ ನಡೆಸಿದರು. ರಾತ್ರಿ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ‘ಅರಣ್ಯಾಧಿಕಾರಿಗಳು ನಿಯಮ ಉಲ್ಲಂಘಿಸಿ ಅರಣ್ಯ ನಾಶ ಮಾಡಿರುವ ಬಗ್ಗೆ ತನಿಖೆ ನಡೆಸಲು ತಂಡ ರಚಿಸಲಾಗುವುದು. ಅವರು ತಪ್ಪು ಮಾಡಿರುವುದು ಪತ್ತೆಯಾದರೆ ಅಧಿಕಾರಿಗಳನ್ನು ಅಮಾನತು ಮಾಡು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಭರವಸೆ ನಂತರ ಹೋರಾಟ ಸಮಿತಿ ಸದಸ್ಯರು ಹೋರಾಟ ವಾಪಸ್‌ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.