ADVERTISEMENT

ಕೋಟೆನಾಡಿನಲ್ಲಿ ‘ಭಾವೈಕ್ಯ’ ಗಣಪ ; ಸರ್ವ ಧರ್ಮಗಳು ಒಂದಾಗಿ ಗಣೇಶೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:52 IST
Last Updated 29 ಆಗಸ್ಟ್ 2025, 5:52 IST
ಭಾವೈಕ್ಯತೆಯ ಪ್ರತಿರೂಪವಾಗಿರುವ ಬುದ್ಧ ಕಾಲನಿಯ ಬಿಸಿವೈ ಗಣಪತಿ
ಭಾವೈಕ್ಯತೆಯ ಪ್ರತಿರೂಪವಾಗಿರುವ ಬುದ್ಧ ಕಾಲನಿಯ ಬಿಸಿವೈ ಗಣಪತಿ   

ಚಿತ್ರದುರ್ಗ: ಕೋಟೆನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ಗಣೇಶೋತ್ಸವದ ಸಂಭ್ರಮ ಇಮ್ಮಡಿಗೊಳ್ಳುತ್ತಿದೆ. ಸಾರ್ವಜನಿಕ ಪೆಂಡಾಲ್‌ಗಳಲ್ಲಿ ‘ಭಾವೈಕ್ಯ’ದ ಪ್ರತಿರೂಪವಾಗಿ ಗೌರಿಪುತ್ರನನ್ನು ಕೂರಿಸುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಕಳೆದ ವರ್ಷ 1,644 ಕಡೆ ಸಂಘ ಸಂಸ್ಥೆಗಳು ಗಣೇಶನನ್ನು ಪ್ರತಿಷ್ಠಾಪಿಸಿದ್ದರೆ, ಈ ಬಾರಿ 1,783 ಕಡೆ ಸಾರ್ವಜನಿಕವಾಗಿ ಗಣೇಶ ಮಹೋತ್ಸವ ಆಚರಿಸಲಾಗುತ್ತಿದೆ. ಇವುಗಳಲ್ಲಿ 7 ಅತೀ ಸೂಕ್ಷ್ಮ, 95 ಸೂಕ್ಷ್ಮ, 1,681 ಸಾಮಾನ್ಯ ಎಂದು ಗುರುತಿಸಲಾಗಿದೆ. ಬಹುತೇಕ ಕಡೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಸರ್ವ ಧರ್ಮಗಳು ಒಂದಾಗಿ ಗಣೇಶೋತ್ಸವ ಆಚರಿಸುವ ಮೂಲಕ ಸೌರ್ಹಾದತೆಯ ಸಂದೇಶ ರವಾನಿಸಿವೆ.

ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಸರ್ವ ಧರ್ಮಗಳ ನೌಕರರು ಸೇರಿ ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶೋತ್ಸವ ಆಚರಿಸಿದರು. ಬುದ್ಧ ಕಾಲೊನಿಯ ಬಿಸಿವೈ ಗಣಪತಿ, ಜೋಗಿಮಟ್ಟಿ ರಸ್ತೆಯ ಗಣಪತಿ ಇದಕ್ಕೆ ಹೊರತಾಗಿರಲಿಲ್ಲ. ಹೀಗೆ ಬಹುತೇಕ ಬಡಾವಣೆಯಲ್ಲೂ ಸರ್ವರೂ ಒಂದಾಗಿ ಓಂಕಾರ ಗಣಪತಿಗೆ ನಮನ ಸಲ್ಲಿಸುತ್ತಿದ್ದಾರೆ. ಅನ್ನಸಂತರ್ಪಣೆ ಕಾರ್ಯವನ್ನೂ ನಡೆಸುತ್ತಿದ್ದಾರೆ.

ADVERTISEMENT

ಮಂಗಳವಾರ ಗೌರಿ ದೇವಿಯನ್ನು ಬರ ಮಾಡಿಕೊಂಡ ಭಕ್ತರು ಬುಧವಾರ ಗಣೇಶನನ್ನು ವೈಭವದಿಂದ ಸ್ವಾಗತಿಸಿ ಪೂಜೆ ಸಲ್ಲಿಸಿದರು. ಮೊದಲ ದಿನವೇ 65 ಸಾರ್ವಜನಿಕ ಸೇರಿ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾವಿರಾರು ಗಣೇಶ ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ್ದ ಸ್ಥಳಗಳಲ್ಲಿ ವಿಸರ್ಜಿಸಲಾಯಿತು. 3ನೇ ದಿನವಾದ ಆ. 29ರಂದು 927 ಸಾರ್ವಜನಿಕ ಗಣಪನ ಮೂರ್ತಿ ವಿಸರ್ಜನೆಯಾಗಲಿವೆ.

ಬುಧವಾರ ಬೆಳಿಗ್ಗೆ ವಿಘ್ನರಾಜನನ್ನು ಮನೆ, ಮಂಟಪಗಳಲ್ಲಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ಕೆ ಮೆರುಗು ನೀಡಿದರು. ಸಂಪ್ರದಾಯದಂತೆ ಮನೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಿದವರು ಮುಂಜಾನೆಯಿಂದಲೇ ಪೂಜಾ ಕಾರ್ಯಗಳನ್ನು ನಿರಂತರವಾಗಿ ನಡೆಸಿದರು. ಮನೆಗಳಲ್ಲಿ ಸಿದ್ಧಪಡಿಸಿದ್ದ ಸಿಹಿ ಖಾದ್ಯಗಳನ್ನು ಸಮರ್ಪಿಸಿದರು.

ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಉತ್ಸವ ಕಳೆಗಟ್ಟಿತ್ತು. ತಳಿರು-ತೋರಣ, ಕೇಸರಿ ವಸ್ತ್ರ, ವಿವಿಧ ಪುಷ್ಪಗಳಿಂದ ಭವ್ಯ ಮಂಟಪಗಳನ್ನು ನಿರ್ಮಿಸಲಾಗಿತ್ತು. ಉರುಮೆ, ತಮಟೆ, ಡೊಳ್ಳು, ಕಹಳೆ, ಬ್ಯಾಂಡ್‌ಸೆಟ್ ಸೇರಿ ಮಂಗಳವಾದ್ಯಗಳ ಸಮೇತ ಮಂಗಳಕರನಾದ ಗೌರಿಪುತ್ರನನ್ನು ಸ್ವಾಗತಿಸಿದರು. ಉಗ್ರ ನರಸಿಂಹ, ಹಂಸ, ನವಿಲು, ಸರ್ಪ, ಇಲಿ, ಶ್ರೀಕೃಷ್ಣ, ದರ್ಬಾರ್, ಶಿವ-ಪಾರ್ವತಿ, ಕಮಲ, ಹುಲಿ, ಸಿಂಹದ ಮೇಲೆ ಕುಳಿತಿರುವುದು ಹೀಗೆ ನಾನಾ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ ಗಣಪ.

ಆನೆಬಾಗಿಲ ಆವರಣದಲ್ಲಿ ಪ್ರಸನ್ನ ಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿರುವ ಗಣೇಶ, ದರ್ಬಾರ್‌ ಭಂಗಿಯಲ್ಲಿ ವಿರಾಜಮಾನವಾಗಿ ಭಕ್ತರಿಗೆ ದರ್ಶನ ನೀಡುತ್ತಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪರಿಸರ ಗಣಪತಿ ಪ್ರತಿಷ್ಠಾಪಿಸಲಾಗಿದೆ.

ಕರುವಿನಕಟ್ಟೆಯ ವಿಶ್ವ ರಾಜ ಗಣೇಶ, ಬುರುಜನಹಟ್ಟಿಯಲ್ಲಿ ಅರ್ಧ ಚಂದ್ರಕಾರದ ತೊಟ್ಟಿಲಿನಲ್ಲಿ ವಿರಾಜಮಾನವಾಗಿರುವ ಪೇಟಧಾರಿ ಗಣೇಶ ಆಕರ್ಷಿಸುತ್ತಿದೆ. ಉಪ್ಪು ನೀರು ಬಾವಿ ರಸ್ತೆಯ ಅರಳಿ ಮರದ ಬಳಿ ಗರುಡದ ಮೇಲೆ ನಿಂತಿರುವ ಗಣೇಶ, ಏಕನಾಥೇಶ್ವರಿ ಪಾದಗುಡಿ ಪಕ್ಕದಲ್ಲಿ ಸಿಂಹದ ಮೇಲೆ ಕುಳಿತಿರುವ ಏಕದಂತ ಭಕ್ತರನ್ನು ಸೆಳೆಯುತ್ತಿದೆ.

ಕೋಟೆ ಮುಂಭಾಗ ಕೋಟೆ ಯೂತ್ಸ್‌, ಬುದ್ಧನಗರ, ಜೋಗಿಮಟ್ಟಿ ರಸ್ತೆ ಸೊಪ್ಪಿನ ಬೀದಿ, ಹೊಳಲ್ಕೆರೆ ರಸ್ತೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ಚಿಕ್ಕಪೇಟೆ, ಕೋಟೆ ರಸ್ತೆ, ಜೆಸಿಆರ್, ಗಾರೇಹಟ್ಟಿ, ಮಾಸ್ತಮ್ಮ ಬಡಾವಣೆ, ಮುನ್ಸಿಪಲ್‌ ಕಾಲೊನಿ, ಕಾಮನಬಾವಿ ಸೇರಿದಂತೆ ನಗರದ ವಿವಿಧೆಡೆ ವಿಭಿನ್ನ ರೂಪದಲ್ಲಿ ಗಣೇಶ ಭಕ್ತರಿಗೆ ದರ್ಶನ ನೀಡುತ್ತಿದೆ.

ಗಣೇಶ ಪೆಂಡಾಲ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ, ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಕ್ರೀಡಾಕೂಟ. ಪ‍್ರತಿಭಾ ಪುರಸ್ಕಾರ ಸಾಗಿವೆ. ಪ್ರತಿ ಪೆಂಡಾಲ್‌ ಬಳಿ ಪೊಲೀಸ್‌ ಭದ್ರತೆ ಕಲ್ಪಿಸುವ ಮೂಲಕ ಅವಘಡ ಸಂಭವಿಸದಂತೆ ಎಚ್ಚರವಹಿಸಲಾಗಿದೆ.

ಚಿತ್ರದುರ್ಗದ ಜೈನಧಾಮದಲ್ಲಿ ವಿರಾಜಮಾನಗೊಂಡ ಹಿಂದೂ ಮಹಾ ಗಣಪತಿ
ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಸರ್ವ ಧರ್ಮದ ಗಣಪ
ಬುರುಜನಹಟ್ಟಿಯಲ್ಲಿ ಅರ್ಧ ಚಂದ್ರಕಾರದ ತೊಟ್ಟಿಲಿನಲ್ಲಿ ಕುಳಿತಿರುವ ಪೇಟಧಾರಿ ಗಣೇಶ
ಜೋಗಿಮಟ್ಟಿ ರಸ್ತೆಯ ಶಕ್ತಿ ಗಣಪತಿ
ಆನೆಬಾಗಿಲ ದರ್ಬಾರ್‌ ಗಣಪ
ಪತ್ರಿಕಾ ಭವನದ ಪರಿಸರ ಗಣಪತಿ
ಉಪ್ಪು ನೀರು ಬಾವಿಯ ಗರುಡದ ಮೇಲೆ ನಿಂತಿರುವ ಗಣೇಶ
ಕೋಟೆ ಮುಂಭಾಗದ ಕೋಟೆ ಯೂತ್ಸ್‌ ಬಳಗದ ಗೌರಿಪುತ್ರ
ಶೃಂಗೇರಿ ಮಠದ ದುರ್ಗದ ರಾಜಾ ಗಣಪತಿ
ಏಕನಾಥೇಶ್ವರಿ ಪಾದಗುಡಿ ಪಕ್ಕದಲ್ಲಿ ಸಿಂಹದ ಮೇಲೆ ಕುಳಿತಿರುವ ಗಣೇಶ
ಚಿತ್ರದುರ್ಗದ ಬಿ.ಡಿ.ರಸ್ತೆ ಬಳಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳದವರು ಗಣೇಶೋತ್ಸವಕ್ಕೆ ರೂಪಿಸಿರುವ ಮಂಟಪ

ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಬ್ಬದ ಅಂಗವಾಗಿ ಕೋಟೆಯ ಬೆಟ್ಟದ ಗಣಪತಿ ದೇಗುಲದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು. ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ಜೆಸಿಆರ್‌ ಬಡಾವಣೆ ಪಿ ಅಂಡ್‌ ಟಿ ಕ್ವಾಟ್ರಸ್‌ನ ಸಂಕಷ್ಟಹರ ಗಣಪತಿ ಪ್ರಸನ್ನ ಗಣಪತಿ ಮದಕರಿ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳು ನೆರವೇರಿದವು. ಮಧ್ಯಾಹ್ನದ ಬಳಿಕ ಭಕ್ತರು ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ದೈವಭಕ್ತಿಯಿಂದ ರಾಷ್ಟ್ರಭಕ್ತಿಯೆಡೆಗೆ... ಚಿತ್ರದುರ್ಗ: ‘ದೈವಭಕ್ತಿಯಿಂದ ರಾಷ್ಟ್ರಭಕ್ತಿಯೆಡೆಗೆ ಯುವಜನರನ್ನು ಕೊಂಡೊಯ್ಯುವ ಉದ್ದೇಶದಿಂದ ವೈಭವಯುತವಾಗಿ 18 ದಿನಗಳ ಕಾಲ ಗಣೇಶೋತ್ಸವ ಆಯೋಜನೆ ಮಾಡಲಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಸಂಚಾಲಕ ಪ್ರಭಂಜನ್ ಹೇಳಿದರು. ‘ವಿಶ್ವ ಹಿಂದೂ ಪರಿಷತ್‌ ಬಜರಂಗದಳದ ವತಿಯಿಂದ ಆಯೋಜನೆ ಮಾಡಲಾಗಿರುವ ಮಹಾಗಣಪತಿ ಉತ್ಸವ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಏಷ್ಯಾಖಂಡದಲ್ಲೇ ಅತೀ ಹೆಚ್ಚು ಜನರು ಸೇರುವ 2ನೇ ಗಣೇಶೋತ್ಸವ ಇದಾಗಿದೆ. ಸೆ.13ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶೋಭಾಯಾತ್ರೆ ನಡೆಯಲಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಈ ಉತ್ಸವ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ ರಾಜ್ಯ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಪ್ರತಿ ದಿನವೂ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಗುವುದು. ಸೆ.9ರಂದು ಚಿತ್ರದುರ್ಗದ ಸ್ಥಳೀಯ ದೇವತೆಗಳ ಉತ್ಸವ ಮೂರ್ತಿಗಳನ್ನು ಗಣೇಶೋತ್ಸವ ಮಂಟಪಕ್ಕೆ ಕರೆತರಲಾಗುವುದು. ಸೆ.10ರಂದು ಗಣಪತಿ ಹೋಮ ನೆರವೇರಿಸಲಾಗುವುದು’ ಎಂದರು. ‘ಗಣೇಶ ಮಂಟಪದ ಹೊರಭಾಗವನ್ನು ರಾಜಸ್ಥಾನದ ಜೈಪುರದ ಸಾಂಪ್ರದಾಯಿಕ ಶೈಲಿಯಲ್ಲಿ ರೂಪಿಸಲಾಗಿದೆ. ಒಳ ಭಾಗವನ್ನು ಹೊಯ್ಸಳ ಶೈಲಿಯಲ್ಲಿ ಚಿತ್ರಿಸಲಾಗಿದೆ. ಇತ್ತೀಚಿಗೆ ಜಮ್ಮು– ಕಾಶ್ಮೀರದ ಪಹಲ್ಗಾಮ್‌ನಲ್ಲಿ ಜೀವ ಕಳೆದುಕೊಂಡವರ ಪತ್ನಿಯರ ಗೌರವಾರ್ಥವಾಗಿ ಮಂಟಪಕ್ಕೆ ಸಿಂಧೂರ ಮಂಟಪ ಎಂದು ನಾಮಕರಣ ಮಾಡಲಾಗಿದೆ’ ಎಂದು ತಿಳಿಸಿದರು.  ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಶರಣಕುಮಾರ್‌ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಷಡಾಕ್ಷರಪ್ಪ ಕಾರ್ಯದರ್ಶಿ ಕೇಶವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.