ಹೊಸದುರ್ಗ: ಸ್ಪರ್ಧೆಗೆ ಬಿದ್ದು ದೊಡ್ಡ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಸರಿಯಲ್ಲ. ಜೆಸಿಬಿ ಯಂತ್ರದ ಮೂಲಕ ಕೆರೆಗೆ ತಳ್ಳಿ ಅದರ ಮೇಲೆ ಕುಣಿದು ಕುಪ್ಪಳಿಸುವ ಪ್ರವೃತ್ತಿ ಈಚೆಗೆ ಹೆಚ್ಚುತ್ತಿದೆ. ಸರ್ಕಾರ ಈ ಬಗ್ಗೆ ನಿಗಾ ವಹಿಸಿ ಪಾವಿತ್ರ್ಯತೆಯನ್ನು ಉಳಿಸಬೇಕು ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಆಗ್ರಹಿಸಿದರು.
ಕುಂಚಿಟಿಗ ಮಠದ ವತಿಯಿಂದ ಬುಧವಾರ ಆಯೋಜಿಸಿದ್ದ ಸುಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮದ್ಯಪಾನ ಮಾಡಿಕೊಂಡೇ ಗಣಪತಿಯನ್ನು ತರುವುದು ಹಾಗೂ ವಿಸರ್ಜನೆ ಮಾಡುವುದು ಹಿಂದೂ ಧರ್ಮಕ್ಕೆ ಮಾಡುವ ಅಗೌರವ. ವಿಶ್ವ ಹಿಂದೂ ಪರಿಷತ್, ಬಜರಂಗದಳ, ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಈ ಬಗ್ಗೆ ಜಾಗೃತಿ ವಹಿಸಿ, ಸಂಘಟನೆಯಿಂದಲೇ ಪ್ರತಿವರ್ಷ ಮೂರು ಅಥವಾ ಐದು ಅಡಿ ಗಣಪನನ್ನು ಕೂರಿಸಲು ವ್ಯವಸ್ಥೆ ಮಾಡಿಕೊಡಬೇಕು. ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿಗರು ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಗಣಪತಿ ಹಬ್ಬ ಸಾಂಸ್ಕೃತಿಕ ಹಬ್ಬವಾಗಲಿ ಎಂದು ಸಲಹೆ ನೀಡಿದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿವಶಂಕರ್, ಆರ್. ಮಂಜುನಾಥ್ ಕೊಂಡಾಪುರ, ಉಮಾದೇವಿ ವೆಂಗಸಂದ್ರ, ಮಹಾಂತೇಶ್ ಹರೇನಹಳ್ಳಿ, ರಮೇಶ್ ನಾಗತಿಹಳ್ಳಿ, ಮಂಜುನಾಥ್ ಹೊಸದುರ್ಗ, ವಸಂತ್ ಕುಮಾರ್ ಹಾಗಲಕೆರೆ ಹಾಗೂ ನಿವೃತ್ತ ಶಿಕ್ಷಕರಾದ ಮಂಜುನಾಥ್ ದೇವಪುರ ಅವರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ್ ರಂಗಾಪುರ ಉಪನ್ಯಾಸ ನೀಡಿದರು.ಹಾಗಲಕೆರೆಯ ಮಾರುತಿ ಯುವಕ ಸಂಘದ ಗ್ರಾಮದ ಭಕ್ತರು ಭಜನೆ ಕಾರ್ಯಕ್ರಮ ನೀಡಿದರು.
ನಿವೃತ್ತ ಪ್ರಾಂಶುಪಾಲ ಈಶ್ವರಪ್ಪ, ಮುಖ್ಯ ಶಿಕ್ಷಕ ಎಲ್.ಆರ್ ಚನ್ನಬಸಪ್ಪ, ಬಿಇಒ ಎಲ್ ಜಯಪ್ಪ, ಸಂಗಮೇಶ್ವರ ಸಮುದಾಯ ಭವನ ಸಮಿತಿ, ಸಂಗಮೇಶ್ವರ ನೌಕರ ಸಂಘ, ಸಂಗಮೇಶ್ವರ ಯುವ ವೇದಿಕೆ, ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘ, ಶಾಂತವೀರಶ್ರೀ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಮಠದ ಭಕ್ತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.