ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಸ್ಥಾಪಿಸಿರುವ ಮಹಾ ಗಣಪತಿ ವಿಸರ್ಜನೆ ಅಂಗವಾಗಿ ಸೆ.13ರಂದು ನಡೆಯಲಿರುವ ಶೋಭಾಯಾತ್ರೆಗೆ ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಈಗಾಗಲೇ ಜಿಲ್ಲೆ, ಹೊರಜಿಲ್ಲೆಗಳಿಂದ ಸಾವಿರಾರು ಪೊಲೀಸ್ ಸಿಬ್ಬಂದಿ ಬಂದಿದ್ದಾರೆ.
ಬಂದೋಬಸ್ತ್‌ಗಾಗಿ ಬಂದಿರುವ ಪೊಲೀಸ್ ಸಿಬ್ಬಂದಿ ನಗರದ ವಿವಿಧ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. 7 ಎಸ್‌ಪಿಗಳು, 28 ಡಿವೈಎಸ್‌ಪಿ, 175 ಸಬ್ ಇನ್‌ಸ್ಪೆಕ್ಟರ್, 401 ಎಎಸ್‌ಐ, 2,678 ಹೆಡ್ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್, 500 ಗೃಹ ರಕ್ಷಕ ದಳದ ಸಿಬ್ಬಂದಿ, 16 ಕೆಎಸ್‌ಆರ್‌ಪಿ ತುಕಡಿ, 14 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಭದ್ರತೆ ವಹಿಸಲಿದ್ದಾರೆ.
ನಗರದಾದ್ಯಂತ 151 ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ, 26 ಕಣ್ಗಾವಲು ಟವರ್ ನಿರ್ಮಾಣ ಮಾಡಲಾಗಿದೆ. ಮೆರವಣಿಗೆ ಮಾರ್ಗದಲ್ಲಿನ ವಿಡಿಯೊ ಚಿತ್ರೀಕರಣಕ್ಕಾಗಿ 67 ವಿಡಿಯೊಗ್ರಾಫರ್‌ಗಳನ್ನು ನೇಮಿಸಲಾಗಿದೆ. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಎತ್ತರದ ಕಟ್ಟಡಗಳ ಮೇಲೆ 49 ಸ್ಕೈ ಸೆಂಟ್ರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ 8 ಡ್ರೋನ್ ಕ್ಯಾಮೆರಾ ನಿಗಾ ಇದೆ.
ಎಸ್‌ಜೆಎಂ ಡೆಂಟಲ್ ಕಾಲೇಜ್‌ನಲ್ಲಿ ಕಮಾಂಡ್ ಕೇಂದ್ರ ತೆರೆಯಲಾಗಿದೆ. ಬಂದೋಬಸ್ತ್ ಸೆಕ್ಟರ್ ಅಧಿಕಾರಿಗಳ ಸಂವಹನಕ್ಕಾಗಿ ಹೆಚ್ಚುವರಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಶೋಭಾಯಾತ್ರೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂಬಂಧ 3 ಸೆಕ್ಟರಲ್ ಮ್ಯಾಜಿಸ್ಟ್ರೇಟ್ ನಿಯೋಜನೆ ಮಾಡಲಾಗಿದೆ.
ಶೋಭಾಯಾತ್ರೆ ದಿನ ಸಂಚರಿಸಲಿರುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಲಿವೆ. ಚಳ್ಳಕೆರೆ ಗೇಟ್‌ನಿಂದ ಎಂ.ಜಿ. ವೃತ್ತ, ಹೊಳಲ್ಕೆರೆ ಮಾರ್ಗದ ಕಣಿವೆ ಕ್ರಾಸ್‌ವರೆಗಿನ ರಸ್ತೆಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಗಣೇಶ ಮೂರ್ತಿ ವಿಸರ್ಜನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯ 509 ರೌಡಿ ಶೀಟರ್, 63 ಮತೀಯ ಗೂಂಡಾಗಳ ಮೇಲೆ ನಿಗಾ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶೋಭಾಯಾತ್ರೆ ಸಾಗುವ ಮಾರ್ಗದ 5 ಸ್ಥಳಗಳಲ್ಲಿ ಎಸ್‌ಡಿಆರ್‌ಎಫ್ ತಂಡ ಇರಲಿದೆ. 5 ಕಡೆಗಳಲ್ಲಿ ಚಿಕಿತ್ಸಾ ಕೇಂದ್ರ, 6 ಕಡೆಗಳಲ್ಲಿ ಪೊಲೀಸ್ ಸಹಾಯ ವಾಣಿ ತೆರೆಯಲಾಗಿದೆ.
ಶೋಭಾಯಾತ್ರೆ ಮಾರ್ಗದ ಇಕ್ಕೆಲಗಳ ಶಿಥಿಲ ಕಟ್ಟಡಗಳ ಮೇಲೆ ಜನರು ನಿಲ್ಲಲು ಅವಕಾಶ ನೀಡದಂತೆ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಮೆರವಣಿಗೆ ಸಮಯದಲ್ಲಿ ಗಲಾಟೆಯಲ್ಲಿ ತೊಡಗುವಂತಹ ಕಿಡಿಗೇಡಿಗಳ ಮೇಲೆ ನಿಗಾ ವಹಿಸಲು 5 ಪಿಕಪ್ ಸ್ಕ್ವ್ಯಾಡ್‌ಗಳನ್ನು ನೇಮಿಸಲಾಗಿದೆ.
ಜಿಲ್ಲಾ ಆಸ್ಪತ್ರೆ ಮತ್ತು ಬಸವೇಶ್ವರ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ಒಳಗೊಂಡ ತಂಡ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲಿದೆ. 30 ಹಾಸಿಗೆಯ ತುರ್ತು ವಾರ್ಡ್ ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆ ಮಾರ್ಗದಲ್ಲಿ ನುರಿತ 15 ವೈದ್ಯರು ಸೇವೆ ನೀಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ಡಿ.ಜೆ. ಪೇಪರ್ ಬ್ಲಾಸ್ಟಿಂಗ್ ಪಟಾಕಿ ನಿಷೇಧ
ಮೆರವಣಿಗೆ ವೇಳೆ ಡಿ.ಜೆ ಪೇಪರ್ ಬ್ಲಾಸ್ಟಿಂಗ್ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಲಾಗಿದ್ದು ಸುಳ್ಳು ಸುದ್ದಿ ಚಿತ್ರಗಳು ಇತರೆ ವಿವರಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಸೆ.12ರ ಸಂಜೆ 6 ಗಂಟೆಯಿಂದ ಸೆ.13ರ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲೆಯ ಚಿತ್ರದುರ್ಗ ಹೊಳಲ್ಕೆರೆ ಹೊಸದುರ್ಗ ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನದ್ಯಾಂತ ಮದ್ಯ ಮರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.