
ನಾಯಕನಹಟ್ಟಿ: ಭದ್ರಾಮೇಲ್ದಂಡೆ ಯೋಜನೆ ರಾಜ್ಯ ಸರ್ಕಾರದ ನೀರಾವರಿ ಇಲಾಖೆಯ ಯೋಜನೆಯೇ ಹೊರತು ಕೇಂದ್ರ ಸರ್ಕಾರದ ಯೋಜನೆಯಲ್ಲ. ಹಾಗಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ನಾಯಕನಹಟ್ಟಿ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭದ್ರಾಮೇಲ್ದಂಡೆ ಯೋಜನೆಗೆ ಮೊದಲು ಅನುದಾನ ಬಿಡುಗಡೆ ಮಾಡಿದ್ದೇ ಬಿಜೆಪಿ ಸರ್ಕಾರ. ಯುಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ₹ 5,700ಕೋಟಿ, ಮತ್ತೊಮ್ಮೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಪುನಃ ಅನುದಾನ ಬಿಡುಗಡೆ ಮಾದ್ದರು. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಒಟ್ಟು ₹ 8 ಸಾವಿರ ಕೋಟಿ ಅನುದಾನಬಿಡುಗಡೆ ಮಾಡಿದೆ. ಆದರೆ, ಇಲ್ಲಿಯವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಭದ್ರಾಮೇಲ್ದಂಡೆ ಯೋಜನೆಗೆ ಎಷ್ಟು ಹಣ ಬಿಡಗಡೆ ಮಾಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ ಎಂದರು.
ಯೋಜನೆಯ ಹೆಸರು ಹೇಳಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ನೀರಾವರಿ ಯೋಜನೆ ಜಾರಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರ ನಡೆಸುವವರಿಗೆ ಕನಿಷ್ಠ ಜ್ಞಾನವಿರಬೇಕು. ಅನುದಾನದ ಕೊರತೆಯ ನೆಪಹೊಡ್ಡಿ ಯೋಜನೆಯನ್ನು ನಿಲ್ಲಿಸಬಾರದು ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ಎರಡು ವರ್ಷದ ಹಿಂದಿನ ಬಜೆಟ್‌ನಲ್ಲಿ ₹ 5,300 ಕೋಟಿ ಅನುದಾನವನ್ನು ಘೋಷಿಸಿತ್ತು. ಜೊತೆಗೆ ಅನುದಾನ ಬಿಡುಗಡೆಗೆ ಪರಿಷ್ಕೃತ ಅಂದಾಜುಪಟ್ಟಿ, ಮೊದಲ ಅಂದಾಜುಪಟ್ಟಿ ಎಷ್ಟಿತ್ತು?, ಹಿಂದೆ ಖರ್ಚಾದ ಹಣವೆಷ್ಟು?, ಯಾವುದಕ್ಕೆ ವ್ಯಯಿಸಲಾಗಿದೆ, ಮುಂದೆ ಎಷ್ಟು ಹಣದ ಅವಶ್ಯಕತೆ ಇದೆ ಎಂಬ ದಾಖಲೆಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಕೇಳಿತ್ತು. ಆದರೆ, ಆ ದಾಖಲೆಗಳನ್ನು ಒದಗಿಸಲು ರಾಜ್ಯ ಸರ್ಕಾರ ಎರಡೂವರೆ ವರ್ಷದಿಂದ ಒದ್ದಾಡುತ್ತಿದೆ. ಹಾಗಾಗಿ ಯೋಜನೆಗೆ ಅನುದಾನದ ಕೊರತೆಯಾಗಿದೆ. ಇದೆಲ್ಲಕೂ ನೇರಹೊಣೆ ರಾಜ್ಯಸರ್ಕಾರ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.