
ಚಳ್ಳಕೆರೆ: ತಾಲ್ಲೂಕಿನ ಗಡಿ ಭಾಗದ ಕಾಲುವೆಹಳ್ಳಿ ಗ್ರಾಮದಲ್ಲಿ ಕಾರ್ತಿಕೋತ್ಸವದ ಪ್ರಯುಕ್ತ ಬಂಡೆ ಬಸವೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ ಗುರುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಕೀಲು ಕುದುರೆ, ನಂದಿಕೋಲು, ನಂದಿಧ್ವಜ, ಸೋಮನ ಕುಣಿತ, ಡೊಳ್ಳು, ತಮಟೆ, ಉರುಮೆ ಮುಂತಾದ ಜಾನಪದ ಕಲಾ ತಂಡಗಳು ಮೆರುಗು ನೀಡಿದವು.
ಸ್ವಾಮಿಗೆ ರುದ್ರಾಭಿಷೇಕ, ರಥದ ಅಲಂಕಾರ, ಮುಕ್ತಿಬಾವುಟ ಹಾರಾಜು, ರಥಕ್ಕೆ ಬಲಿ ಅನ್ನ ಅರ್ಪಣೆ ಹಾಗೂ ಮಹಾ ಮಂಗಳಾರತಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದಾರಿಯುದ್ದಕ್ಕೂ ಭಕ್ತರು ಸೂರುಬೆಲ್ಲ, ಬಾಳೆಹಣ್ಣು, ಹೂವು, ವೀಳ್ಯೆದೆಲೆ ಮತ್ತು ನವಧಾನ್ಯಗಳ ಹರಕೆ ಅರ್ಪಿಸಿದರು.
ಕಾಂಗ್ರೆಸ್ ಮುಖಂಡ ಹರೀಶ್ ನಾಯಕ, ₹75,000ಕ್ಕೆ ಮುಕ್ತಿಬಾವುಟವನ್ನು ಹಾರಾಜಿನಲ್ಲಿ ಪಡೆದರು.
ಆಕರ್ಷಿಸಿದ ಕಲ್ಲುಕಂಬ ಎಳೆಯುವ ಸ್ಪರ್ಧೆ: ಶುಕ್ರವಾರ ಬೆಳಿಗ್ಗೆ ಗ್ರಾಮದಲ್ಲಿ ಆಯೋಜಿಸಿದ್ದ ಎತ್ತುಗಳಿಂದ ಕಲ್ಲುಕಂಬ ಎಳೆಯುವ ಸ್ಪರ್ಧೆ ಜನಮನ ಸೆಳೆಯಿತು.
ಕೆಲವರು ಹೊರರಾಜ್ಯದಿಂದಲೂ ಜೋಡೆತ್ತುಗಳನ್ನು ಕರೆತಂದಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಜೋಡೆತ್ತುಗಳಿಗೆ ಪ್ರಥಮ ಬಹುಮಾನ (₹20,000) ದೊರೆಯಿತು. ಪೆನುಗೊಂಡದ ಜೋಡೆತ್ತು ದ್ವಿತೀಯ (₹10,000), ರಾಯದುರ್ಗದ ಎತ್ತುಗಳಿಗೆ ತೃತೀಯ (₹5,000) ಬಹುಮಾನ ಸಿಕ್ಕಿತು. ಕಾಲುವೆಹಳ್ಳಿ ಗ್ರಾಮದ ಗೌಡರ ಪಾಲಯ್ಯ ಅವರ ಎತ್ತುಗಳು ₹3,000 ನಗದು ಬಹುಮಾನ ಪಡೆದವು.
ರೈತ ಮುಖಂಡ ಕೆ.ಪಿ.ಭೂತಯ್ಯ, ಕೆ.ಜಿ.ರಾಮಣ್ಣ, ಪಿ.ಶ್ರೀನಿವಾಸ್, ಮಹಂತೇಶ್‍ನಾಯಕ, ಕೆ.ಓ.ಪಾಪಣ್ಣ, ಜಾಜೂರು ಹನುಮಂತಪ್ಪ, ಕರಿಬಸಪ್ಪ, ಲಿಂಗದಳ್ಳಿ ಪಾಲಣ್ಣ, ರಾಘವೇಂದ್ರ, ಜಿ.ಟಿ.ರಂಗಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.