ADVERTISEMENT

ಎ‍ಪಿಎಂಸಿಯಲ್ಲಿ ಕುಸಿದ ಶೇಂಗಾ ಆವಕ

ಇಳುವರಿ ಕುಸಿತದ ಪರಿಣಾಮ, ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುತ್ತಿದೆ ಅಲ್ಪ ಪ್ರಮಾಣದ ಶೇಂಗಾ

ಎಂ.ಎನ್.ಯೋಗೇಶ್‌
Published 26 ನವೆಂಬರ್ 2025, 5:28 IST
Last Updated 26 ನವೆಂಬರ್ 2025, 5:28 IST
ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಶೇಂಗಾ ಆವಕ
ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಗೆ ಬಂದಿರುವ ಶೇಂಗಾ ಆವಕ   

ಚಿತ್ರದುರ್ಗ: ನವೆಂಬರ್‌ ತಿಂಗಳ ವೇಳೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿದ್ದ ಶೇಂಗಾ ಆವಕದ ಅಬ್ಬರ ಈ ಬಾರಿ ಇಲ್ಲವಾಗಿದೆ. ಅತೀವೃಷ್ಟಿ, ಅಕಾಲಿಕ ಮಳೆಯಿಂದ ಶೇಂಗಾ ಇಳುವರಿ ಕುಸಿದಿರುವ ಕಾರಣ ಮಾರುಕಟ್ಟೆಯಲ್ಲಿ ಆವಕವೂ ಕುಸಿದಿದೆ.

ಕೋಟೆನಾಡಿನಲ್ಲಿ ಅಲ್ಪಪ್ರಮಾಣದ ಶೇಂಗಾ ಬೆಳೆದರೂ ಎಪಿಎಂಸಿ ಮಾರುಕಟ್ಟೆಗೆ ಪ್ರತಿ ವರ್ಷ ಹೊರಜಿಲ್ಲೆ, ಹೊರರಾಜ್ಯದಿಂದ ಅಪಾರ ಪ್ರಮಾಣದ ಶೇಂಗಾ ಹರಿದು ಬರುತ್ತಿತ್ತು. ಅಕ್ಟೋಬರ್‌ನಿಂದಲೇ ಆರಂಭವಾಗುತ್ತಿದ್ದ ಆವಕ ಡಿಸೆಂಬರ್‌ ಅಂತ್ಯದವರೆಗೂ ಮುಂದುವರಿಯುತ್ತಿತ್ತು. ಆದರೆ ಈ ಬಾರಿ ರಾಜ್ಯದಾದ್ಯಂತ ಶೇಂಗಾ ಇಳುವರಿ ಕುಸಿದಿದ್ದು ಮಾರುಕಟ್ಟೆಯಲ್ಲಿ ಶೇಂಗಾ ನೋಡಲು ಸಿಗುತ್ತಿಲ್ಲ.

ಕಳೆದ 2 ವಾರದಿಂದಷ್ಟೇ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಆವಕ ಆರಂಭವಾಗಿದೆ. ಪ್ರತಿ ವರ್ಷ ಸೋಮವಾರ, ಬುಧವಾರ, ಶುಕ್ರವಾರಗಳಂದು ಇಡೀ ಮಾರುಕಟ್ಟೆಯಲ್ಲಿ ಶೇಂಗಾವೇ ಕಾಣುತ್ತಿತ್ತು. ಆದರೆ ಈಗ ಕೆಲವು ಕಡೆಗಳಲ್ಲಿ ಮಾತ್ರ ಶೇಂಗಾ ಕಾಣುತ್ತಿದೆ. ಅದರೂ ಬಳ್ಳಾರಿ, ವಿಜಯನಗರ ಹಾಗೂ ಆಂಧ್ರ ಪ್ರದೇಶದಿಂದ ರೈತರು ಶೇಂಗಾ ತಂದು ಮಾರಾಟ ಮಾಡುತ್ತಿದ್ದಾರೆ. ಬೆಲೆಯೂ ಸಮಾಧಾನಕರವಾಗಿದೆ.

ADVERTISEMENT

‘ಮೊದಲಿನಿಂದಲೂ ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಯ ವರ್ತಕರ ಜೊತೆ ನಮಗೆ ಅವಿನಾಭಾವ ಸಂಬಂಧವಿದೆ. ಈ ಬಾರಿ ಇಳುವರಿ ಕಡಿಮೆಯಾದರೂ ಇಲ್ಲಿಗೇ ತಂದು ಮಾರಾಟ ಮಾಡುತ್ತಿದ್ದೇವೆ. ಮಳೆ ಕಾರಣದಿಂದ ಈ ಬಾರಿ ಇಳುವರಿ ಕುಸಿದಿದೆ’ ಎಂದು ಕೂಡ್ಲಿಗಿ ತಾಲ್ಲೂಕಿನ ರೈತರೊಬ್ಬರು ಹೇಳಿದರು.

ಕೋಟೆನಾಡಿನಲ್ಲಿ ಚಳ್ಳಕೆರೆ ತಾಲ್ಲೂಕಿನ ಆಂಧ್ರ ಗಡಿ ಭಾಗದಲ್ಲಿ ಮಾತ್ರ ಶೇಂಗಾ ಬೆಳೆಯುತ್ತಾರೆ. ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿರುವ ಮಾರುಕಟ್ಟೆಗಳಿಗೆ ಹೊರಜಿಲ್ಲೆ, ಆಂಧ್ರಪ್ರದೇಶದಿಂದ ಬರುವ ಶೇಂಗಾ ವಹಿವಾಟು ನಡೆಯುತ್ತದೆ. ಕರ್ನೂಲ್‌, ಅನಂತಪುರ, ಮಡಕಶಿರ, ರಾಯದುರ್ಗ ಭಾಗದಿಂದ ಹೆಚ್ಚಿನ ರೈತರು ಚಳ್ಳಕೆರೆ, ಚಿತ್ರದುರ್ಗ ಮಾರುಕಟ್ಟೆಗಳಿಗೆ ಶೇಂಗಾ ತಂದು ಮಾರಾಟ ಮಾಡುತ್ತಾರೆ.

ಈ ಬಾರಿ ಪ್ರತಿ ಕ್ವಿಂಟಲ್‌ ಗರಿಷ್ಠ ದರ ₹ 7,689ಕ್ಕೆ ಶೇಂಗಾ ಮಾರಾಟವಾಗುತ್ತಿದೆ. ಸಾಧಾರಣ ಗುಣಮಟ್ಟದ ಶೇಂಗಾ ₹ 6,500ಕ್ಕೆ ಮಾರಾಟವಾಗುತ್ತಿದೆ. ಆಂಧ್ರಪ್ರದೇಶ ಭಾಗದಿಂದ ಬರುತ್ತಿರುವ ಶೇಂಗಾ ಉತ್ತಮ ಗುಣಮಟ್ಟದಿಂದ ಕೂಡಿದೆ. ಆದರೆ ಸ್ಥಳೀಯ ರೈತರ ಶೇಂಗಾದ ಗುಣಮಟ್ಟ ಕುಸಿದಿದ್ದು ಕನಿಷ್ಠ ಬೆಲೆಗೆ ಮಾರಾಟವಾಗುತ್ತಿದೆ.

‘ಈ ಬಾರಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಕಡೆ ಶೇಂಗಾ ಭೂಮಿಯಿಂದ ಮೇಲೇಳಲೇ ಇಲ್ಲ. ರೈತರ ಬಳಿಯೇ ಶೇಂಗಾ ಇಲ್ಲದ ಕಾರಣ ಮಾರುಕಟ್ಟೆಗೂ ಬರುತ್ತಿಲ್ಲ’ ಎಂದು ನಾಯಕನಹಟ್ಟಿಯ ರೈತರೊಬ್ಬರು ಹೇಳಿದರು.

‘ಈ ಬಾರಿ ರಾಜ್ಯದಾದ್ಯಂತ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿಗೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಯಾವ ರೈತರೂ ನೋಂದಣಿ ಮಾಡಿಸಿಲ್ಲ. ವಿವಿಧ ಕಾರಣಗಳಿಂದಾಗಿ ಈ ಬಾರಿ ಗುಣಮಟ್ಟದ ಶೇಂಗಾ ಇಲ್ಲವಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.