ADVERTISEMENT

ಚಿತ್ರದುರ್ಗ: ಕೋಟೆನಾಡಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

‘ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 2:50 IST
Last Updated 14 ಆಗಸ್ಟ್ 2022, 2:50 IST
1) ಚಿತ್ರದುರ್ಗ ನಗರದ ಮುಖ್ಯ ರಸ್ತೆಯಲ್ಲಿ ಶನಿವಾರ ಸಾಗಿದ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಜಾಥಾ. 2) ವಿವಿಧ ವೇಷಭೂಷಣದಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು. 3) ಚಳ್ಳಕೆರೆಯಲ್ಲಿ ಶನಿವಾರ ನಡೆದ ಹರ್‌ ಘರ್ ತಿರಂಗಾ ಅಭಿಯಾನದಲ್ಲಿ ವಿವಿಧ ವೇಷ ಭೂಷಣ ಧರಿಸಿದ್ದ ವಿದ್ಯಾರ್ಥಿಗಳು.
1) ಚಿತ್ರದುರ್ಗ ನಗರದ ಮುಖ್ಯ ರಸ್ತೆಯಲ್ಲಿ ಶನಿವಾರ ಸಾಗಿದ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಜಾಥಾ. 2) ವಿವಿಧ ವೇಷಭೂಷಣದಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು. 3) ಚಳ್ಳಕೆರೆಯಲ್ಲಿ ಶನಿವಾರ ನಡೆದ ಹರ್‌ ಘರ್ ತಿರಂಗಾ ಅಭಿಯಾನದಲ್ಲಿ ವಿವಿಧ ವೇಷ ಭೂಷಣ ಧರಿಸಿದ್ದ ವಿದ್ಯಾರ್ಥಿಗಳು.   

ಚಿತ್ರದುರ್ಗ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಕರೆ ನೀಡಿದ್ದ ‘ಹರ್‌ ಘರ್‌ ತಿರಂಗಾ ಅಭಿಯಾನ’ಕ್ಕೆ ಜಿಲ್ಲೆಯಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಅಭಿಯಾನದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯೇ ಬಹುತೇಕರು ಧ್ವಜಗಳನ್ನು ಖರೀದಿಸಿ ಸಿದ್ಧತೆ ಮಾಡಿಕೊಂಡಿದ್ದರು. ಹರ್‌ ಘರ್‌ ತಿರಂಗಾ ಘೋಷವಾಕ್ಯದೊಂದಿಗೆ ಶನಿವಾರ ಬೆಳಿಗ್ಗೆ 8 ಗಂಟೆಯೊಳಗೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ ದೇಶಭಕ್ತಿ
ಮೆರೆದರು.

ಎಲ್ಲೆಡೆ ಧ್ವಜವನ್ನು ಹಾರಿಸಬೇಕೆಂಬ ಉದ್ದೇಶದಿಂದ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಿಲ್ಲೆಗೆ 1.25 ಲಕ್ಷ ರಾಷ್ಟ್ರಧ್ವಜ ಪೂರೈಕೆ ಮಾಡಿತ್ತು. ಜತೆಗೆ ಸ್ವಸಹಾಯ ಸಂಘಗಳು ಹಾಗೂ ಇತರೆ ತಯಾರಕರಿಂದ ಜಿಲ್ಲಾ ಪಂಚಾಯಿತಿಯಿಂದಲೂ 1 ಲಕ್ಷ ಧ್ವಜ ಹಾಗೂ ಸ್ಥಳೀಯ ಸಂಸ್ಥೆಗಳಿಂದಲೂ 30 ಸಾವಿರ ಧ್ವಜಗಳನ್ನು ಖರೀದಿಸಿ ಜನತೆಗೆ ನೀಡಲಾಗಿತ್ತು. ಇದರಿಂದಾಗಿ ಶಾಲಾ –ಕಾಲೇಜು, ಆಸ್ಪತ್ರೆಗಳು, ಸರ್ಕಾರಿ ಕಚೇರಿ ಕಟ್ಟಡಗಳು, ಸರ್ಕಾರೇತರ ಸಂಘ-ಸಂಸ್ಥೆಗಳು, ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ವಸತಿ ಸಮುಚ್ಚಯ, ಏಳು ಸುತ್ತಿನ ಕೋಟೆಯ ಮೇಲೂ ‘ತಿರಂಗಾ’
ರಾರಾಜಿಸಿತು.

ADVERTISEMENT

ಧ್ವಜ ಸಂಹಿತೆ ಅನ್ವಯ ಸರ್ಕಾರಿ, ಅರೆ ಸರ್ಕಾರಿ, ಶಾಲಾ–ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಶನಿವಾರ ಸೂರ್ಯಸ್ತದ ಸಮಯಕ್ಕೆ ಇಳಿಸಲಾಯಿತು. ಆದರೆ ಮನೆಗಳ ಮೇಲೆ ಹಾರಿಸಿದ್ದ ಧ್ವಜಗಳು 24 ಗಂಟೆಯೂ ಹಾರಿಸಲಾಯಿತು. ಕೆಲ ಮನೆಗಳಲ್ಲಿ ಧ್ವಜಕ್ಕೆ ಕತ್ತಲು ಆವರಿಸಬಾರದೆಂದು ವಿದ್ಯುತ್‌ ಬೆಳಕಿನ ವ್ಯವಸ್ಥೆ ಮಾಡಿದ್ದು ಕಂಡು ಬಂದಿತು.

ನಗರದ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯಿಂದ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳ ಬೃಹತ್‌ ಜಾಥಾ ನಡೆಸಲಾಯಿತು. ಬೆಳಿಗ್ಗೆ 9ಕ್ಕೆ ಚಳ್ಳಕೆರೆ ಟೋಲ್‌ಗೇಟ್‌ ಬಳಿಯ ಇಂಡಿಯನ್‌ ಇಂಟರ್‌ ನ್ಯಾಷನಲ್‌ ಶಾಲಾ ಆವರಣದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಮದಕರಿ ನಾಯಕನ ವೃತ್ತ, ಅಂಬೇಡ್ಕರ್‌ ವೃತ್ತದಿಂದ ಗಾಂಧಿ ಸರ್ಕಲ್‌ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಪ್ರವಾಸಿ ಮಂದಿರದ ಮೂಲಕ ಒನಕೆ ಓಬವ್ವ ವೃತ್ತದಲ್ಲಿ ಜಾಥಾ ಕೊನೆಗೊಂಡಿತು.

ಭೂಸೇನೆ, ನೌಕಸೇನೆ, ವಾಯುಸೇನೆ, ಶ್ವಾನದಳ, ಪೊಲೀಸ್‌, ಫ್ರಂಟ್‌ ಲೈನ್‌ ವಾರಿಯರ್ಸ್‌, ರಾಜರು, ರಾಣಿಯರು, ರೈತರು, ಸ್ಕೌಟ್‌ ಮತ್ತು ಗೈಡ್ಸ್, ಅಗೋರಿಗಳು, ಕವಿಗಳು, ಕಾಡು ಮನುಷ್ಯರು, ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ರಾಜ್ಯಗಳ ನೃತ್ಯ, ಋಷಿಮುನಿಗಳು, ವಿಜ್ಞಾನಿಗಳು, ಗಣಿತ ಶಾಸ್ತ್ರಜ್ಞರು, ಕ್ರೀಡ ಸಾಧಕರು ಹೀಗೆ ಅಖಂಡ ಭಾರತ ಬಿಂಬಿಸುವ ವೇಷಭೂಷಣಗಳನ್ನು ತೊಟ್ಟ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಅಮೃತ ಮಹೋತ್ಸವದ ಜಾಗೃತಿ ಮೂಡಿಸಿದರು.

‘ಹರ್‌ ಘರ್‌ ತಿರಂಗಾ ಅಭಿಯಾನ’ದಿಂದಾಗಿ ಜಿಲ್ಲೆಯಲ್ಲಿ ಶನಿವಾರವೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಆಟೊ, ಟ್ರ್ಯಾಕ್ಟರ್‌, ಬಸ್‌ಗಳ ಮೇಲೆ ಧ್ವಜವನ್ನು ಕಟ್ಟಿಕೊಂಡು ಜನತೆ ರಾಷ್ಟ್ರ ಪ್ರೇಮ ತೋರಿದರು. ಧ್ವಜಾರೋಹಣ ನಡೆಯುವ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಪೊಲೀಸರು, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ತಾಲೀಮು ನಡೆಸಿದರು.

ಶಾಲಾ–ಕಾಲೇಜು ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯಲ್ಲಿ ದೇಶ ಪ್ರೇಮದ ಘೋಷ ವಾಕ್ಯ ಕೂಗುತ್ತ ಜಾಥಾ ನಡೆಸಿದರು. ಸಂಜೆ ಕೋಟೆ ಆವರಣದಲ್ಲಿ ಜಮಾಯಿಸಿದ ಸಾರ್ವಜನಿಕರು ವಿದ್ಯುತ್‌ ದೀಪಾಲಂಕಾರವನ್ನು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.