ADVERTISEMENT

ಎಸ್ಸೆನ್ ನೋಡಲು ಹೋಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದೆ: ಹೋರಾಟಗಾರ ಹನುಮಂತಪ್ಪ

ಸುವರ್ಣಾ ಬಸವರಾಜ್
Published 14 ಆಗಸ್ಟ್ 2022, 2:48 IST
Last Updated 14 ಆಗಸ್ಟ್ 2022, 2:48 IST
ಮರಡಿಹಳ್ಳಿ ಹನುಮಂತಪ್ಪ.
ಮರಡಿಹಳ್ಳಿ ಹನುಮಂತಪ್ಪ.   

ಹಿರಿಯೂರು: ‘ಚಿತ್ರದುರ್ಗಕ್ಕೆ ಎಸ್. ನಿಜಲಿಂಗಪ್ಪನವರನ್ನು ನೋಡಲೆಂದು ಹೋಗಿದ್ದೆ. ಅವರ ವಿಚಾರಧಾರೆಗಳಿಗೆ ಮಾರು ಹೋಗಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದಕ್ಕಿಂತ ದೊಡ್ಡ ಕೆಲಸ ಯಾವುದೂ ಇಲ್ಲ ಎಂದು ಹೋರಾಟಕ್ಕೆ ಧುಮುಕಿದೆ’.

ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಯ ಸುಮಾರು 88 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಹನುಮಂತಪ್ಪ ಅವರ ಸ್ಪಷ್ಟೋಕ್ತಿ.

‘ಓದುವ ವಯಸ್ಸು. ಓದಬೇಕೆಂಬ ಅದಮ್ಯ ಬಯಕೆ ಇತ್ತು. ಆದರೆ ನಿಜಲಿಂಗಪ್ಪನವರ ಮಾತುಗಳನ್ನು ಕೇಳಿದ ನಂತರ, ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸುವುದು ಎಲ್ಲದಕ್ಕಿಂತ ಮುಖ್ಯ. ಅದಕ್ಕಾಗಿ ಓದು, ಮನೆ–ಮಠ ತ್ಯಜಿಸುವುದು ಅನಿವಾರ್ಯ. ಇಲ್ಲವಾದಲ್ಲಿ ನನ್ನ ಬದುಕಿಗೆ ಅರ್ಥವೇ ಇಲ್ಲ ಅನಿಸಿತ್ತು.

ADVERTISEMENT

‘ಹೋರಾಟಗಾರರ ಜೊತೆ ಸೇರಿ ಕಲ್ಲಹಳ್ಳಿ, ಚಿಕ್ಕಸಿದ್ದವ್ವನಹಳ್ಳಿಗಳಲ್ಲಿ ಈಚಲುಮರ ಕಡಿಯುವ ಚಳವಳಿಯಲ್ಲಿ ಪಾಲ್ಗೊಂಡಿದ್ದೆ. ನಮ್ಮೂರಿನಲ್ಲಿನ ಸೇಂದಿ ಅಂಗಡಿ ಮುಚ್ಚಿಸುವಲ್ಲಿ ಯಶಸ್ವಿಯಾದೆ. ಬ್ರಿಟಿಷರು ನಮ್ಮ ಜಿಲ್ಲೆಗೆ ಬರಬಾರದು ಎಂದು ಚಿತ್ರದುರ್ಗದಲ್ಲಿ ರೈಲ್ವೆ ಕಂಬಿ ಕೀಳುವ ಹೋರಾಟದಲ್ಲಿ ಪಾಲ್ಗೊಂಡು ಜೈಲು ಸೇರಿದ್ದೆ’ ಎಂದು ತಮ್ಮ ಬಾಲ್ಯದ ನೆನಪುಗಳನ್ನು ಹನುಮಂತಪ್ಪ ಬಿಚ್ಚಿಟ್ಟರು.

‘ಕಡಿದಾಳ್ ಮಂಜಪ್ಪ, ಎಸ್. ನಿಜಲಿಂಗಪ್ಪ, ಚಂದ್ರರಾಯ ರೆಡ್ಡಿ ಅವರೊಂದಿಗೆ ಬ್ರಿಟೀಷರ ವಿರುದ್ಧದ ಹೋರಾಟದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೆ. ನಿಜಲಿಂಗಪ್ಪ, ಕಡಿದಾಳು ಮಂಜಪ್ಪ ಅವರಂತಹ ಹೋರಾಟಗಾರರ ಜೊತೆಯಲ್ಲಿದ್ದೆ ಎಂಬುದೇ ದೊಡ್ಡ ಭಾಗ್ಯ. ಚಿತ್ರದುರ್ಗ ಜಿಲ್ಲೆಯಲ್ಲಿ ತುರುವನೂರು ಹೊರತುಪಡಿಸಿದರೆ ಮರಡಿಹಳ್ಳಿಯಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರು ಹೆಚ್ಚು. ನಮ್ಮೂರಿನ ಕವಿ ಪಿ. ಸೀತಾರಾಮ ರೆಡ್ಡಿ ಹೋರಾಟದ ಮುಂಚೂಣಿಯಲ್ಲಿದ್ದರು. ಅವರಲ್ಲದೇ ದಾಸರ ನರಸಿಂಹಪ್ಪ, ಪಿ. ವೆಂಕಟಪ್ಪ, ಮಾತ್ಕೋರು ತಿಮ್ಮಪ್ಪ, ಮೇಗಳಮನೆ ಹನುಮಂತಪ್ಪ, ಎಸ್. ಗೋವಿಂದರೆಡ್ಡಿ, ಮಾವಿನಕೊಂಡ ನಾರಾಯಣರೆಡ್ಡಿ, ಬಂಡಿ ಅಜ್ಜಯ್ಯ, ಮೇಗಳಮನೆ ತಿಪ್ಪಣ್ಣ, ಬಂಡ್ಲೋರು ಗೋವಿಂದ ರೆಡ್ಡಿ, ಲಾವಣಿ ನಾರಾಯಣ ರೆಡ್ಡಿ, ಬಿ. ಸಿದ್ದಪ್ಪ, ಮಣೆಗಾರ ರಾಮಪ್ಪ, ಎಂ. ಪುರಪ್ಪ, ಮಣ್ಣೆಪ್ಪ, ಪೂಜಾರ್ ಕದರಪ್ಪ, ಎನ್. ಚಂದ್ರಪ್ಪ, ಮರಿಯಪ್ಪಗಳ ರಾಮಪ್ಪ, ಗುಜರಪ್ಪಗಳ ಕಿಸ್ಟಪ್ಪ (ಇವರೆಲ್ಲ ನಿಧನರಾಗಿದ್ದಾರೆ) ನಮ್ಮೂರಿನ ಸ್ವಾತಂತ್ರ್ಯ ಹೋರಾಟಗಾರರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದ ದೊಡ್ಡ ಸಂಖ್ಯೆಯ ನಮ್ಮೂರಿನ ಯುವ ಹೋರಾಟಗಾರಲ್ಲಿ ನಾನೂ ಒಬ್ಬನಾಗಿದ್ದೆ ಎಂಬುದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಹನುಮಂತಪ್ಪ.

‘ಈಚೆಗೆ ವಯಸ್ಸಿನ ಕಾರಣಕ್ಕೆ ಆರೋಗ್ಯ ಹದಗೆಡುತ್ತಿದೆ. ನೆನಪಿನ ಶಕ್ತಿಯೂ ಕಡಿಮೆಯಾಗುತ್ತಿದೆ. ಪ್ರಸ್ತುತ ರಾಜಕೀಯ ವ್ಯವಸ್ಥೆ ಕುರಿತು ವಿಶ್ಲೇಷಣೆ ಮಾಡುವ ಮನಸ್ಸೂ ಇಲ್ಲ, ಆಸಕ್ತಿಯೂ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧೀಜಿ ಕರೆಕೊಟ್ಟಿದ್ದಂತೆ ದೇಶದಲ್ಲಿ ಗ್ರಾಮ ಸ್ವರಾಜ್ಯ ಜಾರಿಯಾಗಬೇಕು. ಹಳ್ಳಿಗಳ ಏಳಿಗೆಯಲ್ಲಿ ದೇಶದ ಏಳಿಗೆ ಇದೆ ಎಂಬ ತತ್ವ ಅಕ್ಷರಶಃ ಜಾರಿಗೆ ಬರಬೇಕು’ ಎಂದರು.

ಮದ್ಯಮುಕ್ತ ದೇಶದ ಕನಸು: ‘ದಿನವೆಲ್ಲ ಮೈಮುರಿದು ದುಡಿದು, ಕೂಲಿಯಿಂದ ಬಂದ ಹಣವನ್ನೆಲ್ಲ ಹೆಂಡ–ಸಾರಾಯಿಗೆ ಹಾಕಿದರೆ
ಕುಡಿಯುವವನ ಆರೋಗ್ಯದ ಜೊತೆ ಕುಟುಂಬದ ಆರ್ಥಿಕ ಸ್ಥಿತಿ ಹಾಳಾಗುತ್ತದೆ. ಸರ್ಕಾರಕ್ಕೆ ಆದಾಯ ತರುತ್ತದೆಂದು ಮದ್ಯ ಮಾರಾಟಕ್ಕೆ ಅವಕಾಶ ಕೊಡಬಾರದು. ಗಾಂಧೀಜಿಯ ಕನಸಿನ ರಾಮರಾಜ್ಯ ನಿರ್ಮಾಣವಾಗಲು ದೇಶ ಮದ್ಯಮುಕ್ತವಾಗಬೇಕು. ಸಮಾನತೆ, ಸೋದರತ್ವ, ಸ್ವಾತಂತ್ರ್ಯದ ಬದುಕು ಎಲ್ಲರದ್ದಾಗಬೇಕು’ ಎಂಬುದು ಹನುಮಂತಜ್ಜನ ಕನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.