ADVERTISEMENT

ಜೀವಪರ ನೆಲೆಯುಳ್ಳ ಕ್ಷೇತ್ರ ವೈದ್ಯಕೀಯ: ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 13:37 IST
Last Updated 22 ಜುಲೈ 2021, 13:37 IST
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ನಿರ್ಮಿಸಿರುವ ನೂತನ ಡಯಾಲಿಸಿಸ್ ಕೇಂದ್ರವನ್ನು ವೀಕ್ಷಿಸುತ್ತಿರುವ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಫಾಲಾಕ್ಷಯ್ಯ, ಡೀನ್ ಡಾ.ಜಿ. ಪ್ರಶಾಂತ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ. ಬಸವರಾಜು ಇದ್ದರು.
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ನಿರ್ಮಿಸಿರುವ ನೂತನ ಡಯಾಲಿಸಿಸ್ ಕೇಂದ್ರವನ್ನು ವೀಕ್ಷಿಸುತ್ತಿರುವ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಫಾಲಾಕ್ಷಯ್ಯ, ಡೀನ್ ಡಾ.ಜಿ. ಪ್ರಶಾಂತ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ. ಬಸವರಾಜು ಇದ್ದರು.   

ಚಿತ್ರದುರ್ಗ: ‘ಕೋವಿಡ್ ಸೋಂಕಿತರನ್ನು ಗುಣಪಡಿಸಲು ದೇವಾನುದೇವತೆಗಳು ಸಹಾಯಕ್ಕೆ ಬರಲಿಲ್ಲ. ಪ್ರಾಣವನ್ನು ಲೆಕ್ಕಿಸದೇ ಚಿಕಿತ್ಸೆ ನೀಡಿದ್ದು ವೈದ್ಯರು ಮತ್ತು ಶುಶ್ರೂಷಕಿಯರು. ಅದಕ್ಕಾಗಿ ವೈದ್ಯಕೀಯ ಜೀವಪರ ನೆಲೆಯುಳ್ಳ ಕ್ಷೇತ್ರವಾಗಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಾ.ಬಿ.ಸಿ.ರಾಯ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ವೈದ್ಯಕೀಯ ಕ್ಷೇತ್ರದ ಶಕ್ತಿ ಮತ್ತು ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿದವರು ಡಾ.ಬಿ.ಸಿ.ರಾಯ್. ಇದಕ್ಕಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆಯಿತು. ಇದು ವೈದ್ಯಲೋಕಕ್ಕೆ ದೊಡ್ಡ ಹಿರಿಮೆ ತಂದುಕೊಟ್ಟಿದೆ. ಭಾರತೀಯರು ಉತ್ತಮ ಮೌಲ್ಯ ಪ್ರತಿಪಾದಿಸುತ್ತ ಬರುತ್ತಿದ್ದು, ವೈದ್ಯರು ಮತ್ತು ಶುಶ್ರೂಷಕರು ಜೀವರಕ್ಷಕರಾಗಿದ್ದಾರೆ’ ಎಂದು ಬಣ್ಣಿಸಿದರು.

ADVERTISEMENT

‘ಕೋವಿಡ್‌ ಅವಧಿಯಲ್ಲಿ ಬಸವೇಶ್ವರ ಆಸ್ಪತ್ರೆ ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಚಿಕಿತ್ಸಾ ಸೌಲಭ್ಯ ಹೊಂದಿರುವುದನ್ನು ಪರಿಗಣಿಸಿ ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ಆಸ್ಪತ್ರೆಯ ತುರ್ತು ಔಷಧ ವಿಭಾಗಕ್ಕೆ ಎರಡು ಪಿಜಿ ಸೀಟ್‌ಗಳನ್ನು ನೀಡಿದೆ’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ‘ಕೋವಿಡ್ ನಮ್ಮೆಲ್ಲರಿಗೂ ಪಾಠ ಕಲಿಸಿದೆ. ಬಸವೇಶ್ವರ ಆಸ್ಪತ್ರೆಯ ತೀವ್ರ ನಿಗಾ ಘಟಕ 80 ಹಾಸಿಗೆಯಿಂದ 120ಕ್ಕೆ ಮೇಲ್ದರ್ಜೆಗೆ ಏರಿಸಿರುವುದು ಈ ಭಾಗದ ಜನರಿಗೆ ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಎಂಟು ಹಾಸಿಗೆಗಳ ಸಾಮರ್ಥ್ಯದ ಅತ್ಯಾಧುನಿಕ ಡಯಾಲಿಸಿಸ್ ಚಿಕಿತ್ಸಾ ಘಟಕ ಹಾಗೂ 40 ಹಾಸಿಗೆಯುಳ್ಳ ತೀವ್ರ ನಿಗಾ ಘಟಕಕ್ಕೆ ಚಾಲನೆ ದೊರೆಯಿತು. ವೈದ್ಯರಾದ ಡಾ.ಕೌಸರ್, ಜಯಲಕ್ಮಿ, ರಾಧಾ ಅವರನ್ನು ಸನ್ಮಾನಿಸಲಾಯಿತು.

ಶಿವಬಸವ ಸ್ವಾಮೀಜಿ, ಬಸವಕಿರಣ ಸ್ವಾಮೀಜಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ.ಬಸವರಾಜು, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಎಸ್.ಷಣ್ಮುಖಪ್ಪ, ಪಟೇಲ್ ಶಿವಕುಮಾರ್, ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಫಾಲಾಕ್ಷಯ್ಯ, ಡಾ.ನಾರಾಯಣಮೂರ್ತಿ, ಡಾ.ಅರವಿಂದ ಪಾಟೀಲ, ಡಾ.ತಿಮ್ಮರಾಜು ನಾಯಕ್, ಡಾ.ಪ್ರಸನ್ನ ಇದ್ದರು.

***

ಬಸವೇಶ್ವರ ಆಸ್ಪತ್ರೆಯಲ್ಲಿ 30 ವೆಂಟಿಲೇಟರ್, 120 ಐಸಿಯು ಹಾಸಿಗೆ ವ್ಯವಸ್ಥೆ ಇದೆ. ಕೋವಿಡ್ ವೇಳೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.

ಡಾ.ಜಿ. ಪ್ರಶಾಂತ್, ಕಾಲೇಜಿನ ಡೀನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.