ADVERTISEMENT

ಚಿತ್ರದುರ್ಗ: ‘ಕೋವಿಡ್‌ ಆಸ್ಪತ್ರೆ’ ಪರಿಕರ ಖರೀದಿಗೆ ಬಿ.ಶ್ರೀರಾಮುಲು ಸೂಚನೆ

ಅಧಿಕಾರಿಗಳ ಸಭೆ ನಡೆಸಿದ ಆರೋಗ್ಯ ಸಚಿವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 12:42 IST
Last Updated 14 ಏಪ್ರಿಲ್ 2020, 12:42 IST
ಬಿ.ಶ್ರೀರಾಮುಲು
ಬಿ.ಶ್ರೀರಾಮುಲು   

ಚಿತ್ರದುರ್ಗ: ‘ಕೋವಿಡ್‌–19’ ಚಿಕಿತ್ಸೆಗೆ ಸ್ಥಾಪಿಸಿದ ಪ್ರತ್ಯೇಕ ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ಪರಿಕರಗಳನ್ನು ಕೂಡಲೇ ಖರೀದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದರು.

‘ಕೋವಿಡ್‌–19’ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಮನ್ವಯತೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಕೋವಿಡ್‌–19 ಚಿಕಿತ್ಸೆಗೆ ಸ್ಥಾಪಿಸಿದ ಆಸ್ಪತ್ರೆಗೆ ಅಗತ್ಯವಿರುವ ವೆಂಟಿಲೇಟರ್‌, ವೈಯಕ್ತಿಕ ಸುರಕ್ಷತಾ ಉಪಕರಣ (ಪಿಪಿಇ) ಕಿಟ್‌ ಖರೀದಿಸಬೇಕು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸ್ಯಾನಿಟೈಸರ್‌, ಎನ್‌95 ಮಾಸ್ಕ್‌ ಹಾಗೂ ಆಮ್ಲಜನಕ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಆದೇಶ ನೀಡಿದರು.

ADVERTISEMENT

ಜಿಲ್ಲಾಧಿಕಾರಿ ಆರ್‌.ವಿನೋತ್ ಪ್ರಿಯಾ, ‘ಜಿಲ್ಲಾ ಆಸ್ಪತ್ರೆ ಆವರಣದ ನೂತನ ಕಟ್ಟಡವನ್ನು ಕೋವಿಡ್‌–19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿದೆ. ಆಸ್ಪತ್ರೆಗೆ ₹ 58 ಲಕ್ಷ ಅನುದಾನ ಮೀಸಲಿಡಲಾಗಿದೆ. ₹ 26 ಲಕ್ಷ ವೆಚ್ಚದಲ್ಲಿ ಪರಿಕರ ಖರೀದಿ ಮಾಡಲಾಗುತ್ತಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ, ‘ಕೊರೊನಾ ಸೋಂಕು ನಿಯಂತ್ರಣಕ್ಕೆ ಕ್ಷಿಪ್ರ ಸ್ಪಂದನೆ ತಂಡ ರಚಿಸಲಾಗಿದೆ. ಹೊರಗಿನಿಂದ ಬಂದವರನ್ನು ಗುರುತಿಸಿ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಭೀಮಸಮುದ್ರದಲ್ಲಿ ಕೋವಿಡ್‌–19 ಪ್ರಕರಣ ದೃಢಪಟ್ಟಿದ್ದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದ ಸುತ್ತ ಐದು ಕಿ.ಮೀ ವ್ಯಾಪ್ತಿಯನ್ನು ರೆಡ್‌ ಅಲರ್ಟ್‌ ವಲಯವೆಂದು ಪರಿಗಣಿಸಲಾಗಿದೆ’ ಎಂದು ಹೇಳಿದರು.

ಪಡಿತರ ಹಂಚಿಕೆಗೆ ಸೂಚನೆ:‘ಎಲ್ಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಹಂಚಿಕೆಯನ್ನು ನಿಗಧಿತ ಅವಧಿಯಲ್ಲಿ ಕೈಗೊಳ್ಳಬೇಕು. ಒಟಿಪಿ ಸಮಸ್ಯೆಯ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಕಾರ್ಡ್ ಇಲ್ಲದವರಿಗೂ ಪಡಿತರ ವಿತರಣೆ ಮಾಡಬೇಕು. ಉದ್ಯೋಗವಿಲ್ಲದೇ ಅತಂತ್ರರಾಗಿರುವ ಕಾರ್ಮಿಕರಿಗೆ ನೆರವಾಗಬೇಕು’ ಎಂದು ಸಚಿವರು ಸೂಚನೆ ನೀಡಿದರು.

‘ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಒದಗಿಸಬೇಕು. ಹಣ್ಣು, ತರಕಾರಿ ಸೇರಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ಅಡಚಣೆ ಆಗಬಾರದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಹೊನ್ನಾಂಬ, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಇದ್ದರು.

₹ 71 ಕೋಟಿ ಪರಿಹಾರ:ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆ ಸುರಿಯದೇ ತೊಂದರೆ ಅನುಭವಿಸಿದ ರೈತರಿಗೆ ಫಸಲ್‌ ಬಿಮಾ ಯೋಜನೆಯ ವಿಮೆ ಸೌಲಭ್ಯ ಸಿಕ್ಕಿದೆ. ಜಿಲ್ಲೆಯ 52,214 ರೈತರಿಗೆ ₹ 71.23 ಕೋಟಿ ಪರಿಹಾರ ಬಂದಿದ್ದು, ರೈತರ ಖಾತೆಗೆ ಜಮಾ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮಾಹಿತಿ ನೀಡಿದರು.

‘2019ರ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಮುಂಗಾರು ಮಳೆ ಸುರಿದಿರಲಿಲ್ಲ. ಹೀಗಾಗಿ, ಬಿತ್ತನೆ ಕಾರ್ಯ ವಿಳಂಬವಾಗಿತ್ತು. ಬಿತ್ತನೆ ಸಂದರ್ಭದಲ್ಲಿ ಮಳೆ ಸುರಿಯದೇ ಇದ್ದರೆ ಶೇ 25ರಷ್ಟು ಪರಿಹಾರ ನೀಡಲು ಫಸಲ್‌ ಬಿಮಾ ಯೋಜನೆಯಲ್ಲಿ ಅವಕಾಶವಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ’ ಎಂದರು.

ಚಳ್ಳಕೆರೆಯ 22,799 ರೈತರಿಗೆ ₹ 40 ಕೋಟಿ, ಚಿತ್ರದುರ್ಗದ 7,258 ರೈತರಿಗೆ ₹ 10.18 ಕೋಟಿ, ಹಿರಿಯೂರು ತಾಲ್ಲೂಕಿನ 4,251 ರೈತರಿಗೆ ₹ 7 ಕೋಟಿ, ಹೊಸದುರ್ಗ ತಾಲ್ಲೂಕು 10,430 ರೈತರಿಗೆ ₹ 5 ಕೋಟಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 5,839 ರೈತರಿಗೆ ₹ 8.87 ಕೋಟಿ ವಿಮಾ ಪರಿಹಾರ ಬಿಡುಗಡೆಯಾಗಿದೆ. ಇನ್ನೂ 1,637 ರೈತರಿಗೆ ₹ 2.15 ಕೋಟಿ ಪರಿಹಾರ ಬಿಡುಗಡೆಯಾಗಬೇಕಾಗಿದೆ.

ಪರೋಕ್ಷ ಸಂಪರ್ಕಿತರ ಪರೀಕ್ಷೆ

ಕೋವಿಡ್-19 ಪೀಡಿತರೊಂದಿಗೆ ಪರೋಕ್ಷ ಸಂಪರ್ಕ ಹೊಂದಿದ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

‘ಈವರೆಗೆ ಕೋವಿಡ್-19 ಪೀಡಿತರ ನೇರ ಸಂಪರ್ಕ ಹೊಂದಿದವರ ಗಂಟಲು ದ್ರವ ಮತ್ತು ರಕ್ತದ ಮಾದರಿಗಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಪರೋಕ್ಷ ಸಂಪರ್ಕ ಹೊಂದಿದವರ ಮೇಲೆ ನಿಗಾ ಇಡಲಾಗುತ್ತಿತ್ತು. ಈಗ ಅನುಮಾನ ಇರುವ ಪ್ರತಿಯೊಬ್ಬರ ಆರೋಗ್ಯ ಪರೀಕ್ಷೆಗೆ ಇಲಾಖೆ ಸಜ್ಜಾಗಿದೆ’ ಎಂದರು.

‘ಕೊರೊನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿತ್ತು. ಈಗ ದೇಶದಲ್ಲಿ 12ನೇ ಸ್ಥಾನದಲ್ಲಿದ್ದು, ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎಂಬ ಸೂಚನೆ ಸಿಕ್ಕಿದೆ’ ಎಂದು ಹೇಳಿದರು.

‘ಕೋವಿಡ್- 19 ಸೋಂಕು ಪತ್ತೆಹಚ್ಚಲು ರಾಜ್ಯದಲ್ಲಿ 16 ಪ್ರಯೋಗಾಲಯಗಳಿವೆ. ಅಗತ್ಯ ಬಿದ್ದರೆ ಮತ್ತಷ್ಟು ಪ್ರಯೋಗಾಲಯ ತೆರೆಯುತ್ತೇವೆ. ಎನ್95 ಮಾಸ್ಕ್ ಪ್ರತಿಯೊಬ್ಬರೂ ಬಳಸುವ ಅಗತ್ಯ ಇಲ್ಲ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಮಾತ್ರ ಬಳಸಿದರೆ ಸಾಕು. ಉಳಿದವರು ಬಟ್ಟೆಯ ಮಾಸ್ಕ್ ಬಳಸಿ’ ಎಂದು ಸಲಹೆ ನೀಡಿದರು.

ಅನುದಾನಕ್ಕೆ ಡಿಸಿ–ಎಸ್‌ಪಿ ಹಗ್ಗಜಗ್ಗಾಟ

‘ಕೋವಿಡ್‌–19’ರ ಅಂಗವಾಗಿ ತುರ್ತು ಕಾರ್ಯಗಳಿಗೆ ಸರ್ಕಾರ ಮಂಜೂರು ಮಾಡಿದ ಅನುದಾನದ ಹಂಚಿಕೆಯ ವಿಚಾರದಲ್ಲಿ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ನಡುವೆ ಹಗ್ಗಜಗ್ಗಾಟ ನಡೆಯಿತು.

‘ಆಂಧ್ರಪ್ರದೇಶ ಹಾಗೂ ಹೊರ ಜಿಲ್ಲೆ ಸಂಪರ್ಕಿಸುವ ಎಲ್ಲ ಗಡಿಗಳನ್ನು ಬಂದ್ ಮಾಡಲಾಗಿದ್ದು, 32 ಚೆಕ್ ಪೋಸ್ಟ್‌ ಸ್ಥಾಪಿಸಲಾಗಿದೆ. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಅಗತ್ಯ ಇರುವ 30 ವಾಹನ, 65 ಮೆಗಾ ಫೋನ್, 120 ಟಾರ್ಚ್ ಹಾಗೂ 600 ಬ್ಯಾರಿಕೇಡ್‍ ವ್ಯವಸ್ಥೆ ಮಾಡಬೇಕಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಸಚಿವರ ಗಮನ ಸೆಳೆದರು.

ಇದಕ್ಕೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಆಕ್ಷೇಪ ವ್ಯಕ್ತಪಡಿಸಿದರು. ‘ಬ್ಯಾರಿಕೇಡ್‌ಗಳನ್ನು ಇಲಾಖೆಯ ಅನುದಾನದಲ್ಲಿ ರೂಪಿಸಿಕೊಳ್ಳಬೇಕೆ ಹೊರತು, ತುರ್ತುನಿಧಿ ಕೇಳಬಾರದು’ ಎಂದು ಅಭಿಪ್ರಾಯಪಟ್ಟರು. ಮುಖ್ಯ ಕಾರ್ಯದರ್ಶಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚಿಸಿದ ಸಚಿವ ಶ್ರೀರಾಮುಲು, ಪೊಲೀಸ್‌ ಇಲಾಖೆ ಅಗತ್ಯ ಪೂರೈಸಲು ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.