
ಹೊಳಲ್ಕೆರೆ: ಕ್ರಮಬದ್ಧ ಆಹಾರ ಪದ್ಧತಿ ಮತ್ತು ವಿಚಾರಗಳ ಶುದ್ಧತೆಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ರಂಗಾಪುರ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಯೋಗಗುರು ತಿಪ್ಪಾರೆಡ್ಡಿ ಹೇಳಿದರು.
ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಮತ್ತು ಹರಪನಹಳ್ಳಿಯ ಜನನಿ ಯೋಗ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವೇ ಜೀವನದ ದೊಡ್ಡ ಸಂಪತ್ತು. ಈ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯ ಇದೆ. ಪಂಚಭೂತಗಳಿಂದ ಮಾಡಲ್ಪಟ್ಟ ಶರೀರಕ್ಕೆ ಅಸ್ವಸ್ಥತೆ ಉಂಟಾದಾಗ ಅದಕ್ಕೆ ಚಿಕಿತ್ಸೆಯೂ ಅದರಲ್ಲೇ ಅಡಗಿದೆ. ಯಾವುದೇ ಅಡ್ಡ ಪರಿಣಾಮಗಳು ಇಲ್ಲದ ಯೋಗ, ಪ್ರಕೃತಿ ಚಿಕಿತ್ಸೆಯ ಬಗ್ಗೆ ಜನರು ಒಲವು ಬೆಳೆಸಿಕೊಳ್ಳಬೇಕು. ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಒಂದೇ ನಾಣ್ಯದ ಎರಡು ಮುಖಗಳು. ಇದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ನಮ್ಮ ದೇಹ ಸದಾ ಚೈತನ್ಯದಿಂದ ಇರಬೇಕಾದರೆ ಪರಿಶುದ್ಧ ಆಹಾರ, ಗಾಳಿಯ ಜತೆಗೆ ಜೀವನಶೈಲಿ ಕೂಡಾ ಶುದ್ಧವಾಗಿರಬೇಕು ಎಂದರು.
‘ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಉತ್ತಮ ಭವಿಷ್ಯವಿದೆ. ಜೀವನದಲ್ಲಿ ಇದನ್ನು ಅಳವಡಿಸಿಕೊಂಡರೆ ಸಂತಸದ ಬದುಕು ನಮ್ಮದಾಗುತ್ತದೆ’ ಎಂದು ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಸಲಹೆ ನೀಡಿದರು.
ರೋಟರಿ ಕಾರ್ಯದರ್ಶಿ ಜಿ.ಎಂ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನರ್ ವೀಲ್ ಅಧ್ಯಕ್ಷೆ ಸುಮಾ ಸಂತೋಷ್, ಕಾರ್ಯದರ್ಶಿ ಅಮೃತಾ ಮಲ್ಲಿಕಾರ್ಜುನ್, ಎಸ್.ರುದ್ರಪ್ಪ, ಹೊಳಲಪ್ಪ, ಯೋಗ ಪ್ರಾಧ್ಯಾಪಕ ಜಯರಾಂ, ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ಸುದರ್ಶನ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.