
ಧರ್ಮಪುರ: ಆಂಧ್ರದಲ್ಲಿರುವ, ರಾಜ್ಯದ ಗಡಿಗೆ ಅಂಟಿಕೊಂಡಿರುವ ಸಮೀಪದ ಹೇಮಾವತಿಯ ಐತಿಹಾಸಿಕ ‘ಹೆಂಜೇರು ಸಿದ್ದೇಶ್ವರ ಸ್ವಾಮಿ’ ವಾರ್ಷಿಕ ಜಾತ್ರೆಗೆ ಸಕಲ ಸಿದ್ಧತೆಗಳು ಆರಂಭವಾಗಿವೆ.
ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ಭಕ್ತರ ಆರಾಧ್ಯದೈವ ಸಿದ್ದೇಶ್ವರಸ್ವಾಮಿ ಜಾತ್ರೆ ಫೆ. 15ರ ಮಹಾಶಿವರಾತ್ರಿ ದಿನದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರಾರಂಭವಾಗಲಿದೆ.
ಆಂಧ್ರಪ್ರದೇಶದ ಅಮರಾಪುರಂ ಮಂಡಲ್‌ನ ಹೇಮಾವತಿಯಲ್ಲಿ ಕ್ರಿ.ಶ. 7ನೇ ಶತಮಾನದಲ್ಲಿ ನೊಳಂಬ ವಂಶಸ್ಥರು ಇಲ್ಲಿ ರಾಜ್ಯ ಪ್ರತಿಷ್ಠಾಪನೆ ಮಾಡಿ ಹೆಂಜೇರನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದರು. ಅದೇ ಇಂದು ‘ಹೇಮಾವತಿ’ (ಬಂಗಾರ) ಪಟ್ಟಣವೆಂದು ಪ್ರಚಲಿತವಾಗಿದೆ.
ಮೇಲು–ಕೀಳು, ಮಡಿ– ಮೈಲಿಗೆಯನ್ನು ಮೀರಿ ಒಂದು ವಾರದವರೆಗೆ ನಡೆಯುವ ಜಾತ್ರೆಯು ಜನಪದ ಸಂಸ್ಕೃತಿಯ ವಿಶಿಷ್ಟ ಪ್ರಕಾರಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಭಕ್ತರು ದೇವತಾ ಕಾರ್ಯಗಳಲ್ಲಿ ಭಾಗಿಯಾಗುವುದು ವಿಶೇಷ.
ಜಾತ್ರೆಯ ಸಂದರ್ಭ ತಂಬಿಟ್ಟಿನ ಆರತಿ, ಸೂರು ಬೆಲ್ಲ, ಸೂರು ಮೆಣಸು, ಬೇವಿನಸೀರೆ ಉಡುವುದು, ಹರಕೆ ತೀರಿಸುವುದು, ಅಗ್ನಿಕೊಂಡ ಹಾಯುವುದು, ಆರತಿ ಬೆಳಗುವುದು, ಬಾಯಿಗೆ ಬೀಗ ಪದ್ಧತಿ, ರಥೋತ್ಸವದ ದಿನ ರಥಕ್ಕೆ ಬಾಳೆ ಹಣ್ಣು ಎಸೆಯುವುದು, ಉರುಳು ಸೇವೆ ಮತ್ತು ಸಿಡಿ ಮರ ಏರುವುದು ಜಾತ್ರೆಯ ವಿಶೇಷ. ವಿವಿಧ ಜಾನಪದ ಕಲಾ ತಂಡಗಳಿಂದ ನಡೆಯುವ ಕೋಲಾಟ, ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾತ್ರೆಯಲ್ಲಿ ಕಣ್ತುಂಬಿ ಕೊಳ್ಳಬಹುದು.
ಫೆ. 15ರಂದು ಮಹಾಶಿವರಾತ್ರಿ, ರುದ್ರಾಭಿಷೇಕ, ಅಖಂಡ ಪೂಜೆ, ಫೆ. 16ರಂದು ಭಾನು ಪಲ್ಲಕ್ಕಿ, ಫೆ. 17ರಂದು ಅಗ್ನಿಕುಂಡ, ಫೆ.18ರಂದು ಸಿಡಿಮಾನು ಉತ್ಸವ, ಫೆ. 19ರಂದು ಚಿಕ್ಕರಥೋತ್ಸವ, ಫೆ. 20ರಂದು ಬ್ರಹ್ಮರಥೋತ್ಸವ, ಫೆ. 21ರಂದು ವಸಂತೋತ್ಸವ, ಫೆ. 22ರಂದು ಶಯನೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಸಿದ್ದೇಶ್ವರಸ್ವಾಮಿ (ನೊಳಂಬೇಶ್ವರ) ದೇವಾಲಯದ ಆವರಣ 15 ಎಕರೆ ವಿಸ್ತೀರ್ಣದಲ್ಲಿದ್ದು, ದೊಡ್ಡೇಶ್ವರ, ಮತ್ತೀಶ್ವರ, ಚಿತ್ತೇಶ್ವರ ಹಾಗೂ ವಿರೂಪಾಕ್ಷೇಶ್ವರ ಸೇರಿದಂತೆ ಪಂಚ ದೇವಾಲಯಗಳಿವೆ. ನೊಳಂಬೇಶ್ವರ ದೇವಸ್ಥಾನವನ್ನು ನೊಳಂಬರು ರಾಜ್ಯ ಸ್ಥಾಪನೆಯ ಕಾಲದಲ್ಲಿ ಕಟ್ಟಿದ್ದರು. ಭಾರತ ಪ್ರಾಚ್ಯವಸ್ತು ಇಲಾಖೆಯವರು ಹೇಮಾವತಿಯಲ್ಲಿ ಕಳೆದ 30 ವರ್ಷಗಳಿಂದ ಭೂ ಉತ್ಖನನ ನಡೆಸಿ ನೂರಾರು ಶಿವಲಿಂಗಗಳು, ನಂದಿ ವಿಗ್ರಹಗಳು, ಏಕ ಶಿಲಾಮೂರ್ತಿಗಳು ಹಾಗೂ ಪ್ರಾಚ್ಯವಸ್ತುಗಳನ್ನು ಇಲ್ಲಿಯ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿದ್ದು, ಪ್ರತಿನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬಂದು ದರ್ಶನ ವೀಕ್ಷಿಸುತ್ತಾರೆ. ಕರ್ನಾಟಕ ವಾಸ್ತುಶಿಲ್ಪ ಪರಂಪರೆಯಲ್ಲಿ ನೊಳಂಬರ ಕೊಡುಗೆ ವಿಶಿಷ್ಠಸ್ಥಾನ ಪಡೆದಿದೆ.
ಹೇಮಾವತಿಯ ರಸ್ತೆಯ ಇಕ್ಕೆಲಗಳಲ್ಲಿ ಈಗಾಗಲೇ ಅಂಗಡಿಗಳು ಶುರುವಾಗಿದ್ದು, ಸುಡುವ ಬಿಸಿಲನ್ನು ಲೆಕ್ಕಿಸದೆ ವ್ಯಾಪಾರಸ್ಥರು ಖುಷಿಯಿಂದ ವ್ಯಾಪಾರದ ವಹಿವಾಟು ನಡೆಸಲು ಅಣಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.