ADVERTISEMENT

ಕೃಷಿ, ತೋಟಗಾರಿಕಾ ಮೇಳಕ್ಕೆ ಸಕಲ ಸಿದ್ಧತೆ

ಹಿರಿಯೂರು; ಕೃಷಿ ವಿಶ್ವಕೋಶದಂತಿರುವ ಬಬ್ಬೂರು ಫಾರಂನ ಕೃಷಿ ಸಂಶೋಧನಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 4:32 IST
Last Updated 13 ನವೆಂಬರ್ 2025, 4:32 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಿರ್ಮಿಸಿರುವ ಶತಮಾನೋತ್ಸವ ಭವನ
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಿರ್ಮಿಸಿರುವ ಶತಮಾನೋತ್ಸವ ಭವನ   

ಹಿರಿಯೂರು: 109 ವರ್ಷಗಳ ಇತಿಹಾಸ ಹೊಂದಿರುವ ತಾಲ್ಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನ. 14 ಮತ್ತು 15 ರಂದು ‘ಸಮಗ್ರ ಕೃಷಿ–ರೈತನ ಪ್ರಗತಿ’ ಶೀರ್ಷಿಕೆಯಡಿ ಕೃಷಿ ಮತ್ತು ತೋಟಗಾರಿಕಾ ಮೇಳ ಆಯೋಜನೆಯಾಗಿದ್ದು, ಸಕಲ ಸಿದ್ಧತೆ ನಡೆದಿದೆ.

‘ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಸಿಗಳ ಪ್ರದರ್ಶನ ಹಾಗೂ ಮಾರಾಟ, ಸಮಗ್ರ ಕೃಷಿ ಪದ್ಧತಿ, ಜೇನುವನ ಮತ್ತು ಕೀಟ ಪ್ರಪಂಚ, ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ತಾಂತ್ರಿಕತೆಗಳು, ಗೋಡಂಬಿ ಬೆಳೆಯ ಪ್ರಾತ್ಯಕ್ಷಿಕೆ, ಸಾವಯವ ಕೃಷಿ ಮತ್ತು ಅಣಬೆ ಬೇಸಾಯ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು, ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಪ್ರದರ್ಶನ, ರೇಷ್ಮೆ ಕೃಷಿ ತಂತ್ರಜ್ಞಾನ, ರೈತ ಉತ್ಪಾದಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಇರಲಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪರಶುರಾಮ ಚಂದ್ರವಂಶಿ ಮಾಹಿತಿ ನೀಡಿದ್ದಾರೆ.

‘ನ. 14 ರಂದು ಬೆಳಿಗ್ಗೆ 10.30ಕ್ಕೆ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಉದ್ಘಾಟಿಸಲಿದ್ದು, ತಾಂತ್ರಿಕ ಕೈಪಿಡಿಗಳನ್ನು ಶಾಸಕ ಬಿ.ಜಿ. ಗೋವಿಂದಪ್ಪ ಬಿಡುಗಡೆ ಮಾಡಲಿದ್ದಾರೆ. ಅತ್ಯುತ್ತಮ ಕೃಷಿ ಕಾರ್ಮಿಕರನ್ನು ಶಾಸಕ ಟಿ. ರಘುಮೂರ್ತಿ ಸನ್ಮಾನಿಸಲಿದ್ದಾರೆ. ಸಂಸದ ಗೋವಿಂದ ಕಾರಜೋಳ ಅವರು ವಸ್ತುಪ್ರದರ್ಶನ ಉದ್ಘಾಟಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಕೆಳದಿ ಶಿವಪ್ಪನಾಯಕ ವಿವಿಯ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಕೃಷಿ ಸಂಶೋಧನಾ ಕೇಂದ್ರ ನಡೆದು ಬಂದ ದಾರಿ:

1916ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಸಮಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಮಾರ್ಗದರ್ಶನದಲ್ಲಿ ಬಬ್ಬೂರು ಫಾರಂ ಕೃಷಿ ಸಂಶೋಧನಾ ಕೇಂದ್ರವನ್ನು ಕೃಷಿ ಇಲಾಖೆ ನಿರ್ದೇಶಕರಾಗಿದ್ದ ಎಲ್.ಜಿ. ಕೋಲ್ ಮನ್ ಸ್ಥಾಪಿಸಿದ್ದರು. 53 ಹೆಕ್ಟೇರ್ ಖುಷ್ಕಿ ಹಾಗೂ 35 ಹೆಕ್ಟೇರ್ ನೀರಾವರಿ ಭೂ ಪ್ರದೇಶದಲ್ಲಿರುವ ಸಂಶೋಧನಾ ಕೇಂದ್ರ 1965ರಲ್ಲಿ ಬೆಂಗಳೂರು ಕೃಷಿ ವಿವಿ ವ್ಯಾಪ್ತಿಗೆ ಸೇರಿತ್ತು.  

2003ರಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರವಾಗಿ ಉನ್ನತೀಕರಣಗೊಂಡು, 2009ರಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿತ್ತು. 2013ರಿಂದ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.