ADVERTISEMENT

ಹೊತ್ತಿ ಉರಿದ ಬಸ್‌, ಭಯಭೀತರಾದ ಜನ: 2 ಕಿ.ಮೀ.ವರೆಗೂ ಚಾಚಿದ ಬೆಂಕಿಯ ಜ್ವಾಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:58 IST
Last Updated 26 ಡಿಸೆಂಬರ್ 2025, 5:58 IST
ಖಾಸಗಿ ಬಸ್‌ ಹಾಗೂ ಕಂಟೇನರ್‌ ನಡುವೆ ಅಪಘಾತ ಸಂಭವಿಸಿದ ಜಾಗದ ನೋಟ
ಖಾಸಗಿ ಬಸ್‌ ಹಾಗೂ ಕಂಟೇನರ್‌ ನಡುವೆ ಅಪಘಾತ ಸಂಭವಿಸಿದ ಜಾಗದ ನೋಟ   

ಹಿರಿಯೂರು: ರಾಷ್ಟ್ರೀಯ ಹೆದ್ದಾರಿ– 48, ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ ಗುರುವಾರ ಬೆಳಗಿನ ಜಾವ ಕಂಟೇನರ್ ಹೊತ್ತಿ ಉರಿಯುತ್ತಿದ್ದರೆ ಸ್ಥಳೀಯರು ಭಯಭೀತರಾದರು. ನೋಡನೋಡುತ್ತಿದ್ದಂತೆ ಕರಕಲಾದ ಬಸ್‌ ನೋಡಿದ ಸ್ಥಳೀಯರು ಆತಂಕಗೊಂಡರು.

ಹರಿಯಾಣದ ಮೂಲದ ಕಂಟೇನರ್‌ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಲೇ ಘಟನೆ ಸಂಭವಿಸಿದ್ದು ಎದುರಿನಿಂದ ಬರುತ್ತಿದ್ದ ಸೀಬರ್ಡ್‌ ಸ್ಲೀಪರ್‌ ಬಸ್‌ಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣದಲ್ಲಿ ಬಸ್‌ ಸುಟ್ಟು ಕರಕಲಾಯಿತು. ಆ ಬೆಂಕಿನ ಕೆನ್ನಾಲಗೆಯಲ್ಲಿ ಬಸ್‌ನಲ್ಲಿದ್ದ ಐವರು ಸುಟ್ಟು ಕರಕಲಾದರು.

ಹೆದ್ದಾರಿಯಲ್ಲಿ ಬಸ್‌ ಉರಿಯುವಾಗಿ 2 ಕಿ.ಮೀ ವರೆಗೂ ಬೆಂಕಿಯ ಕೆನ್ನಾಲಗೆ ಚಾಚಿಕೊಂಡಿತ್ತು. ಬೆಳಕು ಹಾಗೂ ಹೊಗೆ ಬಹುದೂರದವರೆಗೆ ಕಾಣುತ್ತಿತ್ತು. ರಸ್ತೆ ಬದಿಯಲ್ಲಿದ್ದ ಹಳ್ಳಿಗಳ ಜನರು ಘಟನಾ ಸ್ಥಳಕ್ಕೆ ಓಡೋಡಿ ಬಂದರು. ಹೊತ್ತಿ ಉರಿಯುತ್ತಿದ್ದ ಬಸ್‌ನೊಳಗಿನ ಕಿರುಚಾಟವನ್ನು ಕಿವಿಯಾರೆ ಕೇಳಿಸಿಕೊಂಡರು. ಆದರೆ ಬೆಂಕಿಯ ಝಳಕ್ಕೆ ಯಾರನ್ನೂ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಬಸ್‌ನಿಂದ ಜಿಗಿದು ಬಂದವರನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.  

ADVERTISEMENT

ದುರಂತದ ಸುದ್ದಿ ತಿಳಿದ ತಕ್ಷಣ ಹಿರಿಯೂರು, ಶಿರಾ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮೊದಲಾದ ಕಡೆಗಳಿಂದ ದೌಡಾಯಿಸಿದ ಪೊಲೀಸರು, ಅಗ್ನಿ ಶಾಮಕ ದಳದವರು ಗಾಯಾಳುಗಳನ್ನು ಹಿರಿಯೂರು, ಶಿರಾ, ತುಮಕೂರು, ಚಿತ್ರದುರ್ಗದ ಆಸ್ಪತ್ರೆಗಳಿಗೆ ಕಳಿಸಿಕೊಟ್ಟರು. ಹಿರಿಯೂರು ಆಸ್ಪತ್ರೆಗೆ 12, ಶಿರಾ ಆಸ್ಪತ್ರೆಗೆ 9, ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಹಾಗೂ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ತಲಾ ಇಬ್ಬರನ್ನು ಚಿಕಿತ್ಸೆಗೆ ಕಳುಹಿಸಿದರು. 

ಪ್ರಯೋಜನಕ್ಕೆ ಬಾರದ ಆರೋಗ್ಯ ಕೇಂದ್ರ: ಜವನಗೊಂಡನಹಳ್ಳಿಯಲ್ಲಿ ಅಪಘಾತ ಸಂಭವಿಸಿದ ಸ್ಥಳದಿಂದ ಕೇವಲ 1 ಕಿ.ಮೀ. ದೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಗಾಯಾಳುಗಳ ಚಿಕಿತ್ಸೆಗೆ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿರುವ ಕಾರಣ ಜವನಗೊಂಡನಹಳ್ಳಿಯ ಆರೋಗ್ಯ ಕೇಂದ್ರವನ್ನು 24x7 ಆರೋಗ್ಯ ಕೇಂದ್ರವನ್ನಾಗಿಸುವಂತೆ ಸ್ಥಳೀಯರು ಹಲವು ವರ್ಷಗಳಿಂದ ಒತ್ತಾಯಿಸುತ್ತ ಬಂದಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಕಾರಜೋಳ ಭೇಟಿ: ಸಂಸದ ಗೋವಿಂದ ಕಾರಜೋಳ ಅವರು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ‘ಇಂತಹ ಅಪಘಾತಗಳನ್ನು ತಡೆಯಲು ಸಂಚಾರಿ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಬೇಕು’ ಎಂದು ಅವರು ಸಲಹೆ ನೀಡಿದರು. 

ಅಪಘಾತದ ನಂತರ ಮೃತದೇಹಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಹೆದ್ದಾರಿಯಲ್ಲಿದ್ದ ಬಸ್‌ ಹಾಗೂ ಕಂಟೇನರ್‌ ಅನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮಧ್ಯಾಹ್ನ 11 ಗಂಟೆಯಾದರೂ ರಸ್ತೆ ಬಂದ್ ಆಗಿತ್ತು. ಹಲವು ಗಂಟೆಗಳಿಂದಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೀಗಾಗಿ ವಾಹನ ಚಾಲಕರು ಪರದಾಡಬೇಕಾಯಿತು.

12 ಗಂಟೆ ವೇಳೆಗೆ ರಸ್ತೆಯನ್ನು ಸ್ವಚ್ಛಗೊಳಿಸಿ ಮಣ್ಣು, ಮರಳಿನಿಂದ ಸಮತಟ್ಟು ಮಾಡಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಯಿತು. ಆದರೂ ಮಧ್ಯಾಹ್ನದವರೆಗೂ ಟ್ರಾಫಿಕ್‌ ಜಾಮ್‌ ಮುಂದುವರಿದಿತ್ತು. ನೂರಾರು ಪೊಲೀಸರು ಹೆದ್ದಾರಿಯುದ್ದಕ್ಕೂ ವಾಹನ ಸಂಚಾರ ನಿರ್ವಹಣೆಯಲ್ಲಿ ತೊಡಗಿದ್ದರು. ವಾಹನ ಸಂಚಾರ ಆರಂಭವಾದರೂ ಟೋಲ್‌ ಸಂಗ್ರಹ ಪ್ಲಾಜಾ ಬಳಿ ಟ್ರಾಫಿಕ್‌ ಜಾಮ್‌ ಮುಂದುವರಿದಿತ್ತು.

ಸುಟ್ಟು ಕರಕಲಾದರೂ ಹೊಗೆಯಾಡುತ್ತಲೇ ಇದ್ದ ಖಾಸಗಿ ಬಸ್‌

ನಿಯಂತ್ರಣಕ್ಕೆ ಬಾರದ ಬಸ್‌

ಚಾಲಕ ಸೀಬರ್ಡ್‌ ಬಸ್‌ ಚಾಲಕ ರಫೀಕ್‌ ಸುದ್ದಿಗಾರರ ಜೊತೆ ಮಾತನಾಡಿ ‘ಅತಿ ವೇಗದಿಂದ ಬಂದ ಕಂಟೇನರ್‌ ಡಿವೈಡರ್‌ ದಾಟಿ ಬಸ್‌ನತ್ತ ಬರುವಾಗ ನಾನು ಬಸ್‌ ನಿಯಂತ್ರಿಸಲು ಪ್ರಯತ್ನಿಸಿದೆ. ಆದರೆ ನಿಯಂತ್ರಣ ಸಾಧ್ಯವಾಗಲಿಲ್ಲ. ಬ್ರೇಕ್‌ ಹಾಕಿದೊಡನೆ ಬಸ್‌ ರಸ್ತೆಗೆ ಅಡ್ಡಲಾಗಿ ನಿಂತಿತು. ಇದರಿಂದ ಕಂಟೇನರ್‌ ನೇರವಾಗಿ ಡೀಸೆಲ್‌ ಟ್ಯಾಂಕ್‌ ಬಳಿಯೇ ಡಿಕ್ಕಿ ಹೊಡೆಯಿತು. ಇದರಿಂದ ಬೆಂಕಿ ಕಾಣಿಸಿಕೊಂಡಿತು’ ಎಂದು ತಿಳಿಸಿದರು. ‘ಕೂಡಲೇ ಬೆಂಕಿ ಹೊತ್ತಿಕೊಂಡ ಕಾರಣ ಗೊಂದಲಕ್ಕೀಡಾದೆವು. ರಕ್ಷಣೆ ಮಾಡುವುದಕ್ಕೂ ಸಾಧ್ಯವಾಗಲಿಲ್ಲ. ಬಸ್‌ನ ಮುಂಬದಿಯಲ್ಲಿದ್ದರು ತಪ್ಪಿಸಿಕೊಂಡು ಬರಲು ಸಾಧ್ಯವಾಗಲಿಲ್ಲ’ ಎಂದು ಅವರು ತಿಳಿಸಿದರು.

ಹೆದ್ದಾರಿಯಲ್ಲಿ ನಿಯಮ ಪಾಲನೆ ಇಲ್ಲ: ಆಕ್ರೋಶ

ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಸಂಚಾರ ನಿಯಮ ಪಾಲನೆ ಮಾಡುತ್ತಿಲ್ಲ. ಜವನಗೊಂಡನಹಳ್ಳಿ ಭಾಗದಲ್ಲಿ ನಿತ್ಯವೂ ನಾವು ಅಪಘಾತವನ್ನೇ ನೋಡುವುದಾಗಿದೆ. ರಸ್ತೆ ನಿಯಮ ಪಾಲನೆ ಮಾಡುವಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ರಸ್ತೆ ಬದಿಯಲ್ಲಿ ವಾಸಿಸುವ ಜನರು ಜೀವ ಕೈಯಲ್ಲಿಡಿದು ಬದುಕು ನಡೆಸಬೇಕಾಗಿದೆ. ಇಂತಹ ಘಟನೆಗಳು ನಡೆದಾಗಿ ನಾವು ತೀವ್ರ ಆತಕಂಕ್ಕೆ ಒಳಗಾಗುತ್ತೇವೆ. ಈಗಲಾದರೂ ಪೊಲೀಸರು ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮ ಅನುಸರಿಯಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.